ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ರಾಜಾಸೀಟ್‌ನಲ್ಲಿ ಜೆಸಿಬಿಯಿಂದ ಕೆಲಸ, ಅಪಾಯಕ್ಕೆ ಆಹ್ವಾನ!

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಭೇಟಿ l ಕೆಲಸಗಾರರಿಗೆ ತರಾಟೆ
Last Updated 7 ನವೆಂಬರ್ 2020, 2:02 IST
ಅಕ್ಷರ ಗಾತ್ರ

ಮಡಿಕೇರಿ: ರಾಜಾಸೀಟ್‌ ಉದ್ಯಾನದಲ್ಲೀಗ ಜೆಸಿಬಿಯದ್ದೇ ಸದ್ದು! ರಾಜಾಸೀಟ್‍ನಲ್ಲಿ ಜೆಸಿಬಿ ಯಂತ್ರಗಳ ಮೂಲಕ ಕಾಮಗಾರಿ ಕೈಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.

ಜೆಸಿಬಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗಿನ ಇಳಿಜಾರು ಪ್ರದೇಶಗಳಲ್ಲಿ ಜೆಸಿಬಿಯಿಂದ ಕೆಲಸ ನಿರ್ವಹಿಸದಂತೆ ಸೂಚನೆ ನೀಡಲಾಗಿದ್ದರೂ, ಅಭಿವೃದ್ಧಿ ಕಾರ್ಯದ ನೆಪದಲ್ಲಿ ರಾಜಾಸೀಟ್‍ನಲ್ಲಿ ಮಂಗಳೂರು ರಸ್ತೆಯ ಮೇಲ್ಭಾಗದ ಮಣ್ಣನ್ನು ಜೆಸಿಬಿಯಿಂದ ತೆಗೆಯಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಂಎಲ್‍ಸಿ, ಕಾಮಗಾರಿ ನಡೆಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡರು.

‘ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜನರು ಭಯದ ವಾತಾವರಣದಲ್ಲೇ ಬದುಕುವಂತಾಗಿದೆ. ಆದರೆ, ಪ್ರವಾಸೋದ್ಯಮ ಇಲಾಖೆ ರಾಜಾಸೀಟು ಅಭಿವೃದ್ಧಿ ನೆಪದಲ್ಲಿ ಇಳಿಜಾರಿನ ಪ್ರದೇಶದಲ್ಲಿ ಜೆಸಿಬಿಯಿಂದ ಕಾರ್ಯನಿರ್ವಹಿಸುತ್ತಿರುವುದು ಜನರನ್ನು ಆತಂಕಕ್ಕೆ ತಳ್ಳಿದ್ದು, ತಕ್ಷಣ ಕಾಮಗಾರಿ ಸ್ಥಗಿತಗೊಳಿಸಬೇಕೆಂದು’ ಎಂದು ವೀಣಾ ಅಚ್ಚಯ್ಯ ಒತ್ತಾಯಿಸಿದರು.

ಈಗಾಗಲೇ ತಲಕಾವೇರಿ ಬೆಟ್ಟದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಿ ಇಡೀ ಬೆಟ್ಟವೇ ಕುಸಿದು ಒಂದು ಕುಟುಂಬವನ್ನು ಬಲಿ ತೆಗೆದುಕೊಳ್ಳಲಾಗಿದೆ. ಇದರ ಅರಿವಿದ್ದರೂ ಶಾಸಕರು ಈ ಬಗ್ಗೆ ಮೌನ ವಹಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

ಮಂಗಳೂರು ರಸ್ತೆಯ ಕೆಳಭಾಗದಲ್ಲಿ ಅನೇಕ ಕುಟುಂಬಗಳು ವಾಸಿಸುತ್ತಿದ್ದು, ಮುಂದೆ ಆಗಬಹುದಾದ ಅನಾಹುತವನ್ನು ತಡೆಯಲು ತಕ್ಷಣ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಖಜಾಂಚಿ ಎಚ್.ಎಂ.ನಂದಕುಮಾರ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ನೆಪದಲ್ಲಿ ನಗರವನ್ನು ಅಪಾಯದಂಚಿಗೆ ತಂದಿಟ್ಟಿದ್ದು, ಹಣ ಮಾಡುವ ಯೋಜನೆಯನ್ನು ಕೈಗೊಂಡಿದೆ ಎಂದು ಆರೋಪಿಸಿದರು.

ರಾಜಾಸೀಟ್‌ ಉದ್ಯಾನದಲ್ಲಿ ಪರಿಸರಕ್ಕೆ ಪೂರಕವಾದ ಅಭಿವೃದ್ಧಿಕಾರ್ಯ ನಡೆಯುತ್ತಿಲ್ಲ. ಜಿಲ್ಲೆಯ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಅನೇಕ ಕಾಮಗಾರಿಗಳು ಸ್ಥಗಿತಗೊಂಡಿವೆ. ಮಡಿಕೇರಿ ನಗರದ ರಸ್ತೆಗಳು ಅಭಿವೃದ್ಧಿಯಾದಾಗ ಮಾತ್ರ ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಎಸ್‌ಸಿ ಘಟಕದ ಅಧ್ಯಕ್ಷ ಮುದ್ದುರಾಜು, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಜಗದೀಶ್, ಪ್ರಭುರೈ, ವಿಕಾಸ್ ಅಚ್ಚಯ್ಯ, ಎಂಎಲ್‍ಸಿ ಅವರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT