ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬೀಸಿ ಕರೆಯುವ ದೇಗುಲ

ನಂದಿಪುರ: ಉದ್ಭವ ಶ್ರೀ ಪ್ರಸನ್ನ ಬಂಡೆ ಆಂಜನೇಯಸ್ವಾಮಿ
Last Updated 11 ಏಪ್ರಿಲ್ 2021, 7:28 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯಿಂದ ಅರ್ಧ ಕಿ.ಮೀ ದೂರದಲ್ಲಿರುವ ನಂದಿಪುರ ಗ್ರಾಮದಲ್ಲಿ 10 ವರ್ಷಗಳ ಹಿಂದೆ ಬೆಳಕಿಗೆ ಬಂದ ಉದ್ಭವ ಶ್ರೀ ಪ್ರಸನ್ನ ಬಂಡೆ ಆಂಜನೇಯಸ್ವಾಮಿಗೆ ಇದೀಗ ಭಕ್ತರು ₹20 ಲಕ್ಷ ವೆಚ್ಚದಲ್ಲಿ ಸುಂದರ ದೇಗುಲ ನಿರ್ಮಿಸಿದ್ದಾರೆ.

ಹಿನ್ನೆಲೆ: ನಂದಿಪುರ ಗ್ರಾಮದ ಕಾಲುದಾರಿಯ ಬಳಿ ಕೆಸರಿನ ನಡುವೆ ಬಂಡೆಯೊಂದಿತ್ತು. ಒಮ್ಮೆ ಬಂಡೆಯ ಸಮೀಪ ಮಗುವಿನೊಂದಿಗೆ ಬಂದ ಮಹಿಳೆಯೊಬ್ಬರು ದೀಪ ಹಚ್ಚಲು ಪರದಾಡುತ್ತಿದ್ದ ದೃಶ್ಯ ಬೆಳೆಗಾರ ಪ್ರವೀಣ್ ಎಂಬುವವರ ಗಮನಕ್ಕೆ ಬಂತು. ಸ್ಥಳಕ್ಕೆ ಬಂದು ಗಮನಿಸಿದಾಗ ಬಂಡೆಯಲ್ಲಿ ಆಂಜನೇಯನ ಕೆತ್ತನೆ ಅಸ್ಪಷ್ಟವಾಗಿ ಕಾಣಿಸಿತು.

ಕೆಲ ದಿನಗಳ ಬಳಿಕ ಪ್ರವೀಣ್ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಬಂಡೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಬಂಡೆಯ ಮೇಲೆ ಚಿಕ್ಕ ಗುಡಿಯೊಂದನ್ನು ನಿರ್ಮಿಸಿದರು. ಭಕ್ತರಿಂದ ಪೂಜೆ, ಪುನಸ್ಕಾರ ಆರಂಭವಾದವು.
ನಂತರ ಬಂಡೆಯ ಮೇಲೆ ಅಸ್ಪಷ್ಟವಾಗಿದ್ದ ಒಂದೂವರೆ ಅಡಿ ಎತ್ತರದ ಆಂಜನೇಯಮೂರ್ತಿ ಸ್ಪಷ್ಟವಾಗಿ ಕಾಣಿಸಿತು. ಅಂದಿನಿಂದ ಪ್ರತಿ ವರ್ಷ ಹನುಮ ಜಯಂತಿಯಂದು ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ ಎಂದು ಗ್ರಾಮದ ಮುಖಂಡರು
ಹೇಳುತ್ತಾರೆ.

ಕೊಡ್ಲಿಪೇಟೆಯ ಪ್ರಸಿದ್ಧ ಶಿಲ್ಪಿ ವರಪ್ರಸಾದ್ ದೇವಾಲಯಕ್ಕೆ ಭೇಟಿ ನೀಡಿ, ಎತ್ತರದ ಹನುಮ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಂಕಲ್ಪ ಮಾಡಿದರು. ಹೆಗ್ಗಡದೇವನ ಕೋಟೆಯಿಂದ ತಂದ ಏಕ ಶಿಲೆಯಲ್ಲಿ12.5 ಅಡಿ ಎತ್ತರದ ಆಂಜನೇಯನ ಮೂರ್ತಿ ಕೆತ್ತಿದರು. ಇದೀಗ ಏಕಶಿಲಾ ಮೂರ್ತಿಯು ಆಕರ್ಷಣೆಯ ಕೇಂದ್ರವಾಗಿದೆ.

ಆಂಜನೇಯಸ್ವಾಮಿ ಉದ್ಭವ ಆಗಿರುವ ಬಂಡೆಯ ಮೇಲೆ ನೂತನ ದೇಗುಲ ನಿರ್ಮಾಣವಾಗಿದ್ದು, ನೀರು, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ತಮ ರಸ್ತೆ ಸಂಪರ್ಕ ಹಾಗೂ ವಾಹನ ನಿಲುಗಡೆಗೂ ಅವಕಾಶವಿದೆ.

ಬುಧವಾರ ಮತ್ತು ಶನಿವಾರ ಬೆಳಿಗ್ಗೆ 6.30 ರಿಂದ 9.30 ಹಾಗೂ ಸಂಜೆ 6 ರಿಂದ 8.30ರವರೆಗೆ ಪೂಜೆ ನಡೆಯುತ್ತದೆ. ಕೊಡ್ಲಿಪೇಟೆ, ಶನಿವಾರಸಂತೆ ಮಾತ್ರವಲ್ಲದೇ ನೆರೆಯ ಹಾಸನ ಜಿಲ್ಲೆಯ ಯಸಳೂರು, ಕೆರೋಡಿ, ಐಗೂರು, ಶುಕ್ರವಾರಸಂತೆ ಇತರೆ ಊರುಗಳಿಂದಲೂ ಭಕ್ತರು ಬರುತ್ತಾರೆ.

‘ಉದ್ಭವ ಆಂಜನೇಯಸ್ವಾಮಿ ನೋಡಿದಾಗ ಏಕಶಿಲೆಯಲ್ಲಿ ಎತ್ತರದ ಹನುಮಮೂರ್ತಿಯನ್ನು ಕೆತ್ತಿ, ಪ್ರತಿಷ್ಠಾಪಿಸಬೇಕು ಎಂದುಕೊಂಡೆ. ಅಂದುಕೊಂಡಂತೆ ಎಲ್ಲವೂ ನೆರವೇರಿದೆ, ದೇವಾಲಯಕ್ಕೆ ಬರುವ ಭಕ್ತರನ್ನು ನೋಡಿ ಖುಷಿ ಆಗುತ್ತಿದೆ’ ಎಂದು ಕೊಡ್ಲಿಪೇಟೆ ಶಿಲ್ಪಿ ವರಪ್ರಸಾದ್ ಹೇಳುತ್ತಾರೆ.

ರಸ್ತೆ ಬದಿಯಲ್ಲೆ ದೇಗುಲವಿರುವ ಕಾರಣ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಯಾಣಿಕರು ದರ್ಶನ ಮಾಡಿ, ಪ್ರಾರ್ಥಿಸಿ ತೆರಳುತ್ತಾರೆ. ಆಡಳಿತ ಮಂಡಳಿ ವತಿಯಿಂದ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕಲ್ಲಳ್ಳಿ ಮಠಾಧೀಶ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆಮಂಡಲ ಪೂಜೆಯೂ ವಿಜೃಂಭಣೆಯಿಂದ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT