ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಪ್ರವಾಸಿ ತಾಣಗಳಲ್ಲಿ ಸೌಕರ್ಯಗಳಿಲ್ಲ

ಸೋಮವಾರಪೇಟೆ ತಾಲ್ಲೂಕಿನಲ್ಲಿವೆ ಹಲವು ಪ್ರವಾಸಿತಾಣಗಳು, ಬೇಕಿದೆ ಅವುಗಳಿಗೆ ಕಾಯಕಲ್ಪ
ಲೋಕೇಶ್. ಡಿ.ಪಿ
Published 25 ಜನವರಿ 2024, 5:03 IST
Last Updated 25 ಜನವರಿ 2024, 5:03 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದರೂ, ಇಂದಿಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಅವು ಪ್ರವಾಸಿಗರಿಂದ ದೂರವೇ ಉಳಿದಿವೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ಮಾತ್ರ ನೀಡುತ್ತಿದ್ದಾರೆ. ವೇದಿಕೆಗಳಲ್ಲಿ ಪ್ರವಾಸಿತಾಣಗಳ ಅಭಿವೃದ್ಧಿಗೆ ಹಣ ಮೀಸಲಿಡಲಾಗುವುದು. ಇನ್ನೇನು ಎಲ್ಲ ಸಮಸ್ಯೆ ಪರಿಹಾರವಾಗುವುದು ಎಂದು ಹೇಳುತ್ತಾರೆ. ಆದರೆ, ಅವು ಯಾವುವೂ ಕಾರ್ಯರೂಪಕ್ಕೆ ಬರುತ್ತಿಲ್ಲ.

ಪ್ರವಾಸಿತಾಣಗಳ ಅಭಿವೃದ್ಧಿಗೆ ಪ್ರತಿ ವರ್ಷವೂ ಭರವಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ನೀಡಿದ ಅಲ್ಪಸ್ವಲ್ಪ ಅನುದಾನವೂ ಸರಿಯಾಗಿ ಬಳಕೆಯಾಗದೆ, ನಿರರ್ಥಕವಾಗುತ್ತಿದೆ ಎಂದು ಹಲವರು ದೂರುತ್ತಾರೆ.

ಕೊಡಗನ್ನು ಅವರಿಸಿರುವ ಪಶ್ಚಿಮಘಟ್ಟ ಸರಹದ್ದಿನ ಬೆಟ್ಟದ ಸಾಲುಗಳು, ಹಸಿರು ವೈಭವ ಕಣ್ಣಿಗೆ ಹಬ್ಬವಾಗಿದೆ. ಪಶ್ಚಿಮಘಟ್ಟ ಬೆಟ್ಟ ಶ್ರೇಣಿಯ ಪುಷ್ಪಗಿರಿ ಬೆಟ್ಟ ಹಾಗೂ ಕೋಟೆ ಬೆಟ್ಟ ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. ಇದರೊಂದಿಗೆ ಮಕ್ಕಳಗುಡಿ ಬೆಟ್ಟ, ಹೊನ್ನಮ್ಮನ ಕೆರೆ ಬೆಟ್ಟ ಸೇರಿದಂತೆ ಹಲವು ಬೆಟ್ಟಗಳಿದ್ದು, ಇವುಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿದಲ್ಲಿ ಚಾರಣ ಮತ್ತು ಸಾಹಸ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ.

ತಾಲ್ಲೂಕಿನಲ್ಲಿ ಪ್ರಕೃತಿ ಸೌಂದರ್ಯವನ್ನೇ ತನ್ನೊಡಲಲ್ಲಿಟ್ಟುಕೊಂಡಿರುವ ಬೆಟ್ಟವೊಂದು ಸಮೀಪದ ಸಿಂಗನಳ್ಳಿ ಗ್ರಾಮದಲ್ಲಿದೆ. ಸೌಂದರ್ಯದ ಖಣಿ ಎನಿಸಿದ ಭತ್ತದ ರಾಶಿ ಬೆಟ್ಟಕ್ಕೆ ಇತ್ತೀಚೆಗೆ ಸ್ವಲ್ಪ ರಸ್ತೆ ಮಾಡಿರುವುದು ಹೊರತುಪಡಿಸಿದರೆ, ಯಾವುದೇ ಕೆಲಸಗಳಾಗಿಲ್ಲ. ಈ ಬೆಟ್ಟ ಹತ್ತುವುದು, ಇಳಿಯುವುದು ಸುಲಭದ ಹಾದಿ. ಬೆಟ್ಟದ ತುತ್ತ ತುದಿ ತಲುಪಿದರೆಂದರೆ ನಯನ ಮನೋಹರ ದೃಶ್ಯಾವಳಿಗಳು ಗೋಚರಿಸುತ್ತದೆ. ಎತ್ತ ನೋಡಿದರೂ ವೀಕ್ಷಣೆಗೆ ಸಿಗುವ ಈ ತಾಣ ನಿಜಕ್ಕೂ ಚಾರಣಿಗರ, ಪ್ರವಾಸಿಗರ ಸ್ವರ್ಗವೇ ಸರಿ. ಇಲ್ಲಿಗೆ ಪ್ರವಾಸಿಗರು ಬರುವಂತಾದರೆ ಗ್ರಾಮವೂ ಅಭಿವೃದ್ಧಿ ಹೊಂದುತ್ತದೆ. ಉತ್ತಮ ರಸ್ತೆ, ಮೂಲಸೌಕರ್ಯಗಳು ದೊರೆತರೆ, ಈ ತಾಣ ಪ್ರವಾಸಿಗರ ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ. ಮೊದಲು ಸಿಂಗನಳ್ಳಿ ಎಂಬ ಕುಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿಕೊಡುವ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಸ್ಥಳೀಯರಾದ ಎ.ಕೆ. ಮಾಚಯ್ಯ ಮನವಿ ಮಾಡುತ್ತಾರೆ.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲೂ ಹೆಸರು ಗಳಿಸಿದೆ. ಹಲವು ವರ್ಷಗಳ ಹೋರಾಟದ ನಂತರ ಇಲ್ಲಿಗೆ ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲವು ಕಾಮಗಾರಿಗಳಾದರೂ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲ.

ಇಲ್ಲಿ ಆರಂಭವಾಗಿರುವ ಕೆಲವು ಕಾಮಗಾರಿಗಳೂ ಪೂರ್ಣಗೊಂಡಿಲ್ಲ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಸರಿಯಾದ ಭದ್ರತೆ ಇಲ್ಲ. ಕೇವಲ ಪ್ರವಾಸಿಗರಿಂದ ವೀಕ್ಷಣೆಗೆ ಶುಲ್ಕ ಮಾತ್ರ ಇಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬುದು ಪ್ರವಾಸಿಗರ ದೂರಾಗಿದೆ.

ಕಳೆದ ಹಲವು ವರ್ಷಗಳಿಂದ ಜಲಪಾತ ಸೌಂದರ್ಯ ಹಾಗೂ ಹೊನ್ನಮ್ಮನ ಕೆರೆಯ ಏರಿ ಮೇಲಿನ ಬೆಟ್ಟಕ್ಕೆ ‘ರೂಪ್ ವೇ’ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕೇವಲ ಭರವಸೆಗಳನ್ನು ಮಾತ್ರ ನೀಡಲಾಗುತ್ತಿದೆ. ಯಾವುದೂ ಕಾರ್ಯಗತವಾಗಿಲ್ಲ.

ವಾರ್ಷಿಕ ಮಳೆಗಾಲ ಪ್ರಾರಂಭವಾದೊಡನೆ ಶಾಂತಳ್ಳಿ ಹೋಬಳಿ ಹಾಗೂ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುವುದರಿಂದ ಸಣ್ಣಪುಟ್ಟ ಜಲಪಾತಗಳು ಮೈದುಂಬಿದ್ದು, ದಾರಿಹೋಕರನ್ನು ತಮ್ಮತ್ತ ಆಕರ್ಷಿಸುತ್ತಿವೆ. ಇವುಗಳಲ್ಲಿ ಅಭಿಮಠ ಬಾಚಳ್ಳಿ ಜಲಪಾತ, ಗರ್ವಾಲೆ ಭಾರತೀಯ ವಿದ್ಯಾಭವನದ ಎದುರಿನ ಜ್ಞಾನಗಂಗಾ ಜಲಪಾತ, ಗರ್ವಾಲೆ ಸಮೀಪದ ಸೂರ್ಲಬ್ಬಿ ಗ್ರಾಮದ ಮೇದುರ ಜಲಪಾತ, ಐಗೂರು ಗ್ರಾಮದ ಚೋರನ ಜಲಪಾತ ಸೇರಿದಂತೆ ಸಾಕಷ್ಟು ಜಲಪಾತಗಳು ಮೈದೆಳೆಯುತ್ತವೆ. ಆದರೆ, ಯಾವುದಕ್ಕೂ ವೀಕ್ಷಣೆಗೆ ಸರಿಯಾದ ವ್ಯವಸ್ಥೆಗಳಿಲ್ಲದೆ, ಸ್ಥಳಕ್ಕೆ ತೆರಳಲು ಅವಕಾಶ ಇಲ್ಲದಿರುವುದರಿಂದ ಅವು ಜನರಿಂದ ದೂರವೇ ಉಳಿಯುತ್ತಿವೆ.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಮಳೆಯಾಗುವುದರಿಂದ ಯಾವುದೇ ಕೃಷಿ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಕಾಡಾನೆ, ಕಾಡೆಮ್ಮೆಗಳ ಹಾವಳಿ ಬೇರೆ ಇದ್ದು, ಬೆಳೆದ ಅಲ್ಪಸ್ವಲ್ಪ ಬೆಳೆಯೂ ಕಾಡು ಪ್ರಾಣಿಗಳ ಪಾಲಾಗುತ್ತದೆ. ಈ ಭಾಗದಲ್ಲಿರುವ ಪ್ರವಾಸಿತಾಣಗಳ ಅಭಿವೃದ್ಧಿಯಾದಲ್ಲಿ ನಮ್ಮ ಜೀವನ ನಡೆಸಲು ಅನುಕೂಲವಾಗುತ್ತದೆ. ಆದರೆ, ರಸ್ತೆ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದಿರುವುದರಿಂದ ಪ್ರವಾಸಿಗರು ಆಗಮಿಸುತ್ತಿಲ್ಲ. ಈ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದಲ್ಲಿ ನಮಗೆ ಸಹಕಾರಿಯಾಗುವುದು ಎಂದು ಮಲ್ಲಳ್ಳಿಯ ಚಂದ್ರಶೇಖರ್ ಹೇಳಿದರು.

ಸೋಮವಾರಪೇಟೆ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆ ದೃಶ್ಯ.
ಸೋಮವಾರಪೇಟೆ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆ ದೃಶ್ಯ.
ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರ ಬೆಟ್ಟದಲ್ಲಿನ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ.
ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರ ಬೆಟ್ಟದಲ್ಲಿನ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ.
ಸೋಮವಾರಪೇಟೆ ತಾಲ್ಲೂಕಿನ ಮೇರನಕೋಟೆ ಬೆಟ್ಟದಲ್ಲಿ ಚಾರಣ ಮಾಡುತ್ತಿರುವ ಪ್ರವಾಸಿಗರು.
ಸೋಮವಾರಪೇಟೆ ತಾಲ್ಲೂಕಿನ ಮೇರನಕೋಟೆ ಬೆಟ್ಟದಲ್ಲಿ ಚಾರಣ ಮಾಡುತ್ತಿರುವ ಪ್ರವಾಸಿಗರು.

ಹಲವು ಜಲಪಾತಗಳ ವೀಕ್ಷಣೆಗೆ ಇಲ್ಲ ವ್ಯವಸ್ಥೆ ಹೆಸರಾಂತ ಮಲ್ಲಳ್ಳಿ ಜಲಪಾತದಲ್ಲೂ ಮೂಲಸೌಕರ್ಯದ ಕೊರತೆ ಅಭಿವೃದ್ಧಿಗೆ ಆಗ್ರಹಿಸಿ ಜನಸಾಮಾನ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT