ಮಂಗಳವಾರ, ಜನವರಿ 21, 2020
29 °C
ವಿರಾಜಪೇಟೆ ಕ್ಷೇತ್ರದ

ಶಾಂತಿ ಕದಡುವ ಕೆಲಸ ಬೇಡ : ಶಾಸಕ ಕೆ.ಜಿ.ಬೋಪಯ್ಯ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ಆದ್ದರಿಂದ, ಯಾರೂ ಶಾಂತಿ ಕದಡುವ ಕೆಲಸ ಮಾಡಬೇಡಿ’ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಅವರಿಗೆ ಸಂವಿಧಾನ ಪ್ರಕಾರವೇ ಎಲ್ಲ ಸೌಲಭ್ಯಗಳೂ ದೊರೆಯಲಿವೆ’ ಎಂದು ಹೇಳಿದರು.

‘ಮುಸ್ಲಿಮರಿಗೆ ತೊಂದರೆ ಆಗುತ್ತಿದೆಯೆಂದು ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ. ಸಮಾಜದ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ನಾವೇ ಮುಖ್ಯವಾಹಿನಿಯ ಬದಲಿಗೆ ಹಿಂದಕ್ಕೆ ಹೋಗುತ್ತೇವೆ ಎಂದರೆ ಹೇಗೆ’ ಎಂದು ಬೋಪಯ್ಯ ಪ್ರಶ್ನಿಸಿದರು.

‘ಕಾಯ್ದೆಯಲ್ಲಿ ವಾಸ್ತಾಂಶ ಏನಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ತಿದ್ದುಪಡಿ ಸಂಬಂಧ ಸಮಿತಿ ರಚಿಸಲಾಗಿತ್ತು. ಸಮಿತಿ ಶಿಫಾರಸ್ಸಿನಂತೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಿ ಅದಕ್ಕೆ ಅಂಗೀಕಾರ ಪಡೆಯಲಾಗಿದೆ. ಕಾಯ್ದೆಯಂತೆ ಸ್ಥಳೀಯರಿಗೆ ಯಾವುದೇ ತೊಂದರೆ ಇಲ್ಲ. ಅಕ್ರಮ ನುಸುಳುಕೋರರನ್ನು ಹೊರಹಾಕಲು ತಿದ್ದುಪಡಿ ತಂದು ಮಸೂದೆ ಮಂಡಿಸಲಾಗಿದೆ. ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಯಾವುದೇ ಉದ್ದೇಶ ಇಲ್ಲ. ಕಮ್ಯುನಿಸ್ಟ್‌ ಹಾಗೂ ಕಾಂಗ್ರೆಸ್‌ನವರು ವೋಟ್‌ ಬ್ಯಾಂಕ್‌ಗಾಗಿ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಜೈನ, ಬೌದ್ಧ, ಕ್ರಿಶ್ಚಿಯನ್, ಪಾರ್ಸಿ ಮತ್ತು ಸಿಖ್ಖರು ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಗಾನಿಸ್ತಾನಗಳಲ್ಲಿ ಬದುಕಲಾರದೇ ಭಾರತಕ್ಕೆ 2014ರ 31ಕ್ಕಿಂತ ಮೊದಲೇ ಬಂದಿದ್ದರೆ ಭಾರತೀಯ ನಾಗರಿಕರು ಎಂದು ಪರಿಗಣಿಸಲಾಗುತ್ತಿದೆ. ಅಲ್ಲಿ ಈ ಧರ್ಮದವರಿಗೆ ತೊಂದರೆ ನೀಡಿದರೆ ಭಾರತವೇ ಆಶ್ರಯ ನೀಡಬೇಕಲ್ಲವೇ? ಸ್ಥಳೀಯ ಮುಸ್ಲಿಮರೂ ಸಹ ಯಾವುದೇ ರೀತಿಯಲ್ಲೂ ಆತಂಕಕ್ಕೆ ಒಳಗಾಗಬಾರದು’ ಎಂದು ಮನವಿ ಮಾಡಿದರು.

ಪ್ರಚೋದನಕಾರಿ ಭಾಷಣ– ಆಕ್ರೋಶ: ‘ಮೂರು ದಿನಗಳ ಹಿಂದೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಶಾಂತಿನಗರದ ಶಾಸಕ ಹ್ಯಾರಿಸ್‌ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಕಾಯ್ದೆಯಲ್ಲಿ ಮುಸ್ಲಿಮರನ್ನು ಹೊರಹಾಕುತ್ತೇವೆ ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಮೂರು ದೇಶದ ಅಕ್ರಮ ನುಸುಳುಕೋರರಿಗೆ ಮಾತ್ರ ಅವಕಾಶ ಇಲ್ಲ’ ಎಂದು ಹೇಳಿದರು.

‘ಅಲ್ಪಸಂಖ್ಯಾತ ಎಂಬುದನ್ನು ಕೇಂದ್ರ ಕಸಿದುಕೊಂಡಿಲ್ಲ. ಆದರೆ, ಕೆಲವರು ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ, ಏಕತೆ ಹಾಗೂ ಭದ್ರತೆ ದೃಷ್ಟಿಯಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದು ಬೋಪಯ್ಯ ಹೇಳಿದರು.

ಕೊಡಗಿನಲ್ಲೂ ಅಕ್ರಮ ನುಸುಳುಕೋರರು: ‘ಅಸ್ಸಾಂನವರ ಹೆಸರಿನಲ್ಲಿ ಕೊಡಗಿನಲ್ಲಿ ಸಾವಿರಾರರು ಜನರು ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ನುಸುಳುಕೋರರು ನೆಲೆಸಿದ್ದಾರೆಂಬ ಶಂಕೆಯಿದೆ’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್‌, ಮುಖಂಡ ಕಾಂಗೀರ ಸತೀಶ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು