ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಮಳೆ ದೇವರು ಇಗ್ಗುತ್ತಪ್ಪ: ಮಳೆಗಾಲದಲ್ಲೂ ಮಳೆಗಾಗಿ ಪ್ರಾರ್ಥನೆ

Published 27 ಆಗಸ್ಟ್ 2023, 7:45 IST
Last Updated 27 ಆಗಸ್ಟ್ 2023, 7:45 IST
ಅಕ್ಷರ ಗಾತ್ರ

ನಾಪೋಕ್ಲು: ‘ಮಳೆಯಿಲ್ಲದೇ ಜಿಲ್ಲೆಯ ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆ ಸುರಿಸಿ ಜಿಲ್ಲೆ ಸುಭಿಕ್ಷವಾಗುವಂತೆ ಆಶೀರ್ವದಿಸು’-ಹೀಗೊಂದು ಪ್ರಾರ್ಥನೆಯನ್ನು ಭಕ್ತರು ಸಲ್ಲಿಸುವ ಜಿಲ್ಲೆಯ ಪ್ರಮುಖ ದೇವಾಲಯ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯ.

ಕಾಫಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಬೇಸಿಗೆಯಲ್ಲಿ ಮೊದಲ ಮಳೆ ಸಮಯಕ್ಕೆ ಸರಿಯಾಗಿ ಆಗದಿದ್ದಾಗ ಭಕ್ತರು ಈ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ವರ್ಷ ನಡು ಮಳೆಗಾಲದ ಅವಧಿಯಲ್ಲೂ ಮಳೆಯ ಕೊರತೆಯಿಂದಾಗಿ ಭಕ್ತರು ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕೊಡಗಿನ ಮಾತೆಯಾಗಿ ಕಾವೇರಿ ಖ್ಯಾತಿ ಪಡೆದಿದ್ದರೆ, ಆರಾಧ್ಯದೈವವಾಗಿ ಇಗ್ಗುತ್ತಪ್ಪ ಕೊಡಗಿನ ಜನತೆಯ ಮನಮಂದಿರದಲ್ಲಿ ನೆಲೆಸಿದ್ದಾರೆ. ಪಾಡಿ ಇಗ್ಗುತ್ತಪ್ಪನಿಗೆ ಮಳೆ ದೇವರು ಎಂಬ ಖ್ಯಾತಿ. ಕೊಡಗಿನಲ್ಲಿ ಕೃಷಿಯನ್ನೇ ನಂಬಿ ಬದುಕುವ ಮಂದಿ ಮಳೆಗಾಗಿ ಪಾಡಿಯ ಇಗ್ಗುತ್ತಪ್ಪನನ್ನು ಪ್ರಾರ್ಥಿಸುತ್ತಾರೆ. ಮಳೆ ಹೆಚ್ಚಾಗಿ ಕೃಷಿ ಕಾರ್ಯಗಳಿಗೆ ಧಕ್ಕೆಯುಂಟಾಗುವ ಸೂಚನೆ ಕಂಡುಬಂದರೆ ಮಳೆ ಕಡಿಮೆಗೊಳಿಸಲೂ ಇವರಿಗೇ ಪ್ರಾರ್ಥನೆ. ಕೊಡಗಿನ ಈ ಮಳೆ ದೇವರಿಗೆ ಭವ್ಯ ಸೂರೊಂದನ್ನು ಬಹಳ ಹಿಂದೆಯೇ ನಿರ್ಮಿಸಲಾಗಿದ್ದು, ಅದು ಪಾಡಿ ಇಗ್ಗುತ್ತಪ್ಪ ದೇವಾಲಯವೆಂದೇ ಪ್ರಸಿದ್ಧಿ ಪಡೆದಿದೆ. ಕೊಡಗಿನ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಈ ದೇವಾಲಯಕ್ಕೆ ಅಗ್ರಸ್ಥಾನ.

ಕ್ರಿ.ಶ 1810ರಲ್ಲಿ ಕೊಡಗನ್ನಾಳುತ್ತಿದ್ದ ಅರಸ ಲಿಂಗರಾಜೇಂದ್ರ ತನ್ನ ಸೈನಿಕರೊಂದಿಗೆ ನಾಪೋಕ್ಲು ಎಂಬ ಊರಿಗೆ ಬೇಟೆಗಾಗಿ ಬಂದಿದ್ದರು. ತಾನು ಬೇಟೆಯಾಡಿದ ಪಾಡಿಯಲ್ಲಿ ಇಗ್ಗುತ್ತಪನಿಗೊಂದು ಭವ್ಯ ಸೂರನ್ನು ನಿರ್ಮಿಸಿದರು. ಬೇಟೆಯ ಸಂದರ್ಭದಲ್ಲಿ ತಾನು ತೋರಿದ ಪರಾಕ್ರಮದ ಕುರುಹಾಗಿ ಬೆಳ್ಳಿಯ ಆನೆಯೊಂದನ್ನು ದೇವಾಲಯಕ್ಕೆ ದಾನವಾಗಿ ನೀಡಿರುವ ಐತಿಹ್ಯವಿದೆ.

ಈ ಧಾರ್ಮಿಕ ತಾಣಕ್ಕೆ ತೆರಳುವ ಪ್ರವಾಸಿಗರು ಬೆಳ್ಳಿಯ ಆನೆಯನ್ನು ಅದರ ಬೆನ್ನ ಮೇಲೆ ಅರಸ ಬರೆಸಿದ ಶಾಸನವನ್ನು ವೀಕ್ಷಿಸಬಹುದು. ಈ ದೇವಾಲಯದ ಗರ್ಭ ಗೃಹವು ಚೌಕವಾಗಿದ್ದು, ಒಳಗೆ ಪ್ರಾಚೀನ ಪಾಣಿಪೀಠದ ಮೇಲೆ ಇಗ್ಗುತ್ತಪ್ಪನ ಶಿಲಾವಿಗ್ರಹವಿದೆ. ಬಲಬದಿಯಲ್ಲಿ ಶಾಸನವಿರುವ ಬೆಳ್ಳಿಯ ಆನೆ ಹಾಗೂ ಎಡಬದಿಯಲ್ಲಿ ಇಗ್ಗುತ್ತಪ್ಪನ ಉತ್ಸವಮೂರ್ತಿಯಿದೆ.

ಮೂಲವಿಗ್ರಹಕ್ಕೆ ಅತ್ಯಂತ ಸೂಕ್ಷ್ಮ ಕೆತ್ತನೆಯುಳ್ಳ ಬೆಳ್ಳಿಯ ಪ್ರಭಾವಳಿ ಹಾಗೂ ಅದರ ಮೇಲ್ಭಾಗದಲ್ಲಿ ತನ್ನ ಐದು ಹೆಡೆ ಎತ್ತಿರುವ ಸುಂದರ ನಾಗಶಿಲ್ಪದ ಕೆತ್ತನೆಯಿದೆ. ಪಾಣಿಪೀಠದ ಮೂಲಭಾಗದಲ್ಲಿ ಹಂಸ ಹಾಗೂ ಹೂಬಳ್ಳಿಗಳ ಕೆತ್ತನೆಯ ಸುಂದರ ಅಲಂಕಾರವಿರುವ ಬೆಳ್ಳಿಯ ತಗಡಿನ ಕವಚವು ಆಕರ್ಷಕವಾಗಿದೆ. ಈ ಸುಂದರ ದೇವಾಲಯವು ಅಪ್ಪಾರಂಡ ಬೋಪು ಎಂಬ ಅಧಿಕಾರಿಯಿಂದ ಕ್ರಿ.ಶ 1834-35ರ ಅವಧಿಯಲ್ಲಿ ನವೀಕರಿಸಲಾಗಿದ್ದು, ಅದೇ ಸಂದರ್ಭದಲ್ಲಿ ಗೋಪುರಕ್ಕೆ ಸುವರ್ಣ ಕಲಶವನ್ನು ಮಾಡಿಸಿದ ಬಗೆಗೆ ಉಲ್ಲೇಖವಿದೆ.

ಇಲ್ಲಿನ ಕಲ್ಲಡ್ಚ ಹಬ್ಬ ಪ್ರಸಿದ್ದ. ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಈ ಹಬ್ಬ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತದೆ. ಹಬ್ಬದ ಸಂದರ್ಭದಲ್ಲಿ ಇಗ್ಗುತ್ತಪ್ಪನ ಕೃಪೆಯಿಂದ ತಕ್ಕಷ್ಟು ಮಳೆಯೂ ಆಗುತ್ತದೆ. ಇಗ್ಗುತ್ತಪ್ಪ ಸನ್ನಿಧಿ ಮಳೆದೇವರ ನೆಲೆ, ಸುಬ್ರಹ್ಮಣ್ಯ ಬೆಟ್ಟ ಮೊದಲಾದ ಹೆಸರುಗಳಿಂದ ಕರೆಯಲಾಗುವ ಪಾಡಿ ಇಗ್ಗುತ್ತಪ್ಪನ ದೇಗುಲ ಕಲೆ, ಪ್ರಕೃತಿ ಸೌಂದರ್ಯಗಳಿಂದ ಪ್ರಕೃತಿ ಪ್ರಿಯರನ್ನೂ, ಭಕ್ತರನ್ನೂ ಕೈಬೀಸಿ ಕರೆಯುತ್ತದೆ. ಕಣ್ಮನ ಸೆಳೆಯುತ್ತದೆ.

ದೇವಾಲಯಕ್ಕೆ ದಾನವಾಗಿ ಅರಸ ನೀಡಿದ ಬೆಳ್ಳಿಯ ಆನೆ
ದೇವಾಲಯಕ್ಕೆ ದಾನವಾಗಿ ಅರಸ ನೀಡಿದ ಬೆಳ್ಳಿಯ ಆನೆ
ಇಗ್ಗುತ್ತಪ್ಪ ದೇವರ ವಿಗ್ರಹ
ಇಗ್ಗುತ್ತಪ್ಪ ದೇವರ ವಿಗ್ರಹ
1810ರಲ್ಲಿ ನಿರ್ಮಾಣವಾದ ದೇಗುಲ ದೇಗುಲದಲ್ಲಿದೆ ಅರಸರು ನೀಡಿದ ಬೆಳ್ಳಿಯ ಆನೆ  ಮೂಲವಿಗ್ರಹದಲ್ಲಿದೇ ಸೂಕ್ಷ್ಮ ಕೆತ್ತನೆ
ಇತರೆಡೆಯೂ ಇಗ್ಗುತ್ತಪ್ಪ ದೇವಾಲಯ
ಕಕ್ಕಬ್ಬೆಯ ಇಗ್ಗುತ್ತಪ್ಪ ದೇವಾಲಯ ಜಿಲ್ಲೆಯ ಪ್ರಸಿದ್ಧ ದೇವಾಲಯ. ನೆಲಜಿ ಮತ್ತು ಪೇರೂರು ಗ್ರಾಮಗಳಲ್ಲೂ ಇಗ್ಗುತ್ತಪ್ಪ ದೇವಾಲಯಗಳಿವೆ. ನೆಲಜಿ ಇಗ್ಗುತ್ತಪ್ಪ ಪೇರೂರು ಗ್ರಾಮದ ಪೆರ್ಮೆ ಬಲ್ಲತ್ತನಾಡು ಇಗ್ಗುತ್ತಪ್ಪ ಸೇರಿದಂತೆ ಈ ವ್ಯಾಪ್ತಿಯ ಒಟ್ಟು ಮೂರು ಇಗ್ಗುತ್ತಪ್ಪ ದೇವಾಲಯಗಳು ಭಕ್ತರ ನಂಬಿಕೆಯ ತಾಣಗಳಾಗಿವೆ. ಮೂರು ದೇವಾಲಯಗಳ ಭಕ್ತರು ಹಬ್ಬ ಹರಿದಿನಗಳಲ್ಲಿ ಒಂದುಗೂಡಿ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಸಮೀಪದ ಮಲ್ಮ ಬೆಟ್ಟದಲ್ಲಿ ವಿಶೇಷ ಆಚರಣೆಗಳನ್ನು ನಡೆಸುತ್ತಿರುವುದು ತಲೆತಲಾಂತರದಿಂದ ನಡೆದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT