ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ ಯೋಜನೆ: ಹೊಂದಾಣಿಕೆಯಾಗದ 'ಹೆಸರು', ಸಿಗದ ಸೌಲಭ್ಯ

ಆರ್‌ಟಿಸಿ, ಪಡಿತರ ಚೀಟಿ, ಆಧಾರ್‌ನಲ್ಲಿ ತಾಳೆಯಾಗದ ಹೆಸರು, 4 ಸಾವಿರ ರೈತರಿಗೆ ತೊಂದರೆ
Last Updated 5 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ಹಿಂದಿನ ಕಾಂಗ್ರೆಸ್‌– ಜೆಡಿಎಸ್‌ ‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ‘ಬೆಳೆ ಸಾಲ ಮನ್ನಾ ಯೋಜನೆ’ ಸೌಲಭ್ಯವು ಕೊಡಗು ಜಿಲ್ಲೆಯ ಅರ್ಹ ರೈತರಿಗೆ ಇನ್ನೂ ಕೈಸೇರಿಲ್ಲ. ಹೆಸರು ಹೊಂದಾಣಿಕೆಯ ಗೊಂದಲದಿಂದ ಅಂದಾಜು 4 ಸಾವಿರ ರೈತರು ಸಾಲ ಮನ್ನಾ ಯೋಜನೆ ಸೌಲಭ್ಯದಿಂದ ದೂರವೇ ಉಳಿದಿದ್ದಾರೆ. ಅವರೆಲ್ಲರೂ ಯೋಜನೆ ಸೌಲಭ್ಯ ಪಡೆಯಲು ಚಾತಕ ಪಕ್ಷಿಯಂತೆ ಕಾದಿದ್ದಾರೆ.

ಕೊಡವ, ಅರೆಭಾಷೆ, ಮುಸ್ಲಿಂ ಸೇರಿದಂತೆ ಮತ್ತಿತರ ಸಮುದಾಯಕ್ಕೆ ಸೇರಿದ ರೈತರದ್ದು ಹೆಸರು ಹೊಂದಾಣಿಕೆ ಆಗದಿರುವ ಕಾರಣಕ್ಕೆ ಸೌಲಭ್ಯ ಪಡೆಯಲು ಅಡ್ಡಿಯಾಗಿದೆ. ‘ನಾವೇ ನೈಜ ಸಾಲಗಾರರು’ ಎಂದರೂ ಸರ್ಕಾರದಿಂದ ಸಾಲ ಮನ್ನಾ ಸೌಲಭ್ಯ ಸಿಕ್ಕಿಲ್ಲ! ವಿರಾಜಪೇಟೆ ತಾಲ್ಲೂಕಿನ ಕೆದಮಳ್ಳೂರು ಕೃಷಿಪತ್ತಿನ ಸಹಕಾರ ಸಂಘವೊಂದರಲ್ಲೇ 111 ಮಂದಿ ರೈತರಿಗೆ ಈ ರೀತಿಯ ಸಮಸ್ಯೆ ಎದುರಾಗಿದೆ. ಒಂದು ಸಹಕಾರ ಸಂಘದ ಕತೆಯಲ್ಲ; ಜಿಲ್ಲೆಯ ಬಹುತೇಕ ಸಹಕಾರ ಸಂಘದ ವ್ಯಾಪ್ತಿಯಲ್ಲೂ ಈ ಸಮಸ್ಯೆ ಎದುರಾಗಿದ್ದು, ಯೋಜನೆ ಘೋಷಣೆಯಾಗಿ ವರ್ಷವಾದರೂ ಸಾಲ ಮನ್ನಾ ಆಗಿಲ್ಲ ಎಂಬ ನೋವು ಕೃಷಿಕರದ್ದು.

ಏನು ಸಮಸ್ಯೆ?: ಅರ್ಹರೇ ಆಗಿದ್ದರೂ, ಹೆಸರು ಹೊಂದಾಣಿಕೆ ಆಗಿಲ್ಲದ ಕಾರಣ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೆಲವು ಸಮುದಾಯದ ರೈತರು ತಮ್ಮ ಹೆಸರಿನೊಂದಿಗೆ ಕುಟುಂಬದ ಹೆಸರು, ತಂದೆಯ ಹೆಸರು ಸೇರಿಸಿಕೊಂಡಿರುವುದೇ ಸಮಸ್ಯೆಯಾಗಿದೆ. ಆಧಾರ್‌ ಕಾರ್ಡ್‌, ಆರ್‌ಟಿಸಿ ಹಾಗೂ ಪಡಿತರ ಚೀಟಿಯಲ್ಲಿ ಬೇರೆ ರೀತಿ ಹೆಸರಿರುವ ಕಾರಣಕ್ಕೆ ‘ಭೂಮಿ ತಂತ್ರಾಂಶ’ದಲ್ಲಿ ಇವರೇ ‘ಅರ್ಹ ಫಲಾನುಭವಿ’ ಎಂಬುದು ಗೊತ್ತಾಗುತ್ತಿಲ್ಲ.

‘ರೈತರೊಬ್ಬರದ್ದು ‘ಆಧಾರ್‌ ಕಾರ್ಡ್‌’ನಲ್ಲಿ ಬಿದ್ದಂಡ ಚಂಗಪ್ಪ ಎಂದಿದೆ. ‘ಆರ್‌ಟಿಸಿ’ಯಲ್ಲಿ ಬಿದ್ದಂಡ ಚಂಗಪ್ಪ ಆಗಿದ್ದರೆ, ಪಡಿತರ ಚೀಟಿಯಲ್ಲಿ ಬರೀ ಬಿ.ಎಂ.ಚಂಗಪ್ಪ ಎಂದಿದೆ. ಕೃಷಿ ಪತ್ತಿನ ಸಹಕಾರ ಸಂಘ ಸಾಲ ಮನ್ನಾ ಯೋಜನೆಯಲ್ಲಿ ಬಿ.ಎಂ.ಚಂಗಪ್ಪ ಎಂದು ನಮೂದಾಗಿದೆ. ಇವರೇ ಅರ್ಹ ರೈತರೆಂಬ ಅರಿವಿದ್ದರೂ ತಂತ್ರಾಂಶದಲ್ಲಿ ಒಂದೇ ರೀತಿಯ ಹೆಸರು ತೆಗೆದುಕೊಳ್ಳುವ ಕಾರಣಕ್ಕೆ ಸೌಲಭ್ಯ ಸಿಕ್ಕಿಲ್ಲ. ಈಗ ಎಲ್ಲ ದಾಖಲೆಗಳೂ ಒಂದಕ್ಕೊಂದು ಲಿಂಕ್‌ ಆಗಿರುತ್ತವೆ. ಹೆಸರು ಬೇರೆ ಬೇರೆ ರೀತಿಯಲ್ಲಿದ್ದರೆ ಅನನುಕೂಲವೇ ಹೆಚ್ಚು’ ಎಂದು ಸಹಕಾರ ಸಂಘದ ಇಒಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಹಶೀಲ್ದಾರ್‌ರಿಂದ ಪತ್ರ: ‘ಈ ರೀತಿಯ ಸಮಸ್ಯೆ ಪರಿಹಾರಕ್ಕೆ ತಹಶೀಲ್ದಾರ್‌ ಅವರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇವರೇ ಅರ್ಹ ರೈತ. ಹೆಸರಿನ ಗೊಂದಲ ಕಾರಣಕ್ಕೆ ಸಾಲ ಮನ್ನಾ ಆಗಿಲ್ಲ. ಆದರೆ, ಉಪ ಚುನಾವಣೆ ಮತ್ತಿತರ ಕಾರಣದಿಂದ ಯಾವುದೇ ಆದೇಶ ಬಂದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಮಾಹಿತಿ ನೀಡಿದರು.

ಶೇ 80 ಮನ್ನಾ: ‘ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ ಅಡಿ ಕೊಡಗಿನ ಶೇ 80 ರೈತರಿಗೆ ಸೌಲಭ್ಯ ಲಭಿಸಿದೆ. ಇನ್ನೂ 7,500 ಮಂದಿ ರೈತರ ₹ 58 ಕೋಟಿ ಸಾಲ ಮನ್ನಾವಾಗಬೇಕು. ಅದರ ನಿರೀಕ್ಷೆಯಲ್ಲಿದ್ದೇವೆ’ ಎಂದು ಡಿಸಿಸಿ ಬ್ಯಾಂಕ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎಷ್ಟು ಬಂದಿದೆ?: ‘ಜಿಲ್ಲೆಯಲ್ಲಿ ಇದುವರೆಗೂ 25 ಸಾವಿರ ರೈತರ, ₹ 198 ಕೋಟಿ ಸಾಲ ಮನ್ನಾವಾಗಿದೆ. ಹೆಸರು ಹೊಂದಾಣಿಕೆ ಆಗದ ರೈತರದ್ದು ತಾಲ್ಲೂಕು ಸಮಿತಿಯಲ್ಲಿ ಇವರೇ ‘ನೈಜ ಸಾಲಗಾರ’ನೆಂದು ತೀರ್ಮಾನಿಸಿ ಪತ್ರ ಬರೆಯಲಾಗಿದೆ. ಅದು ಸರ್ಕಾರ ಮಟ್ಟದಲ್ಲಿ ತೀರ್ಮಾನವಾಗಬೇಕು’ ಎಂದೂ ಅವರು ಮಾಹಿತಿ ನೀಡುತ್ತಾರೆ.

ಸರ್ಕಾರಿ ಉದ್ಯೋಗಸ್ಥರು, ತೆರಿಗೆ ಪಾವತಿದಾರರೂ ಅರ್ಜಿ!
‘ತೆರಿಗೆ ಪಾವತಿದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಕೃಷಿಕರು, ಸರ್ಕಾರಿ ಉದ್ಯೋದಲ್ಲಿ ಇರುವ ಮಂದಿ, ಒಂದೇ ಕುಟುಂಬದಲ್ಲಿದ್ದರೂ ಎರಡು ರೇಷನ್‌ ಕಾರ್ಡ್‌ ಪಡೆದವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಅವರೂ ಸಾಲ ಮನ್ನಾ ಸೌಲಭ್ಯ ಪಡೆಯಲು ಅರ್ಜಿ ಹಾಕಿದ್ದಾರೆ! ಉಳಿದಿರುವ 7,500 ರೈತರಲ್ಲಿ 3,000 ಮಂದಿ ಅನರ್ಹರಾಗುವ ಸಾಧ್ಯತೆಯಿದೆ. ಉಳಿದ 4,500 ರೈತರದ್ದು ಸಾಲ ಮನ್ನಾ ಆಗಲಿದೆ’ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT