ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ‌‌| ಹಿಂದಿನಷ್ಟು ವಹಿವಾಟಿಲ್ಲ, ಆದರೂ ನಿಲ್ಲಿಸಿಲ್ಲ

‘ಮಂಜಿನ ನಗರಿ’ ಮಡಿಕೇರಿಯ ಬಹುತೇಕ ವ್ಯಾಪಾರಸ್ಥರ ನೋವಿನ ನುಡಿ
Last Updated 20 ಮೇ 2020, 19:45 IST
ಅಕ್ಷರ ಗಾತ್ರ

ಮಡಿಕೇರಿ: ಲಾಕ್‌ಡೌನ್‌ ಬಳಿಕ ಎಲ್ಲರ ಬದುಕಿನಲ್ಲೂ ಬದಲಾವಣೆಯ ಬಿರುಗಾಳಿ ಬೀಸಿದೆ. ಅದರಲ್ಲೂ ವ್ಯಾಪಾರಸ್ಥರಿಗೆ ತುಂಬಲಾರದ ನಷ್ಟವುಂಟಾಗಿದೆ. ವ್ಯಾಪಾರ, ಕೃಷಿ, ಕೈಗಾರಿಕೆ, ಕಚೇರಿ ಕೆಲಸ... ಹೀಗೆ ಲಾಕ್‌ಡೌನ್‌ ನಿಯಮ ಸಡಿಲಿಕೆ ಮಾಡಿದ್ದರೂ, ಮೊದಲಿನಷ್ಟು ವ್ಯಾಪಾರ ಇಲ್ಲ ಎಂದು ದಿನಸಿ ಅಂಗಡಿ, ಬಟ್ಟೆ ವ್ಯಾಪಾರಿಗಳು, ಚಿನ್ನಾಭರಣ ಮಾರಾಟಗಾರರು, ಪಾದರಕ್ಷೆ ಮಾರಾಟಗಾರರು ನೋವಿನಿಂದ ನುಡಿಯುತ್ತಾರೆ.

‘ಲಾಭದ ಮಾತಿಲ್ಲ. ಆದರೂ ನಂಬಿದ ವ್ಯಾಪಾರ ಬಿಡಬಾರದೆಂದು ಅಂಗಡಿ ಬಾಗಿಲು ತೆರೆಯುತ್ತಿದ್ದೇವೆ’ ಎಂದು ಮಡಿಕೇರಿಯ ಪ್ರಮೋದ್‌ ಹೇಳುವಾಗ ಅವರ ಕಣ್ಣಂಚಿನಲ್ಲಿ ನೀರು ಜಿನಿಗಿತು.

ಬಹುತೇಕ ಶುಭ ಕಾರ್ಯಗಳು ಸ್ಥಗಿತಗೊಂಡಿರುವ ಕಾರಣಕ್ಕೆ ದಿನಸಿ ಸಾಮಗ್ರಿಗಳೂ ನಿರೀಕ್ಷಿತ ಮಟ್ಟದಲ್ಲಿ ಖರೀದಿಯಾಗುತ್ತಿಲ್ಲ. ಪ್ರವಾಸೋದ್ಯಮ ಸ್ತಬ್ಧವಾಗಿದ್ದು, ಹೋಮ್‌ಸ್ಟೇ ಹಾಗೂ ರೆಸಾರ್ಟ್‌ ಬಾಗಿಲು ಮುಚ್ಚಿವೆ. ಆದ್ದರಿಂದ ಅವರೂ ದಿನಸಿ ಖರೀದಿಸುತ್ತಿಲ್ಲ.

ಟೈಲರ್ ವೃತ್ತಿಗೂ ಕುತ್ತು:ಜಿಲ್ಲೆಗೆ ಸಹಜವಾಗಿ ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಳೆ ಪ್ರವೇಶಿಸುತ್ತದೆ. ಅದಕ್ಕೂ ಮೊದಲು ಅಂದರೆ ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಮದುವೆ ಹಾಗೂ ಗೃಹ ಪ್ರವೇಶದಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಲಾಕ್‌ಡೌನ್‌ನಿಂದ ಶುಭ ಕಾರ್ಯಗಳು ಸರಳವಾಗಿ ನಡೆಯುತ್ತಿವೆ. ಹೀಗಾಗಿ, ಟೈಲರ್‌ ದುಡಿಮೆಗೂ ಕುತ್ತು ಬಂದಿದೆ.

ಚಿನ್ನಾಭರಣ ವ್ಯಾಪಾರ: ಚಿನ್ನಾಭರಣದ ದರ ಏರಿಕೆಯಿಂದ ಗ್ರಾಹಕರು ಅತ್ತ ಸುಳಿಯುತ್ತಿಲ್ಲ. ಇನ್ನು ಸರಳ ಮದುವೆಯಿಂದ ಗ್ರಾಹಕರು ಚಿನ್ನಾಭರಣ ಖರೀದಿಗೂ ಆಸಕ್ತಿ ತೋರುತ್ತಿಲ್ಲ. 200 ಗ್ರಾಂ ಖರೀದಿಸುವ ಶಕ್ತಿಯಿದ್ದವರು ಇದೀಗ 100 ಗ್ರಾಂ ಚಿನ್ನಾಭರಣ ಸಾಕು ಎನ್ನುತ್ತಿದ್ದಾರೆ ಎಂದು ಚಿನ್ನಾಭರಣ ಮಾಲೀಕರು ಹೇಳಿದರು.

ಮೊಬೈಲ್‌ ಮಾರಾಟ, ಎಲೆಕ್ಟ್ರಾನಿಕ್‌ ಉಪಕರಣಗಳಾದ ಟಿ.ವಿ.ಫ್ರಿಜ್‌, ವಾಷಿಂಗ್‌ ಮಷಿನ್‌, ಫ್ಯಾನ್‌, ಮಿಕ್ಸರ್ ಖರೀದಿಯತ್ತಲೂ ಜನರು ಆಸಕ್ತಿ ತೋರುತ್ತಿಲ್ಲ. ಕೆಲವು ಅಂಗಡಿಗಳತ್ತ ಗ್ರಾಹಕರು ಸುಳಿಯುತ್ತಿಲ್ಲ.

ಜನರ ಬಳಿ ದುಡ್ಡು ಹರಿವಿನ ಪ್ರಮಾಣ ಕಡಿಮೆಯಿದೆ. ಕಾಫಿ ದರ ಏರಿದ್ದರೂ, ಬೆಳೆಯಿಲ್ಲದ ಸ್ಥಿತಿಯಿದೆ. ಇನ್ನು ಕಾಳು ಮೆಣಸಿನ ದರವೂ ಏರಿಕೆ ಕಂಡಿಲ್ಲ, ಹೀಗಾಗಿ, ದೊಡ್ಡ ವ್ಯವಹಾರಕ್ಕೆ ಜನರು ಮುಂದಾಗುತ್ತಿಲ್ಲ ಎಂದು ಕೂಡಿಗೆ ರೈತ ಶಂಕರ್‌ ಹೇಳಿದರು.

ಮದ್ಯಕ್ಕೂ ಬೇಡಿಕೆ ಇಲ್ಲ: ಜಿಲ್ಲೆಯು ಪ್ರವಾಸೋದ್ಯಮವನ್ನೇ ನಂಬಿದೆ. ಕಳೆದ ಮೂರು ತಿಂಗಳಿಂದ ಪ್ರವಾಸೋದ್ಯಮ ಸಂಪೂರ್ಣ ಸ್ತಬ್ಧವಾಗಿದೆ. ರೆಸಾರ್ಟ್‌ಗಳು ಬಾಗಿಲು ಮುಚ್ಚಿವೆ. ಇನ್ನೂ ಅಬಕಾರಿ ಸುಂಕ ಹೆಚ್ಚಳದಿಂದ ಮದ್ಯವನ್ನು ಗ್ರಾಹಕರೂ ಅಷ್ಟಾಗಿ ಖರೀದಿಸುತ್ತಿಲ್ಲ.

ಬೆಳಿಗ್ಗೆ 7ರಿಂದ ಸಂಜೆ 7ರ ತನಕ ಅಂಗಡಿ ತೆರೆಯಲು ಅವಕಾಶ
ಮಡಿಕೇರಿ:
ಈ ಹಿಂದಿನ ಲಾಕ್‍ಡೌನ್ ನಿಯಮದಂತೆ ಅಂಗಡಿಯ ಮಳಿಗೆಗಳನ್ನು ತೆರೆಯಲು ನೀಡಲಾಗಿದ್ದ ಸಮಯಾವಕಾಶವನ್ನು ಭಾಗಶಃ ಮಾರ್ಪಡಿಸಿ, ಸೋಮವಾರದಿಂದ ಶನಿವಾರದ ತನಕ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ. ಇದುವರೆಗೂ ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಮಾತ್ರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿತ್ತು.

ಅಂತರ ರಾಜ್ಯ ಗಡಿಭಾಗದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ರೀತಿಯ ಮದ್ಯದ ಅಂಗಡಿಗಳನ್ನು ಹೊರತುಪಡಿಸಿ, ಕಾರ್ಯಾಚರಿಸಲು ಅನುಮತಿಸಲಾದ ಮದ್ಯದ ಅಂಗಡಿಗಳನ್ನು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ತೆರೆಯಬಹುದು. ತುರ್ತು ಮತ್ತು ಅವಶ್ಯಕ ಸೇವೆಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ಚಟುವಟಿಕೆಗಳು, ಸಾರ್ವಜನಿಕ ಸಂಚಾರವನ್ನು ಭಾನುವಾರದಂದು ದಿನವಿಡೀ ಹಾಗೂ ವಾರದ ಎಲ್ಲಾ ದಿನಗಳಲ್ಲಿ ಸಂಜೆ 7ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಸೆಕ್ಷನ್ 144 ರಡಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT