ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದೇಶ, ಒಂದು ಚುನಾವಣೆ ಪ್ರಜಾಪ್ರಭುತ್ವ ನಾಶ ಮಾಡುವ ಹುನ್ನಾರ: ಮಹದೇವಪ್ಪ ಆರೋಪ

ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪ
Published 24 ಏಪ್ರಿಲ್ 2024, 4:24 IST
Last Updated 24 ಏಪ್ರಿಲ್ 2024, 4:24 IST
ಅಕ್ಷರ ಗಾತ್ರ

ಮಡಿಕೇರಿ: ‘ಒಂದು ದೇಶ, ಒಂದೇ ಚುನಾವಣೆ’ ಎಂಬ ಪರಿಕಲ್ಪನೆಯೇ ಸರ್ವಾಧಿಕಾರಿ ಆಡಳಿತಕ್ಕೆ ದ್ಯೋತಕ. ಇದು ಪ್ರಜಾಪ್ರಭುತ್ವ ನಾಶ ಮಾಡುವ ಹುನ್ನಾರ’ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಬುದ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಜಾಪ್ರಭುತ್ವವಾದಿಗಳು. ಸದ್ಯ, ಇರುವ ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲು ಕೋಮುಶಕ್ತಿಗಳು ಪ್ರಯತ್ನ ಮಾಡುತ್ತಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ‍್ರಪಂಚದಲ್ಲೇ ಅತಿ ಶ್ರೇಷ್ಠವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಇಂತಹ ಸಂವಿಧಾನಕ್ಕೆ ಕೋಮುವಾದ ಮತ್ತು ಬಿಜೆಪಿಯಿಂದ ಅಪಾಯ ಇದೆ ಎಂದು ಆರೋಪಿಸಿದರು.

ಬಿಜೆಪಿಯವರ ಆಡಳಿತದ ವೈಖರಿ ನೋಡಿದರೆ ಈ ಆರೋಪಕ್ಕೆ ಪುಷ್ಟಿ ದೊರೆಯುತ್ತದೆ. ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದೇ ಗುರಿ ಎಂದು ಆರ್‌ಎಸ್‌ಎಸ್‌ ಹೇಳುತ್ತದೆ. ಈ ಗುರಿಯೇ ಸಂವಿಧಾನ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು.

ಬಿಜೆಪಿ ಸಮಾವೇಶದಲ್ಲಿ ಕೇವಲ ಮೋದಿ, ಮೋದಿ ಎಂಬುದಷ್ಟೇ ಕೇಳಿ ಬರುತ್ತದೆ. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ ಮತ ಕೇಳದೇ ಕೇವಲ ಮೋದಿ ಅವರ ಹೆಸರನ್ನು ಹೇಳಿಯೇ ಮತಯಾಚಿಸುತ್ತಿದ್ದಾರೆ. ಈ ಬಗೆಯ ವ್ಯಕ್ತಿ ಪೂಜೆಗಳು ಸರ್ವಾಧಿಕಾರಿಯನ್ನು ನಿರ್ಮಾಣ ಮಾಡುತ್ತದೆ. ಈ ಸರ್ವಾಧಿಕಾರವು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಕೇವಲ ರಾಜಕೀಯದ ಕಾರಣಗಳಿಗೆ ಅಲ್ಲ. ಬಡವರು ಹಾಗೂ ಮಧ್ಯಮವರ್ಗದವರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು ಎಂದು ಅವರು ಸಮರ್ಥಿಸಿಕೊಂಡರು.

ಕೆಪಿಸಿಸಿ ಸದಸ್ಯ ನಂದಕುಮಾರ್ ಮಾತನಾಡಿ, ‘ಸಂವಿಧಾನ ಬದಲಾದರೆ ಮನುಸ್ಮೃತಿ ಜಾರಿಗೆ ಬರುತ್ತದೆ. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥಕುಮಾರ್, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ನಗರ ಘಟಕದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ, ಮುಖಂಡ ಕೆ.ಎನ್.ಲೋಕೇಶ್ ಭಾಗವಹಿಸಿದ್ದರು.

ತುಂಬಿ ತುಳುಕಿದ ಭವನ ಕಿಕ್ಕಿರಿದು ಸೇರಿದ್ದ ಜನಸಮೂಹ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ

ಬಿಜೆಪಿಗೆ 400 ಸೀಟ್ ಬಂದರೆ ಒಂದು ದೇಶ ಒಂದು ಚುನಾವಣೆ ಜಾರಿಗೆ ತರುತ್ತದೆ. ಇದು ಅಪಾಯಕಾರಿ. ನನಗೆ ಆಶೀರ್ವಾದ ಮಾಡಿದಂತೆ ಲಕ್ಷ್ಮಣ್‌ ಅವರಿಗೂ ಆಶೀರ್ವಾದ ಮಾಡಿ.

-ಡಾ.ಮಂತರ್‌ಗೌಡ ಶಾಸಕ.

ಬೂತ್ ಮಟ್ಟದಿಂದ ಕಾಂಗ್ರೆಸ್ ಬಿರುಸಿನ ಪ್ರಚಾರ ನಡೆಸಿದೆ. ಎಲ್ಲ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪರವಾದ ವಾತಾವರಣ ಇದೆ.

-ಧರ್ಮಜ ಉತ್ತಪ್ಪ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT