ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್.ಡಿ ಮಾಡುವವರಿಗೆ ಆಕರ ಗ್ರಂಥ ರಚಿಸಿದ ಮಂಜುಳಾ

ಚೊಟ್ಟೆಪಾರೆ ಹಾಡಿಯ ಜೇನುಕುರುಬ ಬುಡಕಟ್ಟು ಅಪರೂಪದ ಸಾಧಕಿ
Published 22 ನವೆಂಬರ್ 2023, 5:54 IST
Last Updated 22 ನವೆಂಬರ್ 2023, 5:54 IST
ಅಕ್ಷರ ಗಾತ್ರ

ಮಡಿಕೇರಿ: ‘ನಂಗ ಕಾಡು ಕುರುಬರು ಮಕ್ಕ ನಂಗ... ದೂರಿ... ದೂರಿ.., ನಂಗ ಕಾಡುಲೆ ಇರದು... ದೂರಿ... ದೂರಿ....’

ಎಂಬ ಹಾಡನ್ನು ಮಂಜುಳಾ ಹಾಡುತ್ತಿದ್ದರೆ ಇಡೀ ಬುಡಕಟ್ಟು ಸಂಸ್ಕೃತಿಯೇ ಕಣ್ಣ ಮುಂದೆ ರೂಪು ತಳೆಯುತ್ತದೆ.

ಪಿಎಚ್‌ಡಿ ಮಾಡದೇ ಪಿಎಚ್‌ಡಿ ಮಾಡುವವರಿಗೆ ಆಕರ ಗ್ರಂಥವನ್ನು ರಚಿಸಿದ ಅಪರೂಪದ ಮಹಿಳೆ ಇಲ್ಲಿನ ವಿರಾಜಪೇಟೆ ತಾಲ್ಲೂಕಿನ ಚೊಟ್ಟೆಪಾರೆ ಹಾಡಿಯ ಜೇನುಕುರುಬ ಬುಡಕಟ್ಟು ಜೆ.ಆರ್.ಮಂಜುಳಾ.

ಸ್ನಾತಕೋತ್ತರ ಪದವಿ ಪಡೆದ ಜೇನುಕುರುಬ ಸಮುದಾಯದ ಬೆರಳೆಣಿಕೆಯಷ್ಟು ಮಂದಿಯ ಪೈಕಿ ಇವರು ಮುಂಚೂಣಿಯಲ್ಲಿ ನಿಲ್ಲುವಂತಹವರು. ಪಿಎಚ್‌.ಡಿ ಮಾಡಬೇಕೇಂಬ ಇವರ ಆಸೆ ಇನ್ನೂ ಕೈಗೂಡದೇ ಹೋದರೆ, ಇವರು ಬರೆದ ಸಂಶೋಧನಾ ಕೃತಿಯು ಇತರೆ ಪಿಎಚ್.ಡಿ ಮಾಡುವವರಿಗೆ ಆಕರ ಗ್ರಂಥ ಎನಿಸಿದೆ.

‘ಬುಡಕಟ್ಟು ಜೇನು ಕುರುಬ ಸಂಸ್ಕೃತಿ ಅಧ್ಯಯನ’ ಎಂಬ ಸಂಶೋಧನಾ ಕೃತಿ ಇವರದ್ದು. ಈ ಕೃತಿ ಇಂದಿಗೂ ಜೇನಕುರುಬ ಸಂಸ್ಕೃತಿಯನ್ನು ಅರಿಯಲು ಇರುವ ಆಕರ ಗ್ರಂಥವಾಗಿದೆ.

ಸಿ.ಬಿ.ಹಳ್ಳಿಯ ಆಶ್ರಮ ಶಾಲೆಯಲ್ಲಿ 5ನೇ ತರಗತಿಯವರೆಗೆ ಓದಿದ ಇವರು, 6ರಿಂದ 10ನೇ ತರಗತಿಯವರೆಗೆ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಕಲಿತರು. ನಂತರ, ಪಾಲಿಬೆಟ್ಟದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯು ಓದಿದರು. ಪದವಿ ಶಿಕ್ಷಣವನ್ನು ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನಲ್ಲಿ ಪಡೆದ ಬಳಿಕ ಇವರು, ಸ್ನಾತಕೋತ್ತರ ಪದವಿಗಾಗಿ ಮೈಸೂರಿಗೆ ಹೊರಟರು.

ಮೈಸೂರಿನ ಜೆಎಸ್‌ಎಸ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಪದವಿಯನ್ನೂ ಪಡೆದರು. ಸದ್ಯ, ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಅತಿಥಿ ಶಿಕ್ಷಿಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಇವರು ಜೇನುಕುರುಬ ಸಂಸ್ಕೃತಿಯ ಬಗ್ಗೆ ಅತ್ಯಂತ ಕರಾರುವಕ್ಕಾಗಿ ಮಾತನಾಡಬಲ್ಲ ಸಂಶೋಧಕಿಯಾಗಿದ್ದಾರೆ ಎನ್ನುವುದಕ್ಕೆ ಇವರ ‘ಬುಡಕಟ್ಟು ಜೇನು ಕುರುಬ ಸಂಸ್ಕೃತಿ ಅಧ್ಯಯನ’ ಕೃತಿಯೇ ಸಾಕ್ಷಿಯಾಗಿದೆ. ಮತ್ತೊಂದು ಕೃತಿಯನ್ನು ಇವರು ರಚಿಸುತ್ತಿದ್ದು, ಅದಿನ್ನೂ ಮುದ್ರಣ ಹಂತದಲ್ಲಿದೆ.

ಇವರ ತಂದೆ ಜೆ.ಕೆ.ರಾಮು, ತಾಯಿ ಜೆ.ಆರ್.ಲಕ್ಷ್ಮಿ. ತಂದೆ ರಾಮು ಅವರು ರಾಜ್ಯಮಟ್ಟದ ಬುಡಕಟ್ಟು ಕಲಾವಿದರು ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ.

‘ಮರಪಾಚಿ ತೆಗೆದು ನನ್ನನ್ನು ತಂದೆ ರಾಮು ಕಷ್ಟಪಟ್ಟು ಸಾಕಿದರು. ನನ್ನೆಲ್ಲ ಅಧ್ಯಯನಕ್ಕೆ ಅವರೇ ಕಾರಣ’ ಎಂದು ಮಂಜುಳಾ ಹೇಳುತ್ತಾರೆ.

ಮದುವೆಯಾದ ಮೇಲೆ ಪತಿ ಪ್ರಥ್ವಿನ್‌ ಕುಮಾರ್ ಅವರೂ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವ ಅವರಿಗೆ ಮುಂದೊಂದು ದಿನ ಪಿಎಚ್.ಡಿ ಮಾಡುವ ಕನಸಿದೆ. ಜೊತೆಗೆ, ಬುಡಕಟ್ಟಿನ ಸಂಸ್ಕೃತಿ ಉಳಿಸುವ ಇಚ್ಛೆಯೂ ಇದೆ.

ಪ್ರಭುಸ್ವಾಮಿ ಕಟ್ನವಾಡಿ ಮತ್ತು ಸುದೀಪ್ ಇವರ ಮಾರ್ಗದರ್ಶನದಲ್ಲಿ ಬುಡಕಟ್ಟು ವೈದ್ಯ ಸಂಸ್ಕೃತಿಯ ಅಧ್ಯಯನ ಮಾಡುವ ಉದ್ದೇಶ ಹೊಂದಿದ್ದಾರೆ.

ಕೇವಲ ಸಂಶೋಧನಾ ಕ್ಷೇತ್ರದಲ್ಲಷ್ಟೇ ಕೆಲಸ ಮಾಡದ ಇವರು ಸಂಗೀತ ಮತ್ತು ನಾಟಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ನಾಟಕದಲ್ಲಿ ಪಾತ್ರ ಮಾಡಿರುವ ಮಂಜುಳಾ ಬುಡಕಟ್ಟು ಸಂಗೀತದಲ್ಲೂ ಕಲಾವಿದೆಯೂ ಆಗಿದ್ದಾರೆ.Quote - ಬುಡಕಟ್ಟು ವೈದ್ಯ ಪದ್ಧತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದನ್ನು ದಾಖಲೀಕರಣ ಮಾಡಬೇಕು ಎನ್ನುವ ಮಹಾದಾಸೆ ಇದೆ. ಜೇನುಕುರುಬ ಬುಡಕಟ್ಟು ಜೆ.ಆರ್.ಮಂಜುಳಾ ವಿರಾಜಪೇಟೆ ತಾಲ್ಲೂಕಿನ ಚೊಟ್ಟೆಪಾರೆ ಹಾಡಿ ನಿವಾಸಿ.

ಮಂಜುಳಾ
ಮಂಜುಳಾ
Quote - ಬುಡಕಟ್ಟು ವೈದ್ಯ ಪದ್ಧತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದನ್ನು ದಾಖಲೀಕರಣ ಮಾಡಬೇಕು ಎನ್ನುವ ಮಹಾದಾಸೆ ಇದೆ.
– ಜೆ.ಆರ್.ಮಂಜುಳಾ, ವಿರಾಜಪೇಟೆ ತಾಲ್ಲೂಕಿನ ಚೊಟ್ಟೆಪಾರೆ ಹಾಡಿ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT