ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಾರ್ಟ್‌ನಿಂದ ಹೊರಬರದ ಸಿಎಂ ಎಚ್‌ಡಿಕೆ: ಆಪ್ತರೊಂದಿಗೆ ರಾಜಕೀಯ ಚರ್ಚೆ?

’ಸಿ.ಎಂ ರೆಸಾರ್ಟ್‌ ವಿಶ್ರಾಂತಿ 12ರಂದು ಅಂತ್ಯ’
Last Updated 11 ಮೇ 2019, 20:15 IST
ಅಕ್ಷರ ಗಾತ್ರ

ಮಡಿಕೇರಿ: ಸಮೀಪದ ಇಬ್ಬನಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಶನಿವಾರ ಯಾರ ಕಣ್ಣಿಗೂ ಬೀಳಲಿಲ್ಲ.

ಪತ್ನಿ ಅನಿತಾಹಾಗೂ ಪುತ್ರ ನಿಖಿಲ್‌ ರೆಸಾರ್ಟ್‌ನಲ್ಲೇ ಉಳಿದುಕೊಂಡಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಮಡಿಕೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಂಜೆ ವೇಳೆಗೆ ಮತ್ತೆ ರೆಸಾರ್ಟ್‌ಗೆ ಮರಳಿದರು. ಸಚಿವ ಸಿ.ಎಸ್. ಪುಟ್ಟರಾಜು ಕೂಡ ಸಂಜೆ ಅಲ್ಲಿಗೇ‌‌ ತೆರಳಿದರು.

ರೆಸಾರ್ಟ್‌ನಲ್ಲಿ ರಾಜಕೀಯ ಚರ್ಚೆ?: 23ರ ಬಳಿಕ ‘ಮೈತ್ರಿ’ ಸರ್ಕಾರಕ್ಕೆ ಆಪತ್ತಿದೆ ಎಂಬ ಚರ್ಚೆ ರಾಜ್ಯದಲ್ಲಿ ಜೋರಾಗಿದ್ದು ಸರ್ಕಾರ ಉಳಿಸಿಕೊಳ್ಳುವುದು ಹೇಗೆಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೆಸಾರ್ಟ್‌ನಲ್ಲೇ ಕುಳಿತು ಯೋಜನೆ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅವರೊಂದಿಗೆ, ಇಬ್ಬರು ಆತ್ಮೀಯ ಸಚಿವರೂ ರೆಸಾರ್ಟ್‌ನಲ್ಲಿದ್ದು ರಾಜ್ಯ ರಾಜಕೀಯ ಬೆಳವಣಿಗೆ ಹಾಗೂಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.

ನಮಗೂ ಖಾಸಗಿ ಬದುಕಿದೆ: ರೆಸಾರ್ಟ್‌ ಬಳಿ ಮಾತನಾಡಿದ ಸಚಿವ ಸಾ.ರಾ.ಮಹೇಶ್‌, ‘ನಾವೆಲ್ಲರೂ ಮನುಷ್ಯರು. ನಮಗೂ ಖಾಸಗಿ ಬದುಕಿದೆ. ಮುಖ್ಯಮಂತ್ರಿ ಹಾಗೂ ಅವರ ಕುಟುಂಬಸ್ಥರು ವಿಶ್ರಾಂತಿಗಾಗಿ ಬಂದಿದ್ದಾರೆ. ಕೆಲವೊಮ್ಮೆ ಯಂತ್ರಗಳೇ ಕೈಕೊಡುತ್ತವೆ ಅಲ್ಲವೇ? ಜಿಲ್ಲೆಯ ಯಾವ ದೇವಸ್ಥಾನ ಅಥವಾ ಪ್ರವಾಸಿ ತಾಣಕ್ಕೂ ಕುಮಾರಸ್ವಾಮಿ ಭೇಟಿ ನೀಡುತ್ತಿಲ್ಲ’ ಎಂದು ಹೇಳಿದರು.

‘ಕುಮಾರಸ್ವಾಮಿ ಹಾಗೂ ‘ಮೈತ್ರಿ’ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒಂದೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿದ್ದಕ್ಕೆ ವಿಶೇಷ ಅರ್ಥಬೇಡ. ಕೊಡಗು ಚೇತರಿಸಿಕೊಂಡು ಪ್ರವಾಸಿಗರ ವಾಸ್ತವ್ಯಕ್ಕೆಸುರಕ್ಷಿತವಾಗಿದೆ ಎಂದು ತಿಳಿಸಲು ಹಾಲಿ–ಮಾಜಿ ಮುಖ್ಯಮಂತ್ರಿ ಒಂದೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿದ್ದಾರೆ’ ಎಂದು ಸಚಿವರು ಹೇಳಿದರು.

ಭಾನುವಾರ ಬೆಳಿಗ್ಗೆ 11ರ ವೇಳೆಗೆ ಕುಮಾರಸ್ವಾಮಿ ಹಾಗೂ ಕುಟುಂಬದವರು ಇಲ್ಲಿಂದ ಹೊರಡಲಿದ್ದಾರೆ. ಮದ್ದೂರಿನಲ್ಲಿ ನಡೆಯುವ ಮದುವೆ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳೆ ಭೇಟಿಗೆ ಸಿಗದ ಅವಕಾಶ: ಮುಖ್ಯಮಂತ್ರಿ ಭೇಟಿಗೆಂದು ಶನಿವಾರ ಬಂದಿದ್ದ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನ ಖೈರುನ್ನೀಸಾ, ಅವಕಾಶ ಸಿಗದೆ ವಾಪಸ್‌ ತೆರಳಿದರು.

ಅವರ ಪುತ್ರ ಯಾಸೀನ್‌ ಬಟ್ಟೆ ಅಂಗಡಿ ನಡೆಸುತ್ತಿದ್ದು ಬ್ಯಾಂಕ್‌ವೊಂದರಲ್ಲಿ ₹ 2 ಲಕ್ಷ ಸಾಲ ಪಡೆದಿದ್ದರು. ಸಾಲ ಮರು ಪಾವತಿಸದ ಕಾರಣ ನೋಟಿಸ್‌ ಬಂದಿತ್ತು. ಅದರಿಂದ ಭಯಗೊಂಡು ಮನವಿ ಸಲ್ಲಿಸಲು ಖೈರುನ್ನೀಸಾ ಬಂದಿದ್ದರು.

ಯಡಿಯೂರಪ್ಪ ಹೇಳಿಕೆಗೆ ಸಾ.ರಾ. ಮಹೇಶ್‌ ತಿರುಗೇಟು

‘ಮೇ 23ರ ಬಳಿಕ ಕೇಂದ್ರ ಸರ್ಕಾರ ಬದಲಾವಣೆ ಆಗುತ್ತದೆಯೇ ಹೊರತು ರಾಜ್ಯ ಸರ್ಕಾರವಲ್ಲ’ ಎಂದು ಸಚಿವ ಸಾ.ರಾ. ಮಹೇಶ್ ಇಲ್ಲಿ ಹೇಳಿದರು.

‘ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸರ್ಕಾರ ಉರುಳಿಸುವ ಪ್ರಯತ್ನ ನಡೆಯುತ್ತಿದೆ.23ರ ನಂತರ ಕೇಂದ್ರ ಸರ್ಕಾರದ ಸ್ಥಿತಿ ಏನಾಗಲಿದೆ ಎಂಬುದನ್ನು ಬಿ.ಎಸ್‌. ಯಡಿಯೂರ‍ಪ್ಪ ಮೊದಲು ನೋಡಿಕೊಳ್ಳಲಿ’ ಎಂದು ಹೇಳಿದರು.

ಸಚಿವ ಸಿ.ಎಸ್‌. ಪುಟ್ಟರಾಜು ಮಾತನಾಡಿ, ‘ಯುಡಿಯೂರಪ್ಪ ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ನೋಡಿಕೊಳ್ಳಲಿ; ಆ ನಂತರ ಬೇರೆಯವರ ತಟ್ಟೆಯಲ್ಲಿನ ನೊಣ ಹುಡುಕಲಿ’ ಎಂದು ಟಾಂಗ್‌ ನೀಡಿದರು.

‘ಯಡಿಯೂರಪ್ಪ ಮಾತಿಗೆ ಈಗ ಕಿಮ್ಮತ್ತಿಲ್ಲ. ಅವರು ಹಲವು ದಿನಗಳಿಂದಲೂ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿದ್ದಾರೆ. ಅದು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT