ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವೇಣಿ ಸಂಗಮದಲ್ಲೇ ಜಲಾಭಾವ!

ಮಳೆ ಕೊರತೆ: ಬರಿದಾಗುತ್ತಿವೆ ನದಿ, ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣ
Published 8 ಸೆಪ್ಟೆಂಬರ್ 2023, 5:19 IST
Last Updated 8 ಸೆಪ್ಟೆಂಬರ್ 2023, 5:19 IST
ಅಕ್ಷರ ಗಾತ್ರ

ನಾಪೋಕ್ಲು: ವರ್ಷಕ್ಕೆ ಕನಿಷ್ಠ 3 ಬಾರಿ ಮಳೆಗಾಲದಲ್ಲಿ ಪ್ರವಾಹ ರೂಪಿಣಿಯಾಗಿ ಹರಿಯುತ್ತಿದ್ದ ಕಾವೇರಿ ಈ ಬಾರಿ ಮುನಿಸಿಕೊಂಡಿದ್ದಾಳೆ.

ಜುಲೈ ತಿಂಗಳಲ್ಲಿ ಒಂದು ಬಾರಿ ಪ್ರವಾಹ ಉಂಟಾಗಿದ್ದು ಬಿಟ್ಟರೆ, ಮಳೆಗಾಲದ ಉಳಿದ ದಿನಗಳಲ್ಲಿ ಕಾವೇರಿ ನದಿ ತೀರಾ ಸೊರಗಿದೆ. ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಪುಣ್ಯಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ಜಲ ಅಭಾವ ಕಾಣಿಸಿಕೊಂಡಿದೆ.

ಕಾವೇರಿ, ಕನ್ನಿಕೆ, ಸುಜೋತಿ ನದಿಗಳ ಸಂಗಮದಲ್ಲಿ ತುಂಬಿ ಹರಿಯುತ್ತಿದ್ದ ನದಿ ಈಗ ನಿಧಾನ ಗತಿಯಲ್ಲಿ ಹರಿಯುತ್ತಿದೆ. ಮಳೆಯ ಕೊರತೆಯಿಂದ ಕಾವೇರಿ ಕ್ಷೇತ್ರದಲ್ಲಿ ನೀರಿಗೆ ಇಷ್ಟೊಂದು ಪ್ರಮಾಣದಲ್ಲಿ ಕೊರತೆ ಉಂಟಾಗಿರುವುದು ಇದೇ ಮೊದಲು. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ದಿನ ಕಳೆದಂತೆ ಬರಿದಾಗುತ್ತಿದೆ. ಸಂಗಮದಲ್ಲಿ ಸ್ನಾನಕ್ಕೆ ನೀರಿಲ್ಲದಂತಾಗಿದೆ. ಹರಿವ ನೀರಿಗೆ ತಡೆಯೊಡ್ಡಿ ಭಕ್ತರಿಗೆ ಸ್ನಾನಕ್ಕೆ ಸೌಕರ್ಯ ಕಲ್ಪಿಸಲಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ಜಲ ಮೂಲಗಳು ಉದ್ಭವವಾಗಿದ್ದು ಅವೂ ಬತ್ತುತ್ತಿವೆ. ಕೆಲವೆಡೆ ನಾಟಿ ಗದ್ದೆಗಳು ಒಣಗಿ ಗದ್ದೆ ಬಿರುಕು ಬಿಟ್ಟಿದೆ. ಇದರಿಂದಾಗಿ ಕಾವೇರಿ ನದಿತೀರದ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ.

‘ಇನ್ನು ಮಳೆಯಾದರೂ, ಜಲ ಉದ್ಭವಿಸುವುದು ಕನಸಿನ ಮಾತೇ ಸರಿ’ ಎಂದು ಹೇಳುತ್ತಾರೆ ಭಾಗಮಂಡಲ ದೇವಸ್ಥಾನದ ಪಾರುಪತ್ತೇಗಾರ ಕೊಂಡೀರ ಪೊನ್ನಣ್ಣ.

ಕಾವೇರಿ ನದಿ ಹರಿವಿನ ತಾಣಗಳಾದ ಭಾಗಮಂಡಲ, ಪುಲಿಕೋಟು, ಪಾಲೂರು, ನಾಪೋಕ್ಲು, ಬಲಮುರಿ, ಬೇತ್ರಿ ಸೇರಿದಂತೆ ಎಲ್ಲೆಡೆ ನೀರಿನ ಹರಿವು ತಗ್ಗಿದೆ. ನದಿ ಪಾತ್ರಗಳಲ್ಲಿನ ಗದ್ದೆಗಳು ಮಳೆಗಾಲದಲ್ಲೇ ಬತ್ತಿವೆ. ನದಿ ಹರಿವಿನ ತಾಣಗಳಲ್ಲಿ ಕಣ್ಣಾಡಿಸಿದರೆ ನದಿಗೆ ಪಂಪ್ ಅಳವಡಿಸಿ ನೀರು ಹರಿಸುತ್ತಿರುವ ದೃಶ್ಯಗಳು ಕಂಡು ಬರುತ್ತವೆ.

ಆಗಸ್ಟ್ ತಿಂಗಳಲ್ಲಿನ ಮಳೆಯ ಕೊರತೆಯಿಂದ ಪಾಲೂರು, ಬಲಮುರಿ, ಬೇತ್ರಿ ಮತ್ತಿತರ ಭಾಗಗಳಲ್ಲಿ ಕಾವೇರಿ ನೀರಿನ ಹರಿವು ಗಣನೀಯವಾಗಿ ತಗ್ಗಿದೆ. ಬೇಸಿಗೆಯಲ್ಲಿ ಕಾಫಿ ತೋಟಗಳಿಗೆ ನೀರು ಹಾಯಿಸುವಂತೆ ಮಳೆಗಾಲದಲ್ಲಿ ಗದ್ದೆಗಳಿಗೆ ನೀರು ಹರಿಸುವ ಪರಿಸ್ಥಿತಿ ಉದ್ಭವವಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಕೆಲವೆಡೆ ರೈತರು ನೀರು ಹಾಯಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಬುಧವಾರ ಒಂದಷ್ಟು ಮಳೆಯಾಗಿದ್ದು ರೈತರಲ್ಲಿ ಆಶಾಭಾವನೆ ಮೂಡಿದೆ. ಒಣಗಿದ ಗದ್ದೆಗಳಿಗೆ ನೀರಿನ ಸಿಂಚನ ಮಾಡಿದಂತಾಗಿದೆ. ಕಾಫಿಯ ತೋಟಗಳಿಗೆ ರಸಗೊಬ್ಬರ ಹಾಕಲು ರೈತರು ಉತ್ಸಾಹ ತೋರುವಂತಾಗಿದೆ.

‘ಜುಲೈ ತಿಂಗಳಲ್ಲಿ ಒಂದು ಬಾರಿ ಮಳೆ ಬಿರುಸುಗೊಂಡಿದ್ದು, ಬೇತ್ರಿ ಸೇತುವೆಯ ಅಂಚನ್ನು ತಲುಪಲು 2 ಅಡಿಗಳಷ್ಟು ಬಾಕಿ ಇತ್ತು. ಸೆಪ್ಟೆಂಬರ್ ಮೊದಲ ವಾರದಲ್ಲಿ ನದಿಯಲ್ಲಿ ಕೇವಲ 2 ಅಡಿಗಳಷ್ಟು ಮಾತ್ರ ನೀರಿದೆ. ಈಗಲೇ ಹೀಗಾದರೆ ಬೇಸಿಗೆ ಅವಧಿಯಲ್ಲಿ ಜಲಾಭಾವ ಕಾಡಲಿದೆ’ ಎಂದು ಕಿಗ್ಗಾಲು ಗ್ರಾಮದ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ವರ್ಷ ಈ ಅವಧಿಗೆ ಭಾಗಮಂಡಲಕ್ಕೆ 574 ಸೆಂ.ಮೀ ಮಳೆ ಆಗಿತ್ತು. ಈ ವರ್ಷ ಇದುವರೆಗೆ 270 ಸೆಂ.ಮೀ ಮಾತ್ರವೇ ಮಳೆ ಆಗಿದೆ. ಕಳೆದ ವರ್ಷ ಆಗಸ್ಟ್ ಒಂದೇ ತಿಂಗಳಲ್ಲಿ 202 ಸೆಂ.ಮೀ. ಮಳೆ ಸುರಿದಿತ್ತು. ಆದರೆ, ಈ ವರ್ಷ ಆಗಸ್ಟ್ ತಿಂಗಳಲ್ಲಿ ಮಳೆಯೇ ಸುರಿದಿಲ್ಲ. ಜೊತೆಗೆ ಬಿಸಿಲಿನ ಬೇಗೆ ಇರುವ ನೀರನ್ನೂ ಬತ್ತುವಂತೆ ಮಾಡಿದೆ ಎಂದು ಅವರು ಹೇಳಿದರು.

ಮಳೆಯ ಕೊರತೆಯಿಂದ ಮಳೆಗಾಲದಲ್ಲೇ ನದಿಯಲ್ಲಿ ನೀರು ತಳಮಟ್ಟಕ್ಕಿಳಿದಿದೆ. ಬೇಸಿಗೆಯಲ್ಲಿ ಕಾವೇರಿ ನದಿಯಿಂದ ಕಾಫಿಯ ತೋಟಗಳಿಗೆ ನೀರು ಹಾಯಿಸಿ ಇಳುವರಿ ಹೆಚ್ಚಿಸಿಕೊಳ್ಳುತ್ತಿದ್ದ ನದಿತಟದ ಬೆಳೆಗಾರರು ಈ ಬಾರಿ ವರುಣನ ಕೃಪೆಗೆ ಕಾದುಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಲಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ
ಬೇತ್ರಿಯಲ್ಲಿ ಕಾವೇರಿ ನದಿ ಎರಡು ಅಡಿಗಳಷ್ಟು ಹರಿಯುತ್ತಿದೆ
ಬೇತ್ರಿಯಲ್ಲಿ ಕಾವೇರಿ ನದಿ ಎರಡು ಅಡಿಗಳಷ್ಟು ಹರಿಯುತ್ತಿದೆ
ಕಿಗ್ಗಾಲು ಗ್ರಾಮದಲ್ಲಿ ಒಣಗುತ್ತಿರುವ ಭತ್ತದ ಪೈರು. ರಸ್ತೆಯ ಮತ್ತೊಂದು ಪಾರ್ಶ್ವದಲ್ಲಿ ಕಾವೇರಿ ನದಿ ಹರಿಯುತ್ತಿದೆ
ಕಿಗ್ಗಾಲು ಗ್ರಾಮದಲ್ಲಿ ಒಣಗುತ್ತಿರುವ ಭತ್ತದ ಪೈರು. ರಸ್ತೆಯ ಮತ್ತೊಂದು ಪಾರ್ಶ್ವದಲ್ಲಿ ಕಾವೇರಿ ನದಿ ಹರಿಯುತ್ತಿದೆ
ಬಲಮುರಿಯಲ್ಲಿ ಕ್ಷೀಣಗೊಂಡ ಕಾವೇರಿ ನದಿ
ಬಲಮುರಿಯಲ್ಲಿ ಕ್ಷೀಣಗೊಂಡ ಕಾವೇರಿ ನದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT