ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಯ್ಯಂಗೇರಿ: ಭತ್ತ ನಾಟಿ ಕಾರ್ಯ ಚುರುಕು

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರ ಅಭಾವ; ರೈತರ ಅಳಲು
Last Updated 30 ಜೂನ್ 2021, 4:55 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಕುಯ್ಯಂಗೇರಿ ಗ್ರಾಮದಲ್ಲಿ ಮಂಗಳವಾರ ರೈತರು ಭತ್ತದ ನಾಟಿ ಮಾಡಿದರು.

ಈ ವರ್ಷ ಹೋಬಳಿ ವ್ಯಾಪ್ತಿಯ ಪ್ರಥಮ ನಾಟಿ ಇದಾಗಿದ್ದು, ರೈತರು ಉತ್ಸಾಹದಿಂದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಕುಯ್ಯಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ಆರಂಭದಲ್ಲಿಯೇ ಬಿತ್ತನೆ ಮಾಡಿರುವ ರೈತರು ಇದೀಗ ಕೂಡು ನಾಟಿ ಪದ್ಧತಿಯಲ್ಲಿ ನಾಟಿ ಕಾರ್ಯ ಮಾಡುತ್ತಿದ್ದಾರೆ. ಪರಸ್ಪರ ಸಹಕಾರ ತತ್ವದಿಂದ ನಾಟಿ ಮಾಡಲಾಗುತ್ತಿದ್ದು, ಭತ್ತದ ಕೃಷಿ ಕಾರ್ಯ
ಸಾಗುತ್ತಿದೆ.

ರೈತ ಚಿಲ್ಲನ ಮಾದಪ್ಪ ಮಾತನಾಡಿ, ‘ಭತ್ತದ ಕೃಷಿಗಾಗಿ ಯಾವುದೇ ಯಂತ್ರೋಪಕರಣ ಬಳಸುತ್ತಿಲ್ಲ. ಸಾವಯವ ಗೊಬ್ಬರವನ್ನು ಬಳಸುತ್ತಿದ್ದೇವೆ. ಈಚೆಗೆ ಭತ್ತದ ಕೃಷಿ ಸುಲಭವಾಗಿ ಸಾಗುತ್ತಿಲ್ಲ. ಕೂಲಿ ಕಾರ್ಮಿಕರ ಅಭಾವದಿಂದ ಬೇಸಾಯಕ್ಕೆ ಅಧಿಕ ಖರ್ಚು ತಗಲುತ್ತಿದೆ. ಕುಯ್ಯಂಗೇರಿ ಗ್ರಾಮದಲ್ಲಿ ಶೇ 90 ರಷ್ಟು ಮಂದಿ ಭತ್ತದ ಬೇಸಾಯ ಮಾಡುತಿದ್ದಾರೆ. ಎಲ್ಲರ ಸಹಕಾರದಿಂದ ಕೃಷಿ ಮಾಡುತ್ತಿರುವುದರಿಂದ ಸಮಸ್ಯೆ ಕಾಡುತ್ತಿಲ್ಲ’ ಎಂದು ಹೇಳಿದರು.

‘ಹಿರಿಯರು ಬಿಕೆಬಿ, ಬಿಳಿಯ ಮುಂತಾದ ಭತ್ತದ ತಳಿಗಳನ್ನು ನಾಟಿ ಮಾಡುತ್ತಿದ್ದರು. ಈಚೆಗೆ ಅಧಿಕ ಇಳುವರಿ ನೀಡುವ ರಾಜಮುಡಿ, ದೊಡ್ಡಿ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದ್ದು, ಮನೆ ಬಳಕೆಗೆ ಅಗತ್ಯವಿರುವಷ್ಟು ಇರಿಸಿಕೊಂಡು ಉಳಿದದ್ದನ್ನು ಮಾರಾಟ ಮಾಡುತ್ತಿದ್ಧೆವೆ’ ಎಂದು ಮಾದಪ್ಪ ಹೇಳಿದರು.

‘ಹಲವು ವರ್ಷಗಳಿಂದ ಭತ್ತದ ಬೇಸಾಯ ನಡೆಸುತ್ತಿದ್ದು, ಜೂನ್ ಮೊದಲ ವಾರದಲ್ಲಿ ಬಿತ್ತನೆ ಕೈಗೊಂಡು, 23 ದಿನಗಳ ಬಳಿಕ ಸಸಿಮಡಿಗಳಿಂದ ಪೈರನ್ನು ತೆಗೆದು ನಾಟಿ ಮಾಡಲಾಗುತ್ತಿದೆ’ ಎಂದರು.

ಹೋಬಳಿ ವ್ಯಾಪ್ತಿಯ ಬೇತು, ಕೈಕಾಡು, ಪಾರಾಣೆ, ಬೆಲಜಿ, ಕಕ್ಕಬ್ಬೆ, ಕುಂಜಿಲ ಮತ್ತಿತರ ಗ್ರಾಮಗಳಲ್ಲಿ ಇದೀಗ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಕುಯ್ಯಂಗೇರಿ ಗ್ರಾಮದಲ್ಲಿ ರೈತರು ಜೂನ್ ಅಂತ್ಯಕ್ಕೆ ನಾಟಿ ಕಾರ್ಯ ಮುಗಿಸುವ ಹಂತದಲ್ಲಿದ್ದಾರೆ.

ಸಾಧಾರಣ ಮಳೆ

ನಾಪೋಕ್ಲು: ಪಟ್ಟಣದ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು.

ಒಂದು ವಾರದಿಂದ ಬಿಸಿಲಿನ ವಾತಾವರಣವಿದ್ದು, ಹಲವು ಗ್ರಾಮಗಳಲ್ಲಿ ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 2 ಗಂಟೆಯಿಂದ ಆರಂಭಗೊಂಡ ಮಳೆ ಸುಮಾರು ಒಂದು ಗಂಟೆಗಳ ಕಾಲ ಬಂತು.

ಬೇತು, ಬಲಮುರಿ ಮತ್ತಿತರ ಗ್ರಾಮಗಳಲ್ಲಿ ಭತ್ತದ ಬಿತ್ತನೆಗೆ ನೀರಿನ ಕೊರತೆ ಅನುಭವಿಸುತ್ತಿದ್ದ ರೈತರಿಗೆ ಇದೀಗ ಸುರಿದ ಮಳೆ ಮಂದಹಾಸ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT