ನಾಪೋಕ್ಲು: ಮಧ್ಯಾಹ್ನದವರೆಗೆ ಸುರಿದ ಮಳೆ.. ಬಳಿಕ ಕಾಣಿಸಿಕೊಂಡ ಬಿಸಿಲು.. ತುಂತುರು ಮಳೆಯ ನಡುವೆ ಗ್ರಾಮೀಣ ಜನರ ಸಂಭ್ರಮ ಮುಗಿಲುಮುಟ್ಟಿತು.
ವಿವಿಧ ವಯೋಮಾನದವರಿಗೆ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ಹತ್ತಾರು ಮಂದಿ ಓಡಿ ಗುರಿ ಸೇರಿದರು. ಓಡಲಾರದ ವಯಸ್ಕರು ನಿಧಾನ ನಡಿಗೆಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು. ಓಟದ ಸ್ಪರ್ಧೆಗಳು, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಕಲ್ಲು ಎಸೆತ, ಕಾಳು ಹೆಕ್ಕುವುದು, ನಿಂಬೆ-ಚಮಚ ಓಟ, ಹಗ್ಗಜಗ್ಗಾಟ ಸೇರಿದಂತೆ ಹತ್ತಾರು ಗ್ರಾಮೀಣ ಆಟೋಟಗಳು ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ಮಂಗಳವಾರ ಜರುಗಿದವು.
ಮಕ್ಕಳು, ಹಿರಿಯರಾದಿಯಾಗಿ ಅಧಿಕ ಸಂಖ್ಯೆಯ ಗ್ರಾಮೀಣ ಮಂದಿ ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ವಿವಿಧ ಸ್ಪರ್ಧೆಗಳ ಬಳಿಕ ಏರ್ಪಡಿಸಲಾಗಿದ್ದ ‘ವಾಲಗತ್ತಾಟ್’ ಹಬ್ಬಕ್ಕೆ ಮತ್ತಷ್ಟೂ ಕಳೆ ನೀಡಿತು.
ಮಳೆಗಾಲದ ಅವಧಿಯಲ್ಲಿ ಹಬ್ಬ-ಹರಿದಿನಗಳಿಂದ ದೂರವೇ ಉಳಿದ ಜಿಲ್ಲೆಯಲ್ಲಿ ದೇಸಿ ಕ್ರೀಡೆಗಳಿಗೆ ಮಹತ್ವ ನೀಡಲಾಯಿತು. ಸಾಂಪ್ರದಾಯಿಕ ಹಬ್ಬವಾದ ಕೈಲ್ ಮುಹೂರ್ತ ಹಬ್ಬದಲ್ಲಿ ಗುರಿ ಪರೀಕ್ಷಿಸುವ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಎಲ್ಲೆಡೆ ನಡೆದವು. ಮಕ್ಕಳಿಗೆ, ಮಹಿಳೆಯರಿಗೆ ಓಟದ ಸ್ಪರ್ಧೆ, ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ನಿಂಬೆ-ಚಮಚ ಓಟ, ಭಾರದ ಕಲ್ಲು ಎಸೆತ, ಗೋಣಿ ಚೀಲ ಓಟ...ಮುಂತಾದ ದೇಸಿ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಹಿರಿಯರಿಗೆ ಬೈಕ್ ಮತ್ತು ಸೈಕಲ್ ಮಂದಗತಿಯ ಚಾಲನೆ ಸ್ಪರ್ಧೆ ಆಯೋಜಿಸಲಾಗಿತ್ತು.
ನಾಪೋಕ್ಲು ಭಗವತಿ ಯುವಕ ಸಂಘದ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ, ಬೇತು ಗ್ರಾಮದ ಶ್ರೀಮಕ್ಕಿ ಶಾಸ್ತಾವು ಯುವಕ ಸಂಘದ ಆಶ್ರಯದಲ್ಲಿ ಬೇತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ, ಬಲ್ಲಮಾವಟಿ ಗ್ರಾಮದ ಅಪೋಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಕ್ರೀಡಾಕೂಟಗಳು ಜರುಗಿದವು.
ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟಿರ ದೇವಯ್ಯ ಮಾತನಾಡಿ, ‘ಕೈಲ್ ಪೋಳ್ದ್ ಕೃಷಿ ಚಟುವಟಿಕೆಗಳಿಗೆ ವಿರಾಮ ನೀಡಿ ಆಟೋಟಗಳ ಮೂಲಕ ಗ್ರಾಮೀಣ ಜನರ ಸಾಮರಸ್ಯವನ್ನು ಬೆಸೆಯುವ ಹಬ್ಬ’ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ ಅರುಣ್, ನಿವೃತ್ತ ಜೆಸಿಓ ಕಂಗಾಂಡ ರೋಹನ್ ಈರಪ್ಪ ಪಾಲ್ಗೊಂಡಿದ್ದರು.
ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ಆಶ್ರಯದಲ್ಲಿ ನಡೆದ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಯೂತ್ ಕ್ಲಬ್ ಅಧ್ಯಕ್ಷ ಕಾಳೆಯಂಡ ರಿನೇಶ್ ಪೊನ್ನಪ್ಪ ವಹಿಸಿದ್ದರು. ವಿವೃತ್ತ ಎಸ್ಪಿ ಬೊಳ್ಯೆಪಂಡ ರವಿ ಮಾಚಯ್ಯ, ಕಾಫಿ ಬೆಳೆಗಾರ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ ಪಾಲ್ಗೊಂಡಿದ್ದರು.
ಬಲ್ಲಮಾವಟಿ ಗ್ರಾಮದ ಅಪೋಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಆಟೋಟಕೂಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಾಟಿರ ಕೆ.ಸುತನ್ ಸುಬ್ಬಯ್ಯ, ಶಿಕ್ಷಕಿ ಮೂವೇರ ಕಾವೇರಮ್ಮ ಪಾಲ್ಗೊಂಡಿದ್ದರು. ಆಟೋಟಗಳ ಬಳಿಕ ರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಅಪ್ಪಚೆಟ್ಟೋಳಂಡ ಬಿ. ಹರ್ಷಿತ್ ಐಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.
ಎಲ್ಲೆಡೆ ಮನರಂಜನಾ ಹಬ್ಬ ಕೈಲ್ ಪೊಳ್ದ್ ಗೆ ಆಟೋಟಗಳು ಕಳೆ ನೀಡಿದವು. ನಾಲ್ಕುನಾಡು ವ್ಯಾಪ್ತಿಯಲ್ಲಿ ವ್ಯವಸಾಯದ ಸಂದರ್ಭದಲ್ಲಿ ಸಿಂಹ ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಕನ್ನಿಕೋಂಬರೆಯಲ್ಲಿ ಇಡಲಾಗಿತ್ತು. ಕೈಲ್‌ಪೋಳ್ದ್ ಆಚರಣೆಯ ಹಿನ್ನೆಲೆಯಲ್ಲಿ ಭತ್ತದ ಕೃಷಿ ಕಾರ್ಯ ಮುಗಿಸಿ ಆಯುಧಗಳಿಗೆ ಮಂಗಳವಾರ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯಾದ್ಯಂತ ಸೆಪ್ಟಂಬರ್ 3 ರಂದು ಕೈಲ್ ಪೋಳ್ದ್ ಆಚರಣೆ ನಡೆಯಲಿದೆ.
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ
ಕೈಲ್ ಮುಹೂರ್ತದಂದು ಎಲ್ಲೆಡೆ ತಪ್ಪದೇ ನಡೆಸುವ ಆಟೋಟಗಳಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಪ್ರಮುಖವಾದುದು. ಇದು ಯುವಜನರಿಗಾಗಿ ಹಿರಿಯರಿಗಾಗಿ ನಡೆಸುವ ಗುರಿ ಪರೀಕ್ಷಿಸುವ ಸ್ಪರ್ಧೆ. ದೂರದ ಮರವೊಂದಲ್ಲಿ ತೆಂಗಿನಕಾಯಿಯನ್ನು ಕಟ್ಟಿ ಅದಕ್ಕೆ ದೂರದಿಂದ ಗುರಿಯಿಟ್ಟು ಹೊಡೆಯುವ ಸ್ಪರ್ಧೆ ಆಕರ್ಷಣೀಯ. ಈ ಸ್ಪರ್ಧೆ ತಾಸುಗಟ್ಟಲೆ ನಡೆದು ಬಳಿಕ ತೆಂಗಿನಕಾಯಿಗೆ ಗುರಿ ಇಟ್ಟು ಹೊಡೆದು ಭಾಗಮಾಡಿದವರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಈ ಸ್ಪರ್ಧೆಯು ಇತ್ತೀಚೆಗೆ ಜನಪ್ರಿಯಗೊಂಡಿದ್ದು ಕೈಲ್ ಮುಹೂರ್ತ ಮಾತ್ರವಲ್ಲ ಬೇಸಿಗೆಯ ಅವಧಿಯಲ್ಲೂ ದೊಡ್ಡ ಮಟ್ಟದ ಸ್ಪರ್ಧೆಯನ್ನಾಗಿ ಆಯೋಜಿಸಲಾಗುತ್ತಿದೆ. 0.22 ಮತ್ತು 12 ಬೋರ್ ಸ್ಪರ್ಧೆಗಳು ಜನಪ್ರಿಯ. ಬೇತು ಗ್ರಾಮದಲ್ಲಿ ಮಂಗಳವಾರ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ವಿವೃತ್ತ ಎಸ್ಪಿ ಬೊಳ್ಯೆಪಂಡ ರವಿ ಮಾಚಯ್ಯ ಉದ್ಗಾಟಿಸಿದರು. ಸ್ಪರ್ಧೆಯಲ್ಲಿ ಬೊಳ್ಯಪಂಡ ಜಾನ್ ಪೂಣಚ್ಚ ಪ್ರಥಮ ಸ್ಥಾನ ಗಳಿಸಿದರು. ಕಾಳಚಂಡ ಹರ್ಷ ಉತ್ತಯ್ಯ ದ್ವಿತೀಯ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.