ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ವೈದ್ಯರು, ಸಿಬ್ಬಂದಿ ಕೊರತೆ; ಬಸವಳಿದ ಆಯುಷ್ ಆಸ್ಪತ್ರೆ

ತುರ್ತಾಗಿ ಆಗಬೇಕಿದೆ ಆಸ್ಪತ್ರೆಗೆ ಕಾಯಂ ವೈದ್ಯರ, ಸಿಬ್ಬಂದಿಯ ನೇಮಕಾತಿ
Published : 30 ಆಗಸ್ಟ್ 2024, 5:18 IST
Last Updated : 30 ಆಗಸ್ಟ್ 2024, 5:18 IST
ಫಾಲೋ ಮಾಡಿ
Comments

ಸೋಮವಾರಪೇಟೆ: ಆಯುಷ್ ಇಲಾಖೆ ವ್ಯಾಪ‍್ತಿಗೆ ಬರುವ ಇಲ್ಲಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯಲ್ಲಿ ಒಂದೇ ಸೂರಿನಡಿ ಹಲವು ಚಿಕಿತ್ಸೆಗಳು ಸಿಗುವ ಅವಕಾಶವಿದ್ದರೂ, ಕಾಯಂ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಈ ಚಿಕಿತ್ಸೆಗಳು ಸಂಪೂರ್ಣ ರೋಗಿಗಳಿಗೆ ತಲು‍ಪುತ್ತಿಲ್ಲ. ಕೂಡಲೇ ರೋಗಿಗಳಿಗೆ ತಕ್ಕಷ್ಟು ವೈದ್ಯರು ಹಾಗೂ ಸಿಬ್ಬಂದಿಯ ನೇಮಕಾತಿ ಆಗಬೇಕು ಎಂದು ಜನರು ಒತ್ತಾಯಿಸುತ್ತಾರೆ.

ಇಲ್ಲಿನ ಆಸ್ಪತ್ರೆಗೆ ಗ್ರಾಮೀಣ ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಮತ್ತು ಶುಕ್ರವಾರ ಮಾತ್ರ ಹೋಮಿಯೋಪತಿ ವೈದ್ಯರು ಇದ್ದರೆ, ಬುಧವಾರ ಮತ್ತು ಶುಕ್ರವಾರ ಹೊರತುಪಡಿಸಿ 4 ದಿನಗಳು ಮಾತ್ರ ಆಯುರ್ವೇದ ವೈದ್ಯರು ಸಿಗುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಅವರು ಬರುವ ದಿನ ವೈದ್ಯರು ರಜೆ ಇದ್ದಲ್ಲಿ ರೋಗಿಗಳು ಆಸ್ಪತ್ರೆಗೆ ಬಂದು ಹಿಂದಿರುಗಬೇಕಾಗಿರುವುದು ಸಮಸ್ಯೆಯಾಗಿದೆ ಎಂದು ಕಿರಗಂದೂರು ಗ್ರಾಮದ ರಕ್ಷಿತ್ ತಿಳಿಸಿದರು.

ಈಗ ಇಲ್ಲಿ ನ್ಯಾಚುರೋಪತಿ, ಯೋಗಾಸನ, ಪಂಚಕರ್ಮ, ಕಟಿಬಸ್ತಿಗಳೊಂದಿಗೆ ಹಲವು ಚಿಕಿತ್ಸೆಗಳಿವೆ. ವೈದ್ಯರ ಕೊರತೆ ನಡುವೆಯೂ ಪ್ರತಿ ದಿನ 50 ರಿಂದ 60 ಜನರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಕಾಯಂ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದೆ, ಸಿಎಸ್ಎಸ್ ಯೋಜನೆಯಲ್ಲಿ ಆಯುರ್ವೇದಿಕ್ ಮತ್ತು ಹೋಮಿಯೋಪತಿ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ನ್ಯಾಚುರೋಪತಿ ವೈದ್ಯರು ವಾರಕ್ಕೆ 2 ದಿನ ಮಾತ್ರ ಜಿಲ್ಲಾಸ್ಪತ್ರೆಯಿಂದ ಇಲ್ಲಿಗೆ ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಉಳಿದಂತೆ, ಸಿಬ್ಬಂದಿಗಳನ್ನು ಹೊ‌ರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ.

‘ಆಯುಷ್ ಇಲಾಖೆಯಲ್ಲಿ ಚಿಕತ್ಸೆ ಪಡೆದಲ್ಲಿ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ಇಲ್ಲಿಗೆ ಕಳೆದ ಹಲವಾರು ವರ್ಷಗಳಿಂದ ಬರುತ್ತಿದ್ದೇವೆ. ಇಲ್ಲಿ ವಾರದ ಕೆಲವು ದಿನಗಳು ಹಾಗೂ ಶನಿವಾರ ಮತ್ತು ಭಾನುವಾರ ವೈದ್ಯರೇ ಇರುವುದಿಲ್ಲ. ಇಲ್ಲಿ ವೈದ್ಯರು ಪ್ರತಿ ದಿನ ಸಿಗುವಂತಾದಲ್ಲಿ ಹೆಚ್ಚಿನ ಅನುಕೂಲವಾಗುವುದು, ನನ್ನಷ್ಟು ಜನರು ಆಸ್ಪತ್ರೆಯ ಪ್ರಯೋಜನ ಪಡೆಯಲು ಸಾಧ್ಯ’ ಎಂದು ಕರ್ಕಳ್ಳಿ ಗ್ರಾಮದ ವನಜ ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವಾರದಲ್ಲಿ ಬುಧವಾರ ಮತ್ತು ಶುಕ್ರವಾರ ಆಸ್ಪತ್ರೆಗೆ ಬಂದು ಚಿಕಿತ್ಸೆ ಸಲ್ಲಿಸುತ್ತಿದ್ದೇನೆ. ಬಂದ ದಿನ ಸುಮಾರು 25 ರಿಂದ 30 ಹೊರ ರೋಗಿಗಳು ಬರುವುದರಿಂದ ಅವರ ವೈದ್ಯಕೀಯ ತಪಾಸಣೆ ಮಾಡುವುದರೊಂದಿಗೆ, ಆಸ್ಪತ್ರೆಯ ಆಡಳಿತಾತ್ಮಕ ಕೆಲಸವನ್ನು ಮಾಡಬೇಕಿರುವುದರಿಂದ ಕಷ್ಟವಾಗುತ್ತಿದೆ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಪಿ.ಜಿ.ಅರುಣ್ ತಿಳಿಸಿದರು.

ಈ ಆಸ್ಪತ್ರೆಯಲ್ಲಿ ಪ್ರತಿ ದಿನ ಯೋಗ ತರಬೇತಿ, ಪಂಚಕರ್ಮ, ಕಟಿಬಸ್ತಿ, ಫಿಸಿಯೋಥೆರಪಿ, ಆಕ್ಯೂಪ್ರೆಶರ್ ಚಿಕಿತ್ಸೆ ಹೈಟೆಕ್ ವಾರ್ಡ್‌ಗಳಲ್ಲಿ ನೀಡಲಾಗುತ್ತಿದೆ. ದಿನ ಯೋಗ ಕಲಿಯಲು ಸಾಕಷ್ಟು ಜನರು ಬಂದು ಹೋಗುತ್ತಿದ್ದಾರೆ. ಅಲ್ಲದೆ, ಹೊರಗೂ ತೆರಳಿ ಯೋಗ ತರಬೇತಿ ನೀಡಲಾಗುತ್ತಿದೆ. ಆದರೆ, ಇನ್ನೂ ಹೆಚ್ಚಿನ ಜನರಿಗೆ ಇದರ ಬಗ್ಗೆ ಅರಿವಿಲ್ಲ. ಪೂರ್ಣ ಪ್ರಮಾಣದಲ್ಲಿ ವೈದ್ಯರನ್ನು ನೇಮಿಸಿ, ಅದಕ್ಕೆ ತಕ್ಕ ಸಿಬ್ಬಂದಿಗಳು ಬಂದಲ್ಲಿ ಸಾಕಷ್ಟು ಜನರಿಗೆ ಅನುಕೂಲವಾಗುವುದು ಎಂಬುದು ಹಲವರ ಆಭಿಪ್ರಾಯವಾಗಿದೆ.

ಆಸ್ಪತ್ರೆಯಲ್ಲಿ ಇಬ್ಬರು ಹೋಮಿಯೋಪತಿ ವೈದ್ಯರು, ಒಬ್ಬರು ನ್ಯಾಚುರೋಪತಿ ವೈದ್ಯರು ಇರಬೇಕಿದೆ. ಒಬ್ಬರು ಯುನಾನಿ ವೈದ್ಯರಿಬೇಕಿದ್ದರೂ, ಇಲ್ಲಿಯವರೆಗೆ ನೇಮಕವಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಶುಶ್ರೂಷಕರು 3, ಪ್ರಥಮ ದರ್ಜೆ ಸಹಾಯಕರು 2, ಔಷಧಿ ವಿತರಕರು 2 ಹಾಗೂ ಡಿ ಗ್ರೂಪ್ ನೌಕರರ 6 ಇರಬೇಕಿದ್ದು, ಅದರಲ್ಲಿ ಒಬ್ಬರು ಡಿ ಗ್ರೂಪ್ ನೌಕರರು ಹೊರತು ಪಡಿಸಿದಂತೆ ಉಳಿದ ಎಲ್ಲ ಹುದ್ದೆಗಳು ಖಾಲಿಯಾಗಿದ್ದು, ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.

ಈಗಾಗಲೇ ಆಯುಷ್ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದ್ದು ಮುಂದಿನ ಒಂದು ವಾರದಲ್ಲಿ ವೈದ್ಯರ ನೇಮಕವಾಗಲಿದೆ. ನಂತರ ಪ್ರತಿ ದಿನ ವೈದ್ಯರು ಆಸ್ಪತ್ರೆಯಲ್ಲಿ ಸಿಗಲಿದ್ದಾರೆ

-ರೇಣುಕಾದೇವಿ ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT