ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಪರಿಣಾಮ ಬೀರದ ಬಂದ್‌

ವಾಹನ ಸಂಚಾರ, ವ್ಯಾಪಾರ ಸಹಜ, ಕುಶಾಲನಗರದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ
Last Updated 6 ಡಿಸೆಂಬರ್ 2020, 7:43 IST
ಅಕ್ಷರ ಗಾತ್ರ

ಮಡಿಕೇರಿ: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಕನ್ನಡ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್‌ ಕೊಡಗು ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.

ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವ್ಯಾಪಾರ, ವಾಹನ ಸಂಚಾರ ಎಂದಿನಂತೆಯೇ ಇತ್ತು. ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ನಡೆಸಿದವು. ಕೆಎಸ್‌ಆರ್‌ಟಿಸಿ ಬಸ್‌ ಗ್ರಾಮೀಣ ಪ್ರದೇಶವೂ ಸೇರಿದಂತೆ ದೂರದ ಊರುಗಳಿಗೆ ಬೆಳಿಗ್ಗೆಯಿಂದಲೂ ಸಂಚರಿಸಿದವು. ಖಾಸಗಿ ಬಸ್‌ಗಳೂ ರಸ್ತೆಗೆ ಇಳಿದಿದ್ದವು. ಈ ಬಂದ್‌ಗೆ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿರಲಿಲ್ಲ.

‘ವಾಣಿಜ್ಯ ನಗರಿ’ ಕುಶಾಲನಗರಲ್ಲಿ ಮಾತ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರ ಹಾಗೂ ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದರು.

ಕನ್ನಡ ಪರ ಹೋರಾಟಗಾರರ ವಿರುದ್ಧ ಕೀಳಾಗಿ ಬಸವನಗೌಡ ಪಾಟೀಲ ಯತ್ನಾಳ ಮಾತನಾಡಿದ್ದಾರೆ. ಅವರು ಕೂಡಲೇ ಕ್ಷಮೆಯಾಚಿಸಬೇಕು. ತಾಕತ್ತಿದ್ದರೆ ಕೊಡಗಿಗೆ ಅವರು ಭೇಟಿ ನೀಡಲಿ ಎಂದು ಸವಾಲು ಹಾಕಿದರು. ಜೊತೆಗೆ, ಮರಾಠಾ ಅಭಿವೃದ್ಧಿ ನಿಗಮ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

ಜನಜೀವನ ಸಹಜ

ವಿರಾಜಪೇಟೆ: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್‌ಗೆ ಪಟ್ಟಣದಲ್ಲಿ ಯಾವುದೇ ಸ್ಪಂದನೆ
ವ್ಯಕ್ತವಾಗಲಿಲ್ಲ.

ಬಂದ್ ಕರೆಯ ನಡುವೆಯು ಪಟ್ಟಣದಲ್ಲಿ ಜನಜೀವನ ಸಹಜವಾಗಿತ್ತು. ಬಸ್, ಆಟೊ ಸೇರಿದಂತೆ ಇತರೆ ವಾಹನಗಳ ಸಂಚಾರವಿತ್ತು. ಅಂಗಡಿ ಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ನೀರಸ ಪ್ರತಿಕ್ರಿಯೆ

ಸೋಮವಾರಪೇಟೆ: ರಾಜ್ಯ ಬಂದ್‌ಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಂದಿನಂತೆ ಬೆಳಿಗ್ಗೆಯಿಂದಲೇ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಿದರು.

ಖಾಸಗಿ ಬಸ್‌ಗಳ ಸಂಚಾರ ಇತ್ತು, ಎಲ್ಲ ಸರ್ಕಾರಿ ಕಚೇರಿಗಳು ತೆರೆದಿದ್ದವು. ಆಟೊ ಹಾಗೂ ಟ್ಯಾಕ್ಸಿಗಳು ಸಂಚರಿಸಿದವು. ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಲಿಲ್ಲ.

ವಾರದ ಸಂತೆ

ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಾರುಕಟ್ಟೆಯಲ್ಲಿ ಎಂದಿನಂತೆಯೇ ಸಂತೆ ನಡೆಯಿತು. ಅಂಗಡಿಗಳು, ಹೋಟೆಲ್‌ಗಳು ತೆರೆದು, ವ್ಯಾಪಾರ ವಹಿವಾಟು ನಡೆಯಿತು. ಸರ್ಕಾರಿ, ಖಾಸಗಿ ಬಸ್‌ ಹಾಗೂ ಆಟೊ ಸೇರಿದಂತೆ ಇತರೆ ವಾಹನಗಳು ಸಂಚರಿಸಿದವು. ಜನ ಜೀವನ
ಸಾಮಾನ್ಯವಾಗಿತ್ತು.

ಸಮೀಪದ ಕೊಡ್ಲಿಪೇಟೆಯಲ್ಲೂ ಕರ್ನಾಟಕ ಬಂದ್‌ಗೆ ಜನರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಅಲ್ಲಿಯೂ ಜನ ಜೀವನ
ಯಥಾಸ್ಥಿತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT