ಆಸ್ಪತ್ರೆಗಳಲ್ಲಿ ಔಷಧಿ ದಾಸ್ತಾನು ಇರಲಿ: ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಸೂಚನೆ

ಭಾನುವಾರ, ಮೇ 26, 2019
27 °C

ಆಸ್ಪತ್ರೆಗಳಲ್ಲಿ ಔಷಧಿ ದಾಸ್ತಾನು ಇರಲಿ: ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಸೂಚನೆ

Published:
Updated:
Prajavani

ಮಡಿಕೇರಿ: ಕೊಡಗಿನ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸಂದರ್ಭಕ್ಕೆ ಬೇಕಾದ ಔಷಧಗಳನ್ನು ದಾಸ್ತಾನು ಇಟ್ಟುಕೊಂಡಿರಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ. ಲಕ್ಷ್ಮಿಪ್ರಿಯಾ ಸೂಚಿಸಿದರು.

ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ  ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯುನೆಸೆಫ್ ವತಿಯಿಂದ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪ್ರಕೃತಿ ವಿಕೋಪ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಔಷಧಗಳು ದಾಸ್ತಾನು ಇರಬೇಕು. ವೈದ್ಯಕೀಯ ಕಾಲೇಜಿನ ವೈದ್ಯರು, ಶುಶ್ರೂಷಕರು... ಹೀಗೆ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಕೃತಿ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಅತೀ ಅಗತ್ಯವಾಗಿದೆ; ಜಿಲ್ಲೆಯ ಎಲ್ಲಾ ಶುಶ್ರೂಷಕರು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.

ಅತಿವೃಷ್ಟಿ ಸಂದರ್ಭದಲ್ಲಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ಮತ್ತು ಮನೋಸ್ಥೈರ್ಯ ತುಂಬುವುದು; ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಎಲ್ಲ ಹಂತದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆ ಕಲ್ಪಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರೊ.ರಂಗನಾಥ್ ಮಾತನಾಡಿ, ಆಸ್ಪತ್ರೆಗಳಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಆರೋಗ್ಯ ಸೇವೆ ಕಲ್ಪಿಸಲು ಮುಂದಾಗಬೇಕಿದೆ. ಎಲ್ಲರೂ ತಂಡೋಪಾದಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಯುನೆಸೆಫ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಪ್ರಭಾತ್ ಮಾತನಾಡಿ, ಅತಿವೃಷ್ಟಿ ಹಾಗೂ ಇತರೆ ಸಂದರ್ಭದಲ್ಲಿ ತೀವ್ರ ಹಾನಿಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಆರೋಗ್ಯ ಸೇವೆ ಕಲ್ಪಿಸುವುದು ಅಗತ್ಯ; ಇದು ವೈದ್ಯರ ಕರ್ತವ್ಯ ಕೂಡ ಆಗಿದ್ದು, ಕೂಡಲೇ ಸ್ಪಂದಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅತಿವೃಷ್ಟಿ ಅಥವಾ ಇತರ ಸಂದರ್ಭಗಳಲ್ಲಿ ಸಮೂಹ ಅಪಘಾತ ನಿರ್ವಹಣೆ ಮಾಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಪ್ರಭಾತ್ ತಿಳಿಸಿದರು. 

ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ವಿಶಾಲ್ ವೈದ್ಯಕೀಯ ಕಾಲೇಜಿನ ಸ್ಥಾನಿಕ ವೈದ್ಯಾಧಿಕಾರಿ ಮಂಜುನಾಥ್‌ ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !