ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್ ಕುಸಿದ ಅರಮನೆ ಚಾವಣಿ, ದುರಸ್ತಿಗೆ ಮುಂದಾಗದ ಪುರಾತತ್ವ ಇಲಾಖೆ

ಸಚಿವರ ಮಾತಿಗೂ ಬೆಲೆ ಇಲ್ಲ
Last Updated 29 ಜನವರಿ 2019, 19:50 IST
ಅಕ್ಷರ ಗಾತ್ರ

ಮಡಿಕೇರಿ: ಶಿಥಿಲಾವಸ್ಥೆಗೆ ತಲುಪಿರುವ ನಗರದ ಕೋಟೆ ಆವರಣದಲ್ಲಿರುವ ಪ್ರಸಿದ್ಧ ಅರಮನೆಯ ಒಂದು ಭಾಗದ ಚಾವಣಿ ಮಂಗಳವಾರ ಮಧ್ಯಾಹ್ನ ದಿಢೀರ್ ಕುಸಿದಿದೆ.

ಇದೇ ಅರಮನೆಯಲ್ಲಿ ಹಲವು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಲವು ಕಚೇರಿಗಳು, ಶಾಸಕರ ಜನಸಂಪರ್ಕ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಮಂಗಳವಾರ ಮಧ್ಯಾಹ್ನ ಅಷ್ಟು ಜನದಟ್ಟಣೆ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಹೆಂಚು ಹಾಗೂ ಚಾವಣಿಗೆ ಅಳವಡಿಸಿದ್ದ ಮರಮುಟ್ಟುಗಳು ಕುಸಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ದೊಡ್ಡ ಶಬ್ದವಾದ ಕಾರಣ ಕಚೇರಿ ಸಿಬ್ಬಂದಿ ಹೊರಗೆ ಓಡಿಬಂದರು. ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಅರಮನೆ, ಮಣ್ಣಿನ ಕೋಟೆಗೆ ಹಾನಿಯಾಗಿತ್ತು.

ನಗರದ ಹೃದಯಭಾಗದಲ್ಲಿ ಕಣ್ಮನ ಸೆಳೆಯಬೇಕಿದ್ದಕೋಟೆ ಶಿಥಿಲಾವಸ್ಥೆಗೆ ತಲುಪಿದ್ದು ಪ್ರವಾಸಿಗರಿಗೆ ನಿರಾಸೆಮೂಡಿಸಿದೆ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕಾರಣ ಐತಿಹಾಸಿಕ ಕುರುಹು ಅಳಿಸಿ ಹೋಗುವ ಲಕ್ಷಣ ಕಾಣಿಸುತ್ತಿದೆ.

ಅರಸರ ಕಾಲದಲ್ಲಿ ಸೈನಿಕರು ತಂಗುತ್ತಿದ್ದ ಕೊಠಡಿಗಳು ಸಂಪೂರ್ಣ ಬಿದ್ದು ಹೋಗಿವೆ. ಆವರಣ ಗೋಡೆ ತುಂಬೆಲ್ಲ ಗಿಡಗಂಟಿಗಳು ಬೆಳೆದು ನಿಂತಿವೆ. ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಇದೀಗ ದಿಢೀರ್‌ ಕುಸಿದಿರುವುದು ಆತಂಕ ತಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಅರಮನೆ ದುರಸ್ತಿಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ ಮೂರ್ತೀಶ್ವರಿ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ‘ಒಂದು ವಾರದ ಒಳಗೆ ದುರಸ್ತಿ ಕಾರ್ಯ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕಾಡುತ್ತಿದೆ ಭಯ: ‘ನಿತ್ಯವೂ ಇಲ್ಲಿ ಕೆಲಸ ಮಾಡಲು ಭಯ ಕಾಡುತ್ತಿದೆ. ಜಿ.ಪಂ ಕಚೇರಿಯನ್ನೂ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತಿಲ್ಲ’ ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ಕೋಟೆಯ ಇತಿಹಾಸ

ಹಾಲೇರಿ ವಂಶದ ಅರಸರ ಕಾಲದಲ್ಲಿ ಮುದ್ದುರಾಜ ಎಂಬಾತ 17ನೇ ಶತಮಾನದಲ್ಲಿ ಈ ಜಾಗದಲ್ಲಿ ಮಣ್ಣಿನ ಕೋಟೆ, ಅರಮನೆ ಕಟ್ಟಿಸಿದ್ದ. ಇದನ್ನೇ ಟಿಪ್ಪು ಸುಲ್ತಾನ್‌ ಕಲ್ಲಿನಲ್ಲಿ ಪುನರ್‌ ನಿರ್ಮಿಸಿ, ಈ ಸ್ಥಳಕ್ಕೆ ‘ಜಾಫರಾಬಾದ್‌’ ಎಂದು ಕರೆದ.

1834ರಲ್ಲಿ ಬ್ರಿಟಿಷರ ಆಳ್ವಿಕೆಗೆ ಈ ಕೋಟೆಒಳಪಟ್ಟಿತ್ತು. 1812ರಲ್ಲಿ ಇಮ್ಮಡಿ ಲಿಂಗರಾಜ ಒಡೆಯರ ಕಾಲದಲ್ಲಿ ನಿರ್ಮಿಸಿದ್ದ ಅರಮನೆಯಲ್ಲಿ ಈಗ ಸರ್ಕಾರಿ ಕಚೇರಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT