ಸೋಮವಾರ, ನವೆಂಬರ್ 30, 2020
21 °C
ಗಮನಹರಿಸದ ಅಧಿಕಾರಿಗಳು, ಜನಪ್ರತಿನಿಧಿಗಳು: ವಾಹನ ಸವಾರರ ಸಂಕಷ್ಟ ಕೇಳುವವರಾರು?

ನಾಪೋಕ್ಲು: ಹದಗೆಟ್ಟ ಬೈಪಾಸ್ ರಸ್ತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಪಟ್ಟಣದ ಸುತ್ತಲಿನ ಬೈಪಾಸ್ ರಸ್ತೆಗಳು ತೀರಾ ಹದಗೆಟ್ಟಿದ್ದು, ವಾಹನ ಸವಾರರು ಸಾಗಲು ಪರದಾಡಬೇಕಿದೆ. 

ಕಿತ್ತುಹೋದ ಡಾಂಬರು, ಅಲ್ಲಲ್ಲಿ ಬಿದ್ದಿರುವ ಹೊಂಡಗಳು, ಹೊಂಡಗಳಲ್ಲಿನ ಕೆಸರು, ಸುತ್ತಲೂ ಹರಡಿದ ಜಲ್ಲಿಕಲ್ಲುಗಳು.. ಇವುಗಳ ನಡುವೆ ವಾಹನ ಚಾಲನೆ ಮಾಡುವುದು ಸವಾರರಿಗೆ ಸವಾಲಾಗಿದೆ.
ಪಾದಚಾರಿಗಳು ಹೆಜ್ಜೆ ಎಲ್ಲಿ ಇಡಬೇಕು ಎಂಬುದೇ ತಿಳಿಯದಷ್ಟು ಕಲ್ಲುಗಳು ಮೇಲೆದ್ದಿವೆ.

ಪಟ್ಟಣದ ಮುಖ್ಯರಸ್ತೆಯ ಸ್ಥಿತಿಯು ಬೈಪಾಸ್‌ ರಸ್ತೆಗಳ ಸ್ಥಿತಿಗಿಂತ ಭಿನ್ನವೇನೂ ಇಲ್ಲ. ಮಡಿಕೇರಿ, ಭಾಗಮಂಡಲ ಹಾಗೂ ಪಾರಾಣೆ ರಸ್ತೆಗಳು ಸೇರುವ ವೃತ್ತದಲ್ಲಿ ಬಸ್‌ ನಿಲ್ದಾಣವಿದೆ. ಇಲ್ಲಿ ಮುಖ್ಯರಸ್ತೆಗಳು ಗೊತ್ತಾಗದಷ್ಟು ಹೊಂಡಗಳು ಬಿದ್ದಿವೆ.

ದುರಸ್ತಿ ಕಾಣದ ರಸ್ತೆಯಲ್ಲಿ ಸಾಗುವುದು ಸುಲಭದ ಮಾತಲ್ಲ. ಇನ್ನು ಪೊಲೀಸ್ ಠಾಣೆ ಮುಖಾಂತರ ಖಾಸಗಿ ಶಾಲೆಯೊಂದರ ಬಳಿ ಸಾಗುವ ಡಾಂಬರು ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ತಗ್ಗು– ದಿಣ್ಣೆಗಳ ರಸ್ತೆಯಲ್ಲಿ ಸಾಗಲು ಸಾಹಸ ಪಡಬೇಕು. ಕೃಷಿ ಇಲಾಖೆ, ಕಂದಾಯ ಇಲಾಖೆ, ಸೆಸ್ಕ್, ಉಪಖಜಾನೆ, ಪಶು ಇಲಾಖೆ
ಸೇರಿದಂತೆ ವಿವಿಧ ಇಲಾಖೆಗಳಿಗೆ ತೆರಳಲು ಕೂಡಾ ಈ ಬೈಪಾಸ್ ರಸ್ತೆಯೊಂದೆ. ಇಲ್ಲಿ ಸಾಗುವವರು ಆಡಳಿತವನ್ನು, ಜನಪ್ರತಿನಿಧಿಗಳನ್ನು ಶಪಿಸುತ್ತಾ ಸಾಗುತ್ತಾರೆ.

‘ರಸ್ತೆಯೂ ತೀರಾ ಇಕ್ಕಟ್ಟಾಗಿದೆ. ಈ ರಸ್ತೆಯಲ್ಲಿ ಎರಡೆರಡು ವಾಹನಗಳು ಬಂದರೆ ಸಾಗಲು ಸಾಧ್ಯವಿಲ್ಲ. ಕೆಲಸ ಕಾರ್ಯಗಳಿಗಾಗಿ ನಡಿಗೆಯಲ್ಲಿ ತೆರಳುವ ಗ್ರಾಮೀಣ ಮಂದಿಯೂ ಪ್ರಯಾಸ ಪಡಬೇಕು. ಕೂಡಲೇ ರಸ್ತೆಯನ್ನು ವಿಸ್ತರಿಸಬೇಕು’ ಎಂಬುದು ಇಲ್ಲಿನ ನಾಗರಿಕರ ಆಗ್ರಹ.

ಪಟ್ಟಣದಲ್ಲಿನ ವಾಹನ ದಟ್ಟಣೆ ತಪ್ಪಿಸಿಕೊಳ್ಳಲು ವಾಹನ ಸವಾರರು ಬೇತು ಗ್ರಾಮದ ಸಸ್ಯಕ್ಷೇತ್ರದ
ಬಳಿಯಿಂದ ಬೈಪಾಸ್ ರಸ್ತೆಯ ಮೂಲಕ ಸಾಗಿ ಬಂದರೆ ಈ ರಸ್ತೆಯೂ ಸಾಕಷ್ಟು ಹದಗೆಟ್ಟಿದೆ. ಇಲ್ಲಿ ವಾಹನಗಳು ಸರ್ಕಸ್ ಮಾಡುತ್ತಾ ಸಾಗಬೇಕಾದ ಅನಿವಾರ್ಯತೆ ಇದೆ. ಮಳೆ ಬಂದರಂತೂ ರಸ್ತೆಯ ಹೊಂಡದಲ್ಲಿ ನೀರು ತುಂಬುವದರಿಂದ ರಸ್ತೆ ಕಾಣದಾಗಿ, ವಾಹನ ಚಲಾಯಿಸಲು ಸಾಧ್ಯವಿಲ್ಲದ ಸ್ಥಿತಿ ಇರುತ್ತದೆ. 

ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಸಂಬಂಧಪಟ್ಟ ಇಲಾಖೆ ಶೀಘ್ರ ಪಟ್ಟಣದ ಬೈಪಾಸ್ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಬೇತು ಗ್ರಾಮದ ಸುಬ್ರಮಣ್ಯ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.