ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲುವಿನಲ್ಲಿ ಶಿಖರಕ್ಕೆ ಹೆಜ್ಜೆ ಹಾಕಬಹುದು!

ನಾಪೋಕ್ಲುವಿಲ್ಲಿ ಆಕಾಶಕ್ಕೆ ಮುತ್ತಿಕ್ಕುವ ಪರ್ವತಶ್ರೇಣಿಗಳು– ಪ್ರವಾಸೋದ್ಯಮ ಬೆಳವಣಿಗೆಗೂ ಪೂರಕ
Last Updated 3 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನಾಪೋಕ್ಲು: ಹನಿಹನಿಯಾಗಿ ಉದುರುವ ನೀರ ಹನಿಗಳು, ಹಾದು ಹೋಗುವ ಮೋಡಗಳೊಂದಿಗೆ ಕಣ್ಣಾಮುಚ್ಚಾಲೆ ಯಾಡುವ ಎಳೆಬಿಸಿಲು. ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಪಾತ, ಅಪರೂಪಕ್ಕೊಮ್ಮೆ ಅರಳುವ ಪುಷ್ಪಸಂಕುಲ, ಕಣಿವೆಗಳೆಡೆಯಲ್ಲಿ ಸಾಗುವ ಜಲಧಾರೆಗಳ ಬೋರ್ಗರೆತ…ಇಂತಹ ಹತ್ತು ಹಲವು ನಿಸರ್ಗದ ಸೌಂದರ್ಯ ಸವಿಯಬೇಕಾದರೆ ನಾಪೋಕ್ಲು ವ್ಯಾಪ್ತಿಯ ವಿವಿಧ ಶಿಖರಗಳತ್ತ ಹೆಜ್ಜೆ ಹಾಕಬೇಕು.

ಚಾರಣಕ್ಕೆ ಸವಾಲೆಸೆಯುವ ಹತ್ತು ಹಲವು ಶಿಖರಗಳು ಇಲ್ಲಿವೆ. ಕೊಡಗಿನ ಅತ್ಯಂತ ಎತ್ತರದ ಶಿಖರ ಎಂಬ ಖ್ಯಾತಿಯ ತಡಿಯಂಡಮೋಳ್ ಒಳಗೊಂಡಂತೆ ಕಬ್ಬೆ ಶಿಖರ, ಚೋಮ ಕುಂದು, ಇಗ್ಗುತ್ತಪ್ಪ ಬೆಟ್ಟ, ಮಲ್ಮ ಬೆಟ್ಟ, ನೆಲಜಿ ಬೆಟ್ಟ, ಪೇರೂರು ಬೆಟ್ಟಗಳು ತಮ್ಮ ರಮಣೀಯ ಸೌಂದರ್ಯದಿಂದ ಚಾರಣಾಸಕ್ತರನ್ನು ಕೈಬೀಸಿ ಕರೆಯುತ್ತವೆ. ಇದರಿಂದ ವರ್ಷಪೂರ್ತಿ ನಿಸರ್ಗದ ಸೌಂದರ್ಯಾಸಕ್ತರ ಮನಸೆಳೆಯುತ್ತವೆ.

ಕೊಡಗಿನ ಅತ್ಯಂತ ಎತ್ತರವಾದ ತಡಿಯಂಡಮೋಳ್ ಶಿಖರ ನಿಸರ್ಗಸೌಂದರ್ಯಕ್ಕೆ, ಚಾರಣದ ಸವಾಲುಗಳಿಗೆ ಪ್ರಸಿದ್ದವಾದುದು. ರಾಜ್ಯದ ಹಲವು ಭಾಗಗಳಿಂದ, ಹೊರರಾಜ್ಯ, ವಿದೇಶಗಳಿಂದ ಅಧಿಕ ಸಂಖ್ಯೆಯ ಚಾರಣಾಸಕ್ತರು ಇಲ್ಲಿಗೆ ಬರುತ್ತಾರೆ. ವರ್ಷಾಂತ್ಯದ ದಿನಗಳಲ್ಲಿ ಅಪಾರ ಸೌಂದರ್ಯದಿಂದ ಕಂಗೊಳಿಸುವ ಪ್ರವಾಸಿಗರ ಮನಸೆಳೆಯುವ ಈ ಪರ್ವತದ ಹಾದಿಯಲ್ಲಿ ಅಧಿಕ ಸಂಖ್ಯೆಯ ಚಾರಣಿಗರು ಕಂಡುಬರುತ್ತಾರೆ.

ಕಕ್ಕಬ್ಬೆ ಬಳಿಯ ಯವಕಪಾಡಿ ಗ್ರಾಮದಿಂದ ನಾಲ್ಕುನಾಡು ಅರಮನೆಯ ಮಾರ್ಗವಾಗಿ 8 ಕಿ.ಮೀ ಎತ್ತರಕ್ಕೆ ಚಾರಣ ಕೈಗೊಂಡರೆ ತಡಿಯಂಡಮೋಳ್ ಶಿಖರವನ್ನು ತಲುಪಬಹುದು. ಆ ಹಾದಿಯನ್ನು ಬಿಟ್ಟು ಯವಕಪಾಡಿಯಿಂದ ಕಬ್ಬಿನಕಾಡು ಹಾದಿಯಲ್ಲಿ ಸಾಗಿದರೆ ನಿಸರ್ಗದ ಚೆಲುವನ್ನು ಆಸ್ವಾದಿಸಬಹುದು. ತಡಿಯಂಡಮೋಳ್ ಶಿಖರವು ಮಡಿಕೇರಿಯಿಂದ 48 ಕಿ.ಮೀ.ದೂರದಲ್ಲಿದೆ. ಶಿಖರದ ಎತ್ತರ 1717ಮೀ.ಶಿಖರದ ಮೇಲ್ಮಟ್ಟವನ್ನು ಸುಮಾರು 10ಕಿ.ಮೀ.ಸಾಗಿದರೆ ತಲುಪಬಹುದು. ಮಡಿಕೇರಿಯಿಂದ ನಾಪೋಕ್ಲು ಮೂಲಕ ಕಕ್ಕಬ್ಬೆ ಎಂಬ ಊರು ತಲುಪಿ ಅಲ್ಲಿಂದ ಯವಕಪಾಡಿ ಗ್ರಾಮದ ಹಾದಿ ಹಿಡಿಯಬೇಕು. ಕಕ್ಕಬ್ಬೆಯಿಂದ ಬಾಡಿಗೆ ಜೀಪ್ ಮೂಲಕ ಸುಮಾರು ಆರೇಳು ಕಿ.ಮೀ.ಕ್ರಮಿಸಿ ಉಳಿದ ಭಾಗವನ್ನು ನಡೆದು ತಲುಪಬಹುದು. ತಡಿಯಂಡಮೋಳ್ ಶಿಖರದ ಹಾದಿ ಹಾವಿನ ಚಲನೆಯಂತಿದೆ.

ಚಾರಣದ ಹಾದಿಯುದ್ದಕ್ಕೂ ನಿಸರ್ಗ ರಮಣೀಯ ದೃಶ್ಯಗಳು ಮನಸೆಳೆಯುತ್ತವೆ. ತಂಪಾದ ಕೊಡಗಿನಲ್ಲಿ ಬೋಳು ಬೆಟ್ಟಗಳ ಏರುಹಾದಿಯಲ್ಲಿ ಸಾಗಿ ಶಿಖರವನ್ನೇರಿ ನಿಂತು ನೋಡಿದಾಗ ಅದ್ಭುತ ಪ್ರಕೃತಿ ಸೌಂದರ್ಯ ಚಾರಣಿಗರ ಆಯಾಸವನ್ನು ಮರೆಸುತ್ತದೆ. ದೂರದ ಸಮುದ್ರತೀರ, ಸುತ್ತಲಿನ ಮನಮೋಹಕ ನಿಸರ್ಗಸೌಂದರ್ಯ, ದೃಷ್ಟಿಗೆ ನಿಲುಕದಷ್ಟು ಆಳ, ಅಗಲವಾದ ಹಸಿರು ಪರ್ವತ ಶ್ರೇಣಿಗಳು, ಎತ್ತರ ತಗ್ಗಿನ ರುದ್ರರಮಣೀಯ ದೃಶ್ಯಗಳು ಮನಸೆಳೆಯುತ್ತವೆ.

ಕಬ್ಬೆ ಬೆಟ್ಟವು ನಾಪೋಕ್ಲುವಿನಿಂದ 17 ಕಿ.ಮೀ.ದೂರದಲ್ಲಿದೆ. ಅತ್ತ ವಿರಾಜಪೇಟೆಯಿಂದಲೂ 17 ಕಿ.ಮೀ.ಅಂತರ .ಸ್ವಂತ ವಾಹನದಲ್ಲಿ ಮಡಿಕೇರಿಯಿಂದ ಹೊರಟರೆ ಅರ್ಧಗಂಟೆಯಲ್ಲಿ ಚೆಯ್ಯಂಡಾಣೆ ತಲುಪಬಹುದು. ಚೆಯ್ಯಂಡಾಣೆಯಿಂದ 6 ಕಿ.ಮೀ ಸಾಗಿದರೆ ಚೇಲಾವರದ ಕಬ್ಬೆ ಬೆಟ್ಟದ ತಳ ತಲುಪಬಹುದು. ಸ್ವಂತ ವಾಹನದಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಶಿಖರದ ತಳಭಾಗದವರೆಗೆ ಸಾಗಿದರೆ ಮತ್ತೆ ಕಾಲ್ನಡಿಗೆಯ ಚಾರಣದ ಹಾದಿ. ಬೋಳು ಬೆಟ್ಟಗಳ ಏರುಹಾದಿಯಲ್ಲಿ ಹೆಜ್ಜೆ ಹಾಕುವಾಗ ಚಾರಣದ ಜೊತೆಜೊತೆಯಲ್ಲಿ ನಿಸರ್ಗ ರಮಣೀಯ ದೃಶ್ಯಗಳನ್ನು ಸೆರೆ ಹಿಡಿಯಬಹುದು.

ಕಬ್ಬೆ ಬೆಟ್ಟವನ್ನೇರುವ ಹಾದಿಯಲ್ಲಿ ನಿಸರ್ಗ ರಮಣೀಯ ದೃಶ್ಯಗಳಿವೆ. ಬಿಸಿಲಿನ ದಿನಗಳಲ್ಲೂ ಮೋಡಗಳ ಸರಮಾಲೆ. ಕಣಿವೆಗಳ ನಡುವಿನಿಂದ ಮಂಜು ಮೇಲೆದ್ದು ಬಂದು ಆವರಿಸುವ ದೃಶ್ಯ ಮನಮೋಹಕ. ಸುತ್ತಲೂ ಬೆಟ್ಟದ ಸಾಲುಗಳು. ಒಂದೆಡೆ ಧಾವಿಸಿ ಬರುವ ಮೋಡಗಳ ಸಾಲು. ಬೀಸುವ ತಂಪುಗಾಳಿ. ನಿಂತು ನೋಡಿದಾಗ ಅದ್ಭುತ ಪ್ರಕೃತಿ ಸೌಂದರ್ಯ ಚಾರಣಿಗರ ಆಯಾಸವನ್ನು ಮರೆಸುತ್ತದೆ. ಸುತ್ತಲಿನ ಮನಮೋಹಕ ನಿಸರ್ಗಸೌಂದರ್ಯ, ದೃಷ್ಟಿಗೆ ನಿಲುಕದಷ್ಟು ಆಳ, ಅಗಲವಾದ ಹಸಿರು ಪರ್ವತ ಶ್ರೇಣಿಗಳು, ಎತ್ತರ ತಗ್ಗಿನ ರುದ್ರರಮಣೀಯ ದೃಶ್ಯಗಳು ಮನ ಸೆಳೆಯುತ್ತವೆ.

ಅದೇ ರೀತಿ, ನೆಲಜಿ, ಪೇರೂರು ಹಾಗೂ ಮಲ್ಮ ಬೆಟ್ಟಗಳೂ ಚೇತೋಹಾರಿ. ಗ್ರಾಮೀಣ ಜನರು ಈ ಶಿಖರಗಳಿಗೆ ಪೂಜನಿಯ ಸ್ಥಾನ ನೀಡಿದ್ದಾರೆ. ಈ ಶಿಖರಗಳು ಕಾಡು, ಕಣಿವೆ, ಬೆಟ್ಟದ ತಂಪು ಗಾಳಿ ಮನಸ್ಸಿಗೆ ಮುದನೀಡುತ್ತವೆ. ಬಿಸಿಲು, ಮೋಡ, ಮಂಜು..ಕ್ಷಣಕ್ಕೊಮ್ಮೆ ಬದಲಾಗುವ ವಾತಾವರಣದಲ್ಲಿ ರಮ್ಯ, ರೋಚಕ ಹಾದಿಯನ್ನು ಕಾಲ್ನಡಿಗೆಯಲ್ಲಿ ಸವೆಸುವುದು ಒಂದು ಅಪೂರ್ವ ಅನುಭವ. ವರ್ಷದ ಬಹುಕಾಲ ಮಂಜಿನ ಸೆರಗಿನಲ್ಲಿ ತನ್ನ ಸೌಂದರ್ಯವನ್ನು ಮುಚ್ಚಿಟ್ಟುಕೊಂಡಿರುತ್ತದೆ ಈ ಶಿಖರಗಳು. ಚಾರಣದೊಂದಿಗೆ ಬೆಟ್ಟದ ಸುತ್ತಲಿನ ಗುಡ್ಡಗಳನ್ನು ಕೆಳಗಿನ ಕಣಿವೆಗಳನ್ನು ಕಣ್ತುಂಬಿಕೊಳ್ಳಲು ಶಿಖರಗಳು ಪ್ರಶಸ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT