ವಿರಾಜಪೇಟೆ: ‘ವಿರಾಜಪೇಟೆ ಕೊಡವ ಸಮಾಜದ ಶತಮಾನೋತ್ಸವ ಸಂಭ್ರಮಾಚರಣೆ ಸೆ. 23 ಮತ್ತು 24ರಂದು ನಡೆಯಲಿದೆ’ ಎಂದು ವಿರಾಜಪೇಟೆ ಕೊಡವ ಸಮಾಜದ ಕುಂಬೇರ ಎ.ಮನು ಕುಮಾರ್ ತಿಳಿಸಿದರು.
ಪಟ್ಟಣದ ಕೊಡವ ಸಮಾಜದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶತಮಾನೋತ್ಸವ ಅಂಗವಾಗಿ ತ್ರಿವೇಣಿ ಶಾಲೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕೊಡವ ಸಮಾಜವು 1921ರಲ್ಲಿ ಆರಂಭವಾಗಿದ್ದು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಕೊಡವ ಸಮಾಜ ನೂರು ವರ್ಷ ಪೂರೈಸುತ್ತಿರುವ ಸಂಭ್ರಮದಲ್ಲಿ ಎರಡು ದಿನ ಕ್ರೀಡಾ ಉತ್ಸವ, ಸಾಂಸ್ಕೃತಿಕ ಉತ್ಸವ, ಗಣ್ಯರ ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ‘ ಎಂದು ವಿವರಿಸಿದರು.
‘ಕಾರ್ಯಕ್ರಮದ ಮೊದಲ ದಿನ ಪಟ್ಟಣದ ಮಹಾಗಣಪತಿ ದೇವಾಲಯದ ಬಳಿಯಿಂದ ದೊಡ್ಡಟ್ಟಿ ಚೌಕಿ ಮಾರ್ಗವಾಗಿ ಅಪ್ಪಯ್ಯ ಸ್ವಾಮಿ ರಸ್ತೆಯ ಮೂಲಕ ಮೆರವಣಿಗೆಯ ಮೂಲಕ ಕೊಡವ ಸಮಾಜಕ್ಕೆ ಬರುವ ಕಾರ್ಯಕ್ರಮವಿದ್ದು, ಜನಾಂಗದವರು ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಬೇಕು’ ಎಂದರು.
ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ‘ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಪ್ರತಾಪಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.
ಕೊಡವ ಸಮಾಜದ ಮರಣ ನಿಧಿ ಕಾರ್ಯದರ್ಶಿ ಮಾದೇಯಂಡ ಸಂಪಿ ಪೂಣಚ್ಚ ಮಾತನಾಡಿ, ‘ಸೆ. 23ರಂದು ಕೊಡವ ಪದ್ಧತಿ ಆಚಾರ-ವಿಚಾರಗಳನ್ನು ತಿಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತ್ರಿವೇಣಿ ಶಾಲೆ, ಪೊಮ್ಮಕ್ಕಡ ಕೂಟ ಸೇರಿದಂತೆ ವಿವಿಧ ತಂಡಗಳು ನೀಡಲಿವೆ’ ಎಂದರು.
ಗೋಷ್ಠಿಯಲ್ಲಿ, ಕೊಡವ ಸಮಾಜದ ನಿರ್ದೇಶಕ ಚೇಮಿರ ಸಿ.ಅರ್ಜುನ್, ಬಾಚೀರ ಜಿ. ಜಗದೀಶ್, ತಾತಂಡ ಕಬೀರ್ ಗಣಪತಿ, ಪುಲಿಯಂಡ ಎ.ಪೊನ್ನಣ್ಣ, ನಿರ್ದೇಶಕಿರಾದ ಮೇರಿಯಂಡ ಗಾಯತ್ರಿ, ಚೋಕಂಡ ಪುಷ್ಪಾವತಿ, ಮುಲ್ಲೇಂಗಡ ಶೀಲಾ ಅಪ್ಪಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.