ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಕ್ರಿಕೆಟ್ ಸ್ಟೇಡಿಯಂ ವಿವಾದಕ್ಕೆ ಮರುಜೀವ

Last Updated 9 ಮೇ 2022, 12:45 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಐದು ತಿಂಗಳ ಹಿಂದೆ ಸೌಹಾರ್ದವಾಗಿ ಪರಿಹಾರ ಕಂಡಿದ್ದ ಕೊಡಗು ಜಿಲ್ಲೆಯ ಮೂರ್ನಾಡು ಸಮೀಪದ ಹೊದ್ದೂರು ಗ್ರಾಮದ ಕ್ರಿಕೆಟ್ ಸ್ಟೇಡಿಯಂ ವಿವಾದವು ಮರುಜೀವ ಪಡೆದುಕೊಂಡಿದೆ.

ಗ್ರಾಮಸ್ಥರು ರುದ್ರಭೂಮಿಯ ಜಾಗಕ್ಕಾಗಿ ಹೋರಾಟ ಪ್ರಾಂರಂಭಿಸಿದ್ದು ಪಾಲೆಮಾಡುವಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಜಿಲ್ಲಾಡಳಿತ ಹೊದ್ದೂರು ಪಂಚಾಯತಿ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ಜಾಗ ಗುರುತಿಸಿ, ಮಂಜೂರು ಮಾಡಿತ್ತು. ಈ ಜಾಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ರುದ್ರಭೂಮಿ ಇದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ಕಳೆದ 5 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ ಕಲ್ಪಿಸುವ ಸಲುವಾಗಿ ಜಿಲ್ಲಾಧಿಕಾರಿ ಬಿ.ಸಿ‌.ಸತೀಶ ಅವರು ಹೋರಾಟಗಾರರ ಹಾಗೂ ಕೆ.ಎಸ್.ಸಿ.ಎ ಪ್ರಮುಖರ ಜತೆಗೆ ಜಂಟಿಯಾಗಿ ಸಭೆ ನಡೆಸಿ ಚರ್ಚೆ ನಡೆಸಿದ್ದರು.

ಹೋರಾಟಗಾರರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಹೀಗಾಗಿ, ಪ್ರತಿಭಟನೆ ಕೈ ಬಿಡಲಾಗಿತ್ತು. ಬಳಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳು ಆರಂಭವಾಗಿದ್ದವು.

ಸೋಮವಾರ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಆಗಮಿಸಿ ಕಾಮಗಾರಿಗೆ ಮುಂದಾಗಿದ್ದರು. ಸ್ಥಳಕ್ಕೆ ಜೆಸಿಬಿಯನ್ನೂ ಕರೆಸಲಾಗಿತ್ತು.

‘ರುದ್ರಭೂಮಿಗೆ ಪರ್ಯಾಯ ಜಾಗ ನೀಡಿಲ್ಲ. ನಮ್ಮ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ. ಕೊಡಗು ಜಿಲ್ಲಾಡಳಿತವು ಮೋಸ ಮಾಡಿದೆ’ ಎಂದು ಹೋರಾಟಗಾರರು ಆರೋಪಿಸಿ ಸೋಮವಾರ ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರತಿಭಟನೆಗೆ ಮುಂದಾದರು. ಆಗ ಪ್ರತಿಭಟನಕಾರರ ಬಂಧಿಸಲಾಯಿತು.

‘ಪಾಲೇಮಾಡುವಿನಲ್ಲಿ ಸ್ಮಶಾನಕ್ಕಾಗಿ ಎರಡು ಎಕರೆ ಜಾಗವನ್ನು ಕೋರಿದ್ದೆವು. ಕೇವಲ 1 ಎಕರೆ ಜಾಗವನ್ನು ಮಂಜೂರು ಮಾಡಿ, ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಸ್ಮಶಾನ ಜಾಗ ಹೋಗಲಿ, ವಾಸದ ಮನೆಗಳ ಜಾಗವನ್ನೂ ಇಲ್ಲದಂತೆ ಮಾಡುತ್ತಾರೆ’ ಎಂದು ಮೊಣ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮಾವತಿ, ಹೋರಾಟಗಾರ ಮೊಣ್ಣಪ್ಪ ಸೇರಿದಂತೆ ಹಲವರನ್ನು ಬಂಧಿಸಿ ಮಡಿಕೇರಿಗೆ ಕರೆದೊಯ್ಯಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT