ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಾಲ್ಲೂಕು: ಪೊನ್ನಂಪೇಟೆಯಲ್ಲಿ ಹರ್ಷ

ಇಂದು ಹೊಸ ತಾಲ್ಲೂಕು ಪೊನ್ನಂಪೇಟೆಗೆ ಸಚಿವರಾದ ಆರ್‌.ಅಶೋಕ್‌, ನಾರಾಯಣಗೌಡ ಚಾಲನೆ
Last Updated 28 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ರಾಜ್ಯದಲ್ಲಿಯೇ ಅತ್ಯಂತ ಪುಟ್ಟ ಜಿಲ್ಲೆ ಕೊಡಗಿಗೆ ಮತ್ತೊಂದು ತಾಲ್ಲೂಕು ಅಧಿಕೃತವಾಗಿ ಭಾನುವಾರ ಸೇರ್ಪಡೆಗೊಳ್ಳುತ್ತಿದೆ. ಪೊನ್ನಂಪೇಟೆ ತಾಲ್ಲೂಕಿಗೆ ಇಂದು ಅಧಿಕೃತ ಮುದ್ರೆ ಸಿಗುತ್ತಿದ್ದು ಜಿಲ್ಲೆಯ ನಾಲ್ಕನೇ ತಾಲ್ಲೂಕು ಉದಯವಾಗುತ್ತಿದೆ.

ಸಚಿವರಾದ ಆರ್‌.ಅಶೋಕ್‌, ನಾರಾಯಣ ಗೌಡ ಅವರು ಹೊಸ ತಾಲ್ಲೂಕಿಗೆ ಚಾಲನೆ ನೀಡಲಿದ್ದಾರೆ. ಹೊಸ ತಾಲ್ಲೂಕಿಗೆ ಸೇರ್ಪಡೆಗೊಳ್ಳುವ ಜನರು, ಸಂತಸ ವ್ಯಕ್ತಪಡಿಸಿದ್ದಾರೆ. ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ ಎಂದು ಕಿಗ್ಗಟ್ಟುನಾಡು ವ್ಯಾಪ್ತಿಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

10 ವರ್ಷಗಳ ಹೋರಾಟ:ಕೊಡಗು ಬೆಟ್ಟಗುಡ್ಡಗಳಿಂದ ಆವೃತ್ತವಾದ ಪ್ರದೇಶ. ಮನೆಗಳೂ ಚದುರಿದಂತಿವೆ. ಪೊನ್ನಂಪೇಟೆ ಭಾಗದ ಜನರು ಯಾವುದೇ ಕೆಲಸಕ್ಕೂ ವಿರಾಜಪೇಟೆಗೆ ಬರಬೇಕಿತ್ತು. ಅದು ದೂರವಿತ್ತು. ಸಣ್ಣಪುಟ್ಟ ಕೆಲಸಕ್ಕೂ, ದೊಡ್ಡಮೊತ್ತದ ಹಣವನ್ನು ಖರ್ಚು ಮಾಡಿಕೊಂಡೇ ವಿರಾಜಪೇಟೆಗೆ ಬರಬೇಕಿತ್ತು. ಆಗ ಯೋಚನೆಗೆ ಬಂದಿದ್ದೇ ಪೊನ್ನಂಪೇಟೆ ತಾಲ್ಲೂಕು ಕೇಂದ್ರ ಮಾಡಬೇಕೆಂಬ ಪರಿಕಲ್ಪನೆ.

ಪೊನ್ನಂಪೇಟೆಯನ್ನು ತಾಲ್ಲೂಕು ಕೇಂದ್ರವಾಗಿಸಲು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಅವರ ನೇತೃತ್ವದಲ್ಲಿ 10 ವರ್ಷಗಳಿಂದ ಹಿರಿಯ ವಕೀಲರಾದ ಮತ್ರಂಡ ಅಪ್ಪಚ್ಚು, ಭೀಮಯ್ಯ, ಎಂ.ಟಿ. ಕಾರ್ಯಪ್ಪ, ಹಿರಿಯರಾದ ಪುಚ್ಚಿಮಾಡ ಹರೀಶ್ ದೇವಯ್ಯ, ಎ.ಎ. ಎರ್ಮು, ಎಂ.ಎಸ್. ಕುಶಾಲಪ್ಪ ಅವರನ್ನೊಳಗೊಂಡ ನಿಯೋಗ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದವು. ಎಷ್ಟು ಭಾರಿ ಮನವಿ ಸಲ್ಲಿಸಿದ್ದರೂ, ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪೊನ್ನಂಪೇಟೆಯಲ್ಲಿ ದೊಡ್ಡ ಮೊತ್ತದ ಪ್ರತಿಭಟನೆ ನಡೆದಿತ್ತು. ಪೊನ್ನಂಪೇಟೆ ವ್ಯಾಪ್ತಿಯ ಗ್ರಾಮಸ್ಥರು 70 ದಿನಗಳ ನಿರಂತರ ಧರಣಿ ನಡೆಸಿದ್ದರು. ಅದಾದ ಮೇಲೆ ‘ಮೈತ್ರಿ’ ಸರ್ಕಾರ ಅಧಿಕಾರಕ್ಕೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಪೊನ್ನಂಪೇಟೆ ಹಾಗೂ ಕುಶಾಲನಗರವನ್ನು ತಾಲ್ಲೂಕು ಕೇಂದ್ರ ಮಾಡುವ ಘೋಷಣೆ ಮಾಡಿದ್ದರು. ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕೃತವಾಗಿ ಪೊನ್ನಂಪೇಟೆ ತಾಲ್ಲೂಕು ಕೇಂದ್ರವಾಗಿ ಕಾರ್ಯಾರಂಭ ಮಾಡುತ್ತಿದೆ.

ಪೊನ್ನಂಪೇಟೆ ನೂತನ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮಗಳನ್ನು ವಿಂಗಡಿಸಿ ಪಟ್ಟಿಯನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೆಲವು ತಿಂಗಳ ಹಿಂದೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದ್ದರು. ಅದರಂತೆ ಗ್ರಾಮಗಳ ಹಂಚಿಕೆಯೂ ನಡೆದಿದೆ. ವಿರಾಜಪೇಟೆಯಿಂದ ಬೇರ್ಪಡಿಸಿರುವ ಹೋಬಳಿ, ಗ್ರಾಮ ಹಾಗೂ ಅರಣ್ಯ ಪ್ರದೇಶಗಳ ಪಟ್ಟಿಯನ್ನು ವಿವರವಾಗಿ ತಯಾರಿಸಲಾಗಿದೆ.

ಕಿಗ್ಗಟ್ಟು ನಾಡು ಎಂದೇ ಪ್ರಸಿದ್ಧಿ:ಹಿಂದೆ ಪೊನ್ನಂಪೇಟೆ ‘ಕಿಗ್ಗಟ್ಟುನಾಡು’ ಎಂಬ ಹೆಸರಿನಲ್ಲಿ ತಾಲ್ಲೂಕು ಕೇಂದ್ರವಾಗಿತ್ತು. ಈ ಹೆಸರು ಈಗಲೂ ಅಲ್ಲಿನ ಸರ್ಕಾರಿ ಪ್ರಾಥಮಿಕ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡ ಕಲ್ಲಿನ ನಾಮ ಫಲಕದಲ್ಲಿದೆ. ಹಳ್ಳಿಗಟ್ಟು, ಮತ್ತೂರು ಗ್ರಾಮಗಳಿಗೆ ಒಳಪಟ್ಟ ಗ್ರಾಮಗಳನ್ನು ಸೇರಿಸಿ ದಿವಾನ್ ಪೊನ್ನಪ್ಪ 1800ರ ಸಂದರ್ಭದಲ್ಲಿ ಪೊನ್ನಂಪೇಟೆ ಪಟ್ಟಣವನ್ನು ನಿರ್ಮಿಸಿದ್ದರು. ಬಳಿಕ ಊರು ಬೆಳೆಯುತ್ತಾ ಹೋಗಿ ಪಟ್ಟಣ ಆಯಿತು. ಈ ಪಟ್ಟಣಕ್ಕೆ ಪೊನ್ನಂಪೇಟೆ ಎಂದಾಯಿತು ಎಂದು ಹಿರಿಯರು ಸ್ಮರಿಸುತ್ತಾರೆ.

12 ಹೊಸ ಹುದ್ದೆಗಳು ಸೃಷ್ಟಿ:ಹೊಸ ತಾಲ್ಲೂಕು ಪೊನ್ನಂಪೇಟೆಗೆ ಸರ್ಕಾರವು 12 ಹುದ್ದೆಗಳ‌ ಭರ್ತಿಗೆ ಆದೇಶ ಹೊರಡಿಸಿದೆ. ತಹಶೀಲ್ದಾರ್‌, ಶಿರಸ್ತೇದಾರ್‌, ಪ್ರಥಮ ದರ್ಜೆ ಸಹಾಯಕರು, ಆಹಾರ ನೀರಿಕ್ಷಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ನೇಮಕ ಮಾಡುವುದರ ಜೊತೆಗೆ ಹೊರಗುತ್ತಿಗೆ ಅಡಿ ಬೆರಚ್ಚುಗಾರರು, ವಾಹನ ಚಾಲಕರು ಮತ್ತು ‘ಡಿ’ ಗ್ರೂಪ್ ನೌಕರರನ್ನು ನಿಯೋಜಿಸಿಕೊಳ್ಳಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಮಾಹಿತಿ ನೀಡಿದ್ದಾರೆ.

ಕುಶಾಲನಗರ ಯಾವಾಗ?:ಇತ್ತೀಚೆಗೆ ಕುಶಾಲನಗರ ತಾಲ್ಲೂಕಿಗೂ ಅಧಿಕೃತ ಮಾನ್ಯತೆ ಸಿಕ್ಕಿದ್ದು, ಹೊಸ ತಾಲ್ಲೂಕು ಕಾರ್ಯಾರಂಭ ಮಾಡಬೇಕಿದೆ. ಅದು ಸಹ ಶೀಘ್ರವೇ ತಾಲ್ಲೂಕು ಕೇಂದ್ರವಾಗಿ ಕಾರ್ಯಾರಂಭ ಆಗಲಿದೆ ಎನ್ನುತ್ತಾರೆ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT