ಬುಧವಾರ, ಆಗಸ್ಟ್ 21, 2019
22 °C
147 ಮನೆಗೆ ಭಾಗಶಃ ಹಾನಿ, ಜಿಲ್ಲಾಡಳಿತದಿಂದ ಪ್ರಾಥಮಿಕ ಮಾಹಿತಿ

ಪ್ರವಾಹ- ಭಾರಿ ಮಳೆ: ಕುಸಿದವು 90 ಆಶ್ರಯ ತಾಣಗಳು

Published:
Updated:
Prajavani

ಮಡಿಕೇರಿ: ಕೊಡಗಿನಲ್ಲಿ ಒಂದುವಾರ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಹಲವು ಮನೆಗಳು ಕುಸಿದಿವೆ. ಭತ್ತದ ಗದ್ದೆಯಲ್ಲಿ ಕೆಸರು ಮಣ್ಣು ಬಂದು ನಿಂತಿದೆ. ತೋಟಗಳಲ್ಲಿ ಕಾಫಿಗೆ ಕೊಳೆರೋಗ ಆರಂಭವಾಗಿದೆ. ಎರಡನೇ ವರ್ಷವೂ ಮಳೆಯಿಂದ ಕೊಡಗಿನ ರೈತರು ಸಮಸ್ಯೆಗೆ ಸಿಲುಕಿದ್ದಾರೆ.

ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದ್ದು ತಕ್ಷಣವೇ ನಷ್ಟದ ವಿವರ ಸಲ್ಲಿಸಲು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಸೂಚಿಸಿದ್ದಾರೆ. ಮಳೆ ಸ್ವಲ್ಪ ಬಿಡುವು ನೀಡಿದ್ದು ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಮಾಹಿತಿ ಸಂಗ್ರಹಿಸಲು ಗ್ರಾಮೀಣ ಪ್ರದೇಶಗಳತ್ತ ತೆರಳುತ್ತಿದ್ದಾರೆ.

ಕುಸಿದ ಮನೆ ವಿವರ:

ಪ್ರಾಥಮಿಕ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 90 ಮನೆಗಳು ಪ್ರವಾಹದ ಪಾಲಾಗಿವೆ. 147 ಮನೆಗಳು ಭಾಗಶಃ ಹಾನಿಗೆ ತುತ್ತಾಗಿವೆ.

ದಕ್ಷಿಣ ಕೊಡಗಿನಲ್ಲಿ ಭಾರಿ ಮಳೆಯಾಗಿದ್ದ ‍ಪರಿಣಾಮ, ವಿರಾಜಪೇಟೆ ತಾಲ್ಲೂಕಿನಲ್ಲೇ 41 ಮನೆ ಪೂರ್ಣ ಹಾನಿಗೆ ತುತ್ತಾಗಿವೆ. 42 ಮನೆಗಳು ಭಾಗಶಃ ಹಾನಿಗೀಡಾಗಿವೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 34 ಮನೆಗಳು ಪೂರ್ಣ ಕುಸಿದರೆ, 73 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 15 ಮನೆಗಳು ಪೂರ್ಣ ಕುಸಿದಿವೆ. 32 ಮನೆಗಳು ಭಾಗಶಃ ಹಾನಿಯಾಗಿವೆ. ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರ ಕೇಂದ್ರ ಸೇರಿದ್ದಾರೆ.

ನದಿಪಾತ್ರದ ಜನರಲ್ಲಿ ಆತಂಕ:

2018ರಲ್ಲಿ ಬೆಟ್ಟದ ನಿವಾಸಿಗಳಿಗೆ ವರುಣ ಆತಂಕ ತಂದೊಡಿದ್ದ. ಈ ವರ್ಷ ನದಿಪಾತ್ರದ ನಿವಾಸಿಗಳಿಗೆ ಮಳೆ ಆತಂಕ ತಂದಿದೆ. ಸಿದ್ದಾಪುರದ ಸುತ್ತಮುತ್ತ ಹಲವು ಗ್ರಾಮಗಳು ನದಿಪಾತ್ರದಲ್ಲಿವೆ. ಅದರೊಂದಿಗೆ ಕುಶಾಲನಗರದ ಹಲವು ಬಡಾವಣೆಗಳೂ ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ ಎನ್ನುವ ಪ್ರಶ್ನೆ ಈಗ ಎದುರಾಗಿದೆ.

ಭೀಕರ ಪ್ರವಾಹ:

ಜಿಲ್ಲೆಯ 79 ಪ್ರದೇಶಗಳು ಈ ವರ್ಷ ಭೀಕರ ಪ್ರವಾಹ ಎದುರಿಸಿದ್ದವು. ನದಿಯಲ್ಲಿ ನೀರು ಏರುತ್ತಿದ್ದಂತೆಯೇ ತೊಟ್ಟ ಬಟ್ಟೆಯಲ್ಲಿಯೇ ಎಷ್ಟೋ ಮಂದಿ ಮನೆ ಖಾಲಿ ಮಾಡಿದ್ದರು. ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಪರಂಬು ಪೈಸಾರಿ, ಹೊದವಾಡ, ಕೊಂಡಂಗೇರಿ, ಕುಂಬಾರಗುಂಡಿ, ಬೆಟ್ಟದಕಾಡು, ವಾಲ್ನೂರು– ತ್ಯಾಗತ್ತೂರು, ಕಾನೂರು, ಬೆಕ್ಕೆಸೊಡ್ಲೂರು, ಅರ‍್ವತ್ತೊಕ್ಲು, ನಿಟ್ಟೂರು, ಕದನೂರು, ಬಿರುನಾಣಿ, ಬೇತ್ರಿ ಭಾಗದಲ್ಲಿ ಹಲವು ಮನೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)