ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ‘ಕಡತ ವಿಲೇವಾರಿಗೆ ಶಾಸಕ ಸೂಚನೆ’

ವಿವಿಧ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಭೂಮಿಪೂಜೆ
Last Updated 21 ಜನವರಿ 2023, 5:00 IST
ಅಕ್ಷರ ಗಾತ್ರ

ಮಡಿಕೇರಿ: ‘ಸಾರ್ವಜನಿಕರ ಅರ್ಜಿಗಳು ಹಾಗೂ ಕಡತಗಳನ್ನು ಅನಗತ್ಯವಾಗಿ ಬಾಕಿ ಉಳಿಸಿಕೊಳ್ಳಬಾರದು. ಆದಷ್ಟು ಬೇಗನೇ ಅವುಗಳನ್ನು ವಿಲೇವಾರಿ ಮಾಡಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಇಲ್ಲಿನ ನಗರಸಭೆಯ ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದರು.

‘ಜ.27ರಂದು ಸಂಜೆ 4 ಗಂಟೆಗೆ ಸಾರ್ವಜನಿಕರಿಂದ ಅಹವಾಲು ಆಲಿಕೆ ಸಭೆ ನಡೆಸಲಾಗುವುದು. ಸಾರ್ವಜನಿಕರು ಮುಕ್ತವಾಗಿ ತಮ್ಮ ಕುಂದುಕೊರತೆ ಹೇಳಿಕೊಳ್ಳಲು ಅವಕಾಶ ಇದೆ. ಆಗ ಏನಾದರೂ ನಗರಸಭೆಯಲ್ಲಿ ಸಾರ್ವಜನಿಕರ ಒಂದು ಅರ್ಜಿಯಾಗಲಿ, ಕಡತವಾಗಲಿ ಅನಗತ್ಯವಾಗಿ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಗರಸಭೆಯು ನಿರೀಕ್ಷೆಗೂ ಮೀರಿ ಶೇ 106ರಷ್ಟು ಕಂದಾಯ ವಸೂಲಾತಿ ಮಾಡಿರುವುದು, ನೀರಿನ ಕಂದಾಯವನ್ನು ಶೇ 70ರಷ್ಟು ವಸೂಲು ಮಾಡಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಅವರು, ‘ಕರ ವಸೂಲಾತಿಯಷ್ಟೇ ಅಧಿಕಾರಿಗಳ ಕರ್ತವ್ಯ ಅಲ್ಲ. ಕಂದಾಯ ಪಾವತಿಸುವ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವುದೂ ಅವರ ಜವಾಬ್ದಾರಿ’ ಎಂದೂ ಕಿವಿಮಾತು ಹೇಳಿದರು.

₹ 2.43 ಕೋಟಿ ಕಾಮಗಾರಿಗೆ ಚಾಲನೆ

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದಡಿ ನಗರದ ಭಗವತಿ ದೇವಸ್ಥಾನ ಬಳಿಯಿಂದ ಗಾಳಿಬೀಡು ಜಂಕ್ಷನ್‍ವರೆಗೆ ರಸ್ತೆ ನಿರ್ಮಾಣಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಮಡಿಕೇರಿ ನಗರದ ವಾರ್ಡ್ ಸಂಖ್ಯೆ 1ರಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, 8ರಲ್ಲಿ ಒಳದಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, 9ರಲ್ಲಿ ಗೆಜ್ಜೆ ಸಂಗಪ್ಪ ಸಮುದಾಯ ಭವನ ಉನ್ನತ್ತೀಕರಣ ಕಾಮಗಾರಿ, 13ರ ಪುಟಾಣಿ ನಗರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, 14ರ ಮುನೇಶ್ವರ ದೇವಸ್ಥಾನ ಹತ್ತಿರ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, 23ರ ಅಶೋಕಪುರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಹೀಗೆ ಒಟ್ಟು 2.43 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಸುಬ್ರಮಣಿ, ಪೌರಾಯುಕ್ತ ವಿಜಯ್, ನಗರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT