ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು | ಕುಟ್ಟ ಹೆದ್ದಾರಿ: ಲಘು ವಾಹನಕ್ಕೆ ಅನುಮತಿ

ಜು.27ರಿಂದ ಬಂದ್‌ ಆಗಿದ್ದ ರಸ್ತೆ; ಭಾರೀ ವಾಹನಕ್ಕೆ ಮುಂದುವರಿದ ನಿರ್ಬಂಧ
Published 31 ಆಗಸ್ಟ್ 2024, 6:45 IST
Last Updated 31 ಆಗಸ್ಟ್ 2024, 6:45 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಭಾರೀ ಮಳೆಯಿಂದ ಹಾನಿಯಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದ ಶ್ರೀಮಂಗಲ– ಕುಟ್ಟ ನಡುವಿನ ಅಂತರರಾಜ್ಯ ಹೆದ್ದಾರಿ ದುರಸ್ತಿಗೊಂಡಿದ್ದು ಲಘುವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಹೆದ್ದಾರಿಯು ಜು.26ರಂದು ಕುಸಿತಗೊಂಡಿದ್ದು ಜು.27ರಿಂದ ಭಾರೀ ವಾಹನ, ಬಸ್ ಸೇರಿದಂತೆ ಎಲ್ಲ ವಾಹನಗಳ ಓಡಾಟವನ್ನು ಲೋಕೋಪಯೋಗಿ ಇಲಾಖೆ ನಿಷೇಧಿಸಿಲಾಗಿತ್ತು.

ರಸ್ತೆ ಕುಸಿತ ಭಾಗದ ಇಳಿಜಾರು ಪ್ರದೇಶದಲ್ಲಿ ಮರಳು ಚೀಲಗಳನ್ನು ತಡೆಗೋಡೆಯಂತೆ ಪೇರಿಸಿ ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೊಂಡಿತ್ತು. ಇದೇ ಸಂದರ್ಭದಲ್ಲಿ ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದ್ದ ಮರಗಳನ್ನೂ ಪೊಲೀಸ್ ಇಲಾಖೆ ಸೂಚನೆ ಮೇರೆಗೆ ಕಡಿಯಲಾಗಿತ್ತು.

ನಾಲ್ಕು ಚಕ್ರದ ಲಘುವಾಹನಗಳಿಗೆ ಇಂದು ಓಡಾಟಕ್ಕೆ ಪ್ರಾಯೋಗಿಕವಾಗಿ ಅನುಮತಿ ನೀಡಲಾಗಿದೆ. ಸ್ಥಳೀಯ ವಾಹನಗಳಿಗೆ ತಾತ್ಕಾಲಿಕ ಅವಕಾಶ ಕಲ್ಪಿಸಲಾಗಿದ್ದರೂ ಅಂತರರಾಜ್ಯ ನೋಂದಣಿ ವಾಹನಗಳು, ಗೂಡ್ಸ್ ಆಟೋ, ಮಿನಿ ಟೆಂಪೋ, ಕಾರು, ಜೀಪುಗಳು ಇಂದು ಓಡಾಟ ಆರಂಭಿಸಿರುವುದು ಕಂಡುಬಂತು.

‘ತಾತ್ಕಾಲಿಕ ವ್ಯವಸ್ಥೆ ಮಾತ್ರ ಮಾಡಲಾಗಿದ್ದು, ಭಾರೀ ವಾಹನ ಓಡಾಟ ನಡೆಸಿ ರಸ್ತೆ ಕುಸಿತ ಉಂಟಾದಲ್ಲಿ ಮತ್ತೆ ರಸ್ತೆ ಬಂದ್ ಮಾಡಲಾಗುವುದು’ ಎಂದು ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲಿಂಗರಾಜ್ ಮಾಹಿತಿ ನೀಡಿದ್ದಾರೆ.

‘ಮಳೆಗಾಲದ ನಂತರ ರಸ್ತೆ ಕುಸಿಯದಂತೆ ಅಗತ್ಯ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗುವದು. ಭಾರೀ ವಾಹನಗಳು ಪೊನ್ನಂಪೇಟೆ ಕಾನೂರು ಮಾರ್ಗವಾಗಿ ಕುಟ್ಟ ಸಂಪರ್ಕಿಸಲು ಅವಕಾಶವಿದೆ. ಶ್ರೀಮಂಗಲ ಮೂಲಕ ಕುಮಟೂರು, ಕಾಕೂರು, ಹೇರ್ಮಾಡು ಮಾರ್ಗ ನಾಲ್ಕೇರಿ, ಕೇಂಬುಕೊಲ್ಲಿ ಮೂಲಕ ಕುಟ್ಟ ತಲುಪಲು ವಾಹನಗಳಿಗೆ ಅವಕಾಶವಿದೆ. ಮಳೆ ಬಿರುಸು ಕಡಿಮೆಯಾದಲ್ಲಿ ಹಂತ ಹಂತವಾಗಿ ಮಂಚಳ್ಳಿ ಮಾರ್ಗದಲ್ಲಿ ಭಾರೀ ವಾಹನಗಳ ಓಡಾಟಗಳಿಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ಹೇಳಿದರು

ಉದ್ಧೇಶಿತ ರಸ್ತೆಯಲ್ಲಿ ಏನೇ ಅಡಚಣೆ ಉಂಟಾದರೂ ಕೂಡಲೇ ಓಡಾಟ ಸ್ಥಗಿತಗೊಳಿಸಲಾಗುವದು. ಲಘವಾಹನವಲ್ಲದೆ ಭಾರೀ ವಾಹನ ಓಡಾಟ ನಡೆಸಿದರೆ ದಂಡ ವಿಧಿಸಲಾಗುವದು ಎಂದು ಕುಟ್ಟ ಪೊಲೀಸ್ ಉಪ ನಿರೀಕ್ಷಕ ಮಹಾದೇವ್ ತಿಳಿಸಿದ್ದಾರೆ.

‘ಕಾಡುಕಲ್ಲು ತಡೆಗೋಡೆ ನಿರ್ಮಿಸಿ’

ಹಲವು ವರ್ಷಗಳ ಹಿಂದೆ ಪೆರುಂಬಾಡಿ ಮಾಕುಟ್ಟ ರಸ್ತೆಯಲ್ಲಿ ಕೆರೆ ಒಡೆದು ರಸ್ತೆ ಸಂಪರ್ಕ ಕಡಿತಗೊಂಡಿತ್ತು.  ಅಂದು ಗೋಣಿಕೊಪ್ಪಲಿನ ವಿವಿಟಿ ಗುತ್ತಿಗೆದಾರರು ₹1 ಕೋಟಿ ವೆಚ್ಚದಲ್ಲಿ ಕೇರಳದ ಕಾರ್ಮಿಕರನ್ನು ಬಳಸಿಕೊಂಡು ಕಾಡು ಕಲ್ಲಿನ ತಡೆಗೋಡೆ ನಿರ್ಮಿಸಿದ್ದರು. ಅದರಿಂದ ಪೆರುಂಬಾಡಿ ಕೇರಳ ರಸ್ತೆಯಲ್ಲಿ ಸುಗಮ ಓಡಾಟ ಸಾಧ್ಯವಾಗಿದೆ. ಪ್ರಸ್ತುತ ಮಂಚಳ್ಳಿ ರಸ್ತೆ ಅಭಿವೃದ್ಧಿಯನ್ನೂ ಕಾಡುಕಲ್ಲು ತಡೆಗೋಡೆ ನಿರ್ಮಿಸುವ ಮೂಲಕ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT