ಗದ್ದೆಹಳ್ಳದಲ್ಲಿ ತೆರೆದಿದೆ ಹೊಸ ಬದುಕಿನ ದಾರಿ

ಬುಧವಾರ, ಮೇ 22, 2019
32 °C
ಆಶ್ರಮದಲ್ಲಿ ಅಗರಬತ್ತಿ ತಯಾರಿಕೆ ತರಬೇತಿ

ಗದ್ದೆಹಳ್ಳದಲ್ಲಿ ತೆರೆದಿದೆ ಹೊಸ ಬದುಕಿನ ದಾರಿ

Published:
Updated:
Prajavani

ಸುಂಟಿಕೊಪ್ಪ: ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ತಮ್ಮ ಪೋಷಕರನ್ನು ಹಾಗೂ ವಯೋವೃದ್ಧರನ್ನು ಮನೆಯಿಂದ ಹೊರ ಹಾಕುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.

ಅಂತಹ ವೃದ್ಧರು– ನಿರ್ಗತಿಕರಾಗಿ ಊರೂರು ಅಲೆಯುತ್ತಾ ಕಾಲಕಳೆಯುತ್ತಾ ಬದುಕನ್ನೇ ಬರಡಾಗಿಸುವ ರೀತಿಯಲ್ಲಿ ಹಲವಾರು ಮಂದಿ ಜೀವನ ಸಾಗಿಸುತ್ತಿದ್ದಾರೆ.

ನಿರ್ಗತಿಕರಿಗೆ ಸೇವೆ ಮಾಡುವುದಕ್ಕೆ ಹಲವು ಸೇವಾ– ಸಂಸ್ಥೆಗಳು ಸ್ಥಾಪಿತಗೊಂಡಿವೆ. ಆದರೆ, ಅದರ ನಿರ್ವಹಣೆ ಮಾಡಲು ಸಾಧ್ಯವಾಗದೇ ಹಲವು ಸಂಸ್ಥೆಗಳು ಬಾಗಿಲು ಮುಚ್ಚಿವೆ.

ಆದರೆ, ಈ ನಡುವೆ ಸ್ಥಳೀಯಮಟ್ಟದಲ್ಲಿ ಬಡವರ, ನಿರ್ಗತಿಕರ, ವೃದ್ಧರ, ಅನಾರೋಗ್ಯ ಪೀಡಿತರ, ವಿಕಲಚೇತನರ ಸೇವೆ ಮಾಡಬೇಕೆಂದು ವ್ಯಕ್ತಿಯೊಬ್ಬರು ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ‘ವಿಕಾಸ್ ಜನಸೇವಾ ಟ್ರಸ್ಟ್’ ಸ್ಥಾಪಿಸಿ ಹಲವರಿಗೆ ಆಶ್ರಯ ನೀಡುತ್ತಿದ್ದಾರೆ. ಅವರೇ ರಮೇಶ್.

ಇದಕ್ಕೂ ಮೊದಲು ಬಹಳ ವರ್ಷಗಳಿಂದ ರಮೇಶ್, ಪತ್ನಿ, ಮಕ್ಕಳು ಹಾಗೂ ಅವರ ಸ್ನೇಹಿತರು ಅಬಲೆಯರ ಸೇವೆಯನ್ನು ಮಾಡುತ್ತಾ ಅವರ ಸಂತೋಷದಲ್ಲಿ ತಮ್ಮ ಸಂತೋಷವನ್ನೂ ಕಾಣುತ್ತಿದ್ದರು.

ಕಾಲಕ್ರಮೇಣ ತಾವೇ ಸ್ವಂತದಾದ ಸೇವಾ ಸಂಸ್ಥೆ ಸ್ಥಾಪಿಸಿ ಆ ಮೂಲಕ ನಿರ್ಗತಿಕರಿಗೆ ಬದುಕನ್ನು ಕಟ್ಟಿಕೊಡಲು ನಿರ್ಧರಿಸಿದರು.

ಅದರ ಪ್ರತಿಫಲವಾಗಿ ಮಡಿಕೇರಿಯಲ್ಲಿ 2016ರ ಡಿಸಂಬರ್‌ನಲ್ಲಿ ವಿಕಾಸ್ ಜನಸೇವಾ ಸಂಸ್ಥೆ ಆರಂಭಗೊಂಡಿತು. ನಂತರ, 2018ರ ಡಿಸೆಂಬರ್‌ನಲ್ಲಿ ಈ ಆಶ್ರಮವನ್ನು ಸುಂಟಿಕೊಪ್ಪದ ಗದ್ದೆಹಳ್ಳದ ಬಾಡಿಗೆ ಮನೆಗೆ ಸ್ಥಳಾಂತರಿಸಿ, ಅನಾಥರ ಸೇವೆಯನ್ನು ರಮೇಶ್ ಕುಟುಂಬ ಮುಂದುವರೆಸಿತು.

ಈ ಸಂಸ್ಥೆಯು ಈಗ 20 ಮಂದಿ ನಿರ್ಗತಿಕರಿಗೆ ಆಶ್ರಯ ನೀಡಿದ್ದು, ಅವರಿಗೆ ಸಮಯ ಕಳೆಯಲು ಅಗರಬತ್ತಿ ತಯಾರಿಕೆ ಹಾಗೂ ಫಿನಾಯಿಲ್ ತಯಾರಿಕಾ ತರಬೇತಿ ನೀಡಲಾಗುತ್ತಿದೆ.

ಈ ಸಂಸ್ಥೆಯು ನೋಂದಣಿಗೊಂಡಿದ್ದರೂ ಸರ್ಕಾರದ ಯಾವುದೇ ಅನುದಾನ ಬಯಸದೇ ಕೊಡಗು ಸೇರಿದಂತೆ ಹೊರ ಜಿಲ್ಲೆಗಳ ದಾನಿಗಳು, ಸಾರ್ವಜನಿಕರು ನೀಡಿದ ವಿವಿಧ ರೀತಿಯ ಸಹಾಯದಿಂದ ಈ ಸಂಸ್ಥೆಯು ತನ್ನ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಈ ಸಂಸ್ಥೆಯು ಎಲ್ಲ ಕೆಲಸ ಕಾರ್ಯಗಳಿಗೂ ಆಧಾರ ಪೂರಕವಾದ ದಾಖಲೆಗಳನ್ನು ಹೊಂದಿದೆ. ಇದರಿಂದ ಈ ಸಂಸ್ಥೆಯು ಪಾರದರ್ಶಕತೆಯಿಂದ ಕೂಡಿದೆ. ಆ ಕಾರಣಕ್ಕಾಗಿಯೇ ಸ್ಥಳೀಯ– ಹೊರಭಾಗದ ವೈದ್ಯರು, ಸಿಬ್ಬಂದಿಗಳು, ಸಾಮಾನ್ಯ ಜನರು, ಪೊಲೀಸ್ ಇಲಾಖೆ ಈ ಆಶ್ರಮಕ್ಕೆ ಸ್ಪಂದಿಸುತ್ತಾ ಬಂದಿದ್ದಾರೆ.

ಈ ಸಂಸ್ಥೆಯ ಕಾರ್ಯ ವೈಖರಿಯನ್ನು ನೇರವಾಗಿ ಕಂಡ ಹಲವು ಸಂಘ ಸಂಸ್ಥೆಗಳು ಸಹಾಯ ನೀಡುತ್ತಿರುವುದಲ್ಲದೇ ಇತರರಿಂದಲೂ ಆರ್ಥಿಕ ಸಹಾಯಹಸ್ತ ನೀಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ.

‘ಕೊಡಗಿನಾದ್ಯಂತ ಅನಾಥರಾಗಿ ತಿರುಗಾಡುತ್ತಿದ್ದ ಹಲವು ಮಂದಿಯನ್ನು ನಮ್ಮ ಆಶ್ರಮಕ್ಕೆ ಕರೆತಂದು ಅವರನ್ನು ಉಪಚರಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ನಮ್ಮಿಂದಾದ ಸೇವೆ ನೀಡುತ್ತಿದ್ದೇವೆ. ಇದುವರೆಗೆ ಈ ಸಂಸ್ಥೆಯ ಮೂಲಕ 20 ಮಂದಿಗೆ ಮಡಿಕೇರಿಯ ನೇತ್ರ ತಜ್ಞ ಡಾ.ಪ್ರಶಾಂತ್ ಅವರ ಮೂಲಕ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. 25 ಮಂದಿ ಮಾನಸಿಕ ಅಸ್ವಸ್ಥರನ್ನು ಬೆಂಗಳೂರಿನ ಆರ್‌ವಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 200ಕ್ಕೂ ಹೆಚ್ಚಿನ ನಿರ್ಗತಿಕರಾಗಿ ತಿರುಗಾಡುತ್ತಿದ್ದವರನ್ನು ಕರೆ ತಂದು ಅವರಿಗೆ ಕೌನ್ಸಿಲಿಂಗ್ ಮಾಡಿಸಿ ಅವರ ಕುಟುಂಬಸ್ಥರಿಗೆ ಒಪ್ಪಿಸಿದ್ದೇವೆ’ ಎಂದು ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮದ ಮುಖ್ಯಸ್ಥ ಎಚ್.ಕೆ.ರಮೇಶ್ ಹೇಳುತ್ತಾರೆ.

ಪತ್ನಿ, ಮಕ್ಕಳ ಬೆಂಬಲ: ಈ ಜೀವನದಾರಿ ಆಶ್ರಮದಲ್ಲಿ ಕೇವಲ ರಮೇಶ್ ಮಾತ್ರ ಸೇವೆ ಸಲ್ಲಿಸುತ್ತಿಲ್ಲ. ಜೊತೆಯಲ್ಲಿ ಪತ್ನಿ ರೂಪಾ, ಮಕ್ಕಳಾದ ಅಮೃತಾ, ಸಿಂಚನಾ, ಐಶ್ವರ್ಯಾ ಅವರೂ ಕೈ ಜೋಡಿಸಿದ್ದಾರೆ.

**

ಸ್ವಂತ ಮನೆಯಲ್ಲಿದ್ದಷ್ಟೇ ನೆಮ್ಮದಿ ಇಲ್ಲಿದೆ; ಎಲ್ಲದ್ದಕ್ಕೂ ಸ್ವಾತಂತ್ರ್ಯವಿದೆ. ಯಾವುದೇ ಒತ್ತಡ ಇಲ್ಲದೇ ಸಂತೋಷದಿಂದ ಕಾಲ ಕಳೆಯುತ್ತಿದ್ದೇವೆ.
– ಪ್ರಕಾಶ್, ಆಶ್ರಮದಲ್ಲಿರುವ ವ್ಯಕ್ತಿ

**
ಜೀವನದಲ್ಲಿ ಬಹಳಷ್ಟು ಕಷ್ಟವನ್ನು ಅನುಭವಿಸಿದ್ದೇನೆ. ಆದರೆ, ರಮೇಶ್ ಅವರು ಸಾಂತ್ವನದ ಮಾತುಗಳಿಂದ ನಮ್ಮನ್ನೆಲ್ಲ ಸಂತೋಷ ಪಡಿಸುತ್ತಾರೆ. ಇದಕ್ಕಿಂತ ಬದುಕಿನಲ್ಲಿ ಮತ್ತೇನಿದೆ.
- ಸುಬ್ಬಮ್ಮ, ಆಶ್ರಮದಲ್ಲಿ ವಾಸ್ತವ್ಯ ಇರುವವರು

**

1,500 ಮಂದಿಯನ್ನು ರಕ್ಷಿಸಿರುವ ತೃಪ್ತಿ ನಮ್ಮದು; ಈಗ ನಮ್ಮ ಸಂಸ್ಥೆಯಲ್ಲಿ 20 ಮಂದಿ ಇದ್ದಾರೆ. ಸರ್ಕಾರದ ಯಾವುದೇ ಅನುದಾನ ಲಭಿಸುತ್ತಿಲ್ಲ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಆದರೂ, ಈ ಸೇವೆ ಸಂತೋಷ ತಂದಿದೆ
–ಎಚ್.ಕೆ. ರಮೇಶ್, ಮುಖ್ಯಸ್ಥ, ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !