ಜನವರಿ 11ರಿಂದ ‘ಕೊಡಗು ಪ್ರವಾಸಿ ಉತ್ಸವ’

7

ಜನವರಿ 11ರಿಂದ ‘ಕೊಡಗು ಪ್ರವಾಸಿ ಉತ್ಸವ’

Published:
Updated:

ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ತತ್ತರಿಸಿ ಚೇತರಿಸಿಕೊಳ್ಳುತ್ತಿರುವ ಕೊಡಗು ಜಿಲ್ಲೆಯು ‘ಪ್ರವಾಸಿ ಉತ್ಸವ’ಕ್ಕೆ ಸಜ್ಜಾಗಿದೆ. ಪ್ರವಾಸೋದ್ಯಮ ಉತ್ತೇಜಿಸಲು ಜ.11ರಿಂದ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ, ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನದ ವೈಭವ ಪ್ರವಾಸಿಗರ ಕಣ್ಮನ ತಣಿಸಲಿದೆ.

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 8.30ರ ತನಕ ಅವಕಾಶವಿದೆ. ಕಾವೇರಿ ಮಾತೆ, ಕಾವೇರಿ ತೀರ್ಥೋದ್ಭವದ ಬ್ರಹ್ಮಕುಂಡಿಕೆ ಆಕರ್ಷಣೆ ಆಗಿರಲಿವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸಂಜೆ 4.30ಕ್ಕೆ ಗಾಂಧಿ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸಾಂಸ್ಕೃತಿಕ ರಂಗು ತೆರೆದುಕೊಳ್ಳಲಿದೆ. ಮೊದಲ ದಿನ ಕೊಡವ ನೃತ್ಯ ಸಂಭ್ರಮ ಆಯೋಜಿಸಲಾಗಿದೆ. ಜತೆಗೆ, ಎಂ.ಡಿ. ಪಲ್ಲವಿ ತಂಡದಿಂದ ಜುಗಲ್‌ಬಂದಿ ನಡೆಯಲಿದೆ.

ಜ.12ರಂದು ಬೆಳಿಗ್ಗೆ 10ರಿಂದ ಶ್ವಾನ ಪ್ರದರ್ಶನ, ಸಂಜೆ 6.30ರಿಂದ ಸರಿಗಮಪ ತಂಡದಿಂದ ಸಂಗೀತ ಸಂಜೆ, ಜ.13ರಂದು ಬೆಳಿಗ್ಗೆ 10ರಿಂದ ರಾಜಾಸೀಟ್‌ ರಸ್ತೆಯಲ್ಲಿ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌, ಅದೇ ದಿನ ಸಂಜೆ 5.30ರಿಂದ ಅರೆಭಾಷೆ ಅಕಾಡೆಮಿಯಿಂದ ನೃತ್ಯ ವೈಭವ, ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸಸಂಜೆ ಆಯೋಜಿಸಲಾಗಿದೆ.

ಆಗಸ್ಟ್‌ನಲ್ಲಿ ಉಂಟಾಗಿದ್ದ ಭೂಕುಸಿತ, ಪ್ರವಾಹ ಪರಿಸ್ಥಿತಿಯಿಂದ ಪ್ರವಾಸೋದ್ಯಮ ನೆಲಕಚ್ಚಿತ್ತು. ಪ್ರವಾಸಿಗರಿಗೆ ಕೊಡಗು ಸುರಕ್ಷಿತವಾಗಿದೆ ಎಂಬ ಸಂದೇಶ ರವಾನಿಸಲು ₹ 1 ಕೋಟಿ ವೆಚ್ಚದಲ್ಲಿ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !