ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸಲ್ಮಾನರು ರಾಷ್ಟ್ರ ತ್ಯಾಗ ಮಾಡಲು ಸಿದ್ಧರಿಲ್ಲ: ಎನ್‌.ಎ ಹ್ಯಾರಿಸ್‌

ಮಡಿಕೇರಿ: ‘ಸಮಸ್ತ ಮಹಾ ಸಮ್ಮೇಳನ’ದಲ್ಲಿ ಶಾಸಕ ಎನ್‌.ಎ. ಹ್ಯಾರೀಸ್‌ ಹೇಳಿಕೆ
Last Updated 17 ಡಿಸೆಂಬರ್ 2019, 15:01 IST
ಅಕ್ಷರ ಗಾತ್ರ

ಮಡಿಕೇರಿ: ‘ಮುಸಲ್ಮಾನರು ತಮ್ಮ ಪ್ರಾಣ ತ್ಯಾಗ ಮಾಡಬಹುದು. ಆದರೆ, ರಾಷ್ಟ್ರ ತ್ಯಾಗ ಮಾಡಲು ಸಿದ್ಧರಿಲ್ಲ’ ಎಂದು ಎಂದು ಬೆಂಗಳೂರು ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರೀಸ್‌ ಅಭಿಪ್ರಾಯಪಟ್ಟರು.

ರಾಜ್ಯ ಫೈಝೀಸ್ ಅಸೋಸಿಯೇಷನ್ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ‘ಸಮಸ್ತ ಮಹಾಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ದೇಶದ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಾವು ಈ ದೇಶಕ್ಕೆ ನಿನ್ನೆ–ಮೊನ್ನೆ ಬಂದವರಲ್ಲ. ದೇಶದ ಹಕ್ಕನ್ನು ನಾವು ಕಾಪಾಡಿಕೊಂಡು ಬಂದವರು’ ಎಂದು ಹ್ಯಾರೀಸ್‌ ನುಡಿದರು.

‘ಈ ದೇಶದಲ್ಲೇ ನಾವೂ ಜೀವನ ಜನಿಸಿದ್ದೇವೆ. ಯಾರಿಂದಲೂ ನಮ್ಮನ್ನು ಇಲ್ಲಿಂದ ಹೊರಹಾಕಲು ಸಾಧ್ಯವಿಲ್ಲ. ಯಾರಿಗೆ ಬೇಕಾದರೂ ನಾಗರಿಕತೆ ಕೊಟ್ಟರೂ ಪರವಾಗಿಲ್ಲ. ಆದರೆ, ನಮ್ಮನ್ನು ಹೊರಗಿಡುವ ಪ್ರಯತ್ನ ಸರಿಯಲ್ಲ. ಹೊರ ಹಾಕುವುದಿದ್ದರೆ ಎಲ್ಲರನ್ನೂ ಹೊರಹಾಕಲಿ’ ಎಂದು ಕೇಂದ್ರಕ್ಕೆ ಎಚ್ಚರಿಸಿದರು.

‘ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದೊಯ್ಯುವ ಸಂಸ್ಕಾರ ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದಾರೆ. ಅದನ್ನೇ ನಾವೆಲ್ಲರೂ ಪಾಲಿಸುತ್ತಿದ್ದೆವೆ’ ಎಂದು ಹೇಳಿದರು.

‘ಸಂಖ್ಯಾಬಲದ ಆಧಾರದ ಮೇಲೆ ಸಂವಿಧಾನವನ್ನು ಬದಲಾಯಿಸಲು ಕೆಲವು ನಾಯಕರು ಮುಂದಾಗಿದ್ದಾರೆ. ನಿಮ್ಮ ಯಾವುದೇ ಷಡ್ಯಂತ್ರಕ್ಕೆ ನಾವು ಬಲಿಯಾಗುವುದಿಲ್ಲ. ದೇಶ ವಿರೋಧಿಗಳನ್ನು ನಾವು ಕಠೋರವಾಗಿ ವಿರೋಧ ಮಾಡುತ್ತೇವೆ’ ಎಂದು ಹೇಳಿದರು.

ಎಸ್‌ಕೆಎಸ್‌ಎಸ್‌ಎಫ್ಎಫ್ ರಾಜ್ಯ ಘಟಕದ ಅಧ್ಯಕ್ಷ ಅನೀಸ್ ಕೌಸರಿ ಮಾತನಾಡಿ, ‘60ನೇ ವಾರ್ಷಿಕ ಮಹಾಸಮ್ಮೇಳನವು ಇದೇ 27ರಿಂದ 29ರ ವರೆಗೆ ಕೇರಳದಲ್ಲಿ ನಡೆಯಲಿದೆ. ಅದರ ಪ್ರಚಾರಾರ್ಥವಾಗಿ ಈ ಮಹಾಸಮ್ಮೇಳನವನ್ನು ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದು ಸದ್ಯ ಯಶಸ್ವಿಯಾಗಿದೆ. ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರಿನಿಂದ ಜನರು ಸಮಾವೇಶಕ್ಕೆ ಬಂದಿರುವುದು ಸಂತೋಷ ತಂದಿದೆ’ ಎಂದರು.

ಸಮಸ್ತದ ಅಧೀನದಲ್ಲಿ 10 ಸಾವಿರಕ್ಕೂ ಹೆಚ್ಚು ಮದರಸಗಳು ಕಾರ್ಯ ನಿರ್ವಹಿಸುತ್ತಾ ಬಂದಿದೆ. ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ನಮ್ಮ ತಂಡವು ಎಲ್ಲ ಸಮುದಾಯದ ಜನರಿಗೂ ನೆರವು ನೀಡಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ‌.ಯಾಕೂಬ್ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಓಣಂಬಳ್ಳಿ ಮುಹಮ್ಮದ್ ಫೈಝಿ, ಅಬ್ದುಲ್ಲಾ ಫೈಝಿ ಕೊಡಗು, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್, ಉಸ್ಮಾನ್ ಹಾಜಿ ಸಿದ್ದಾಪುರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT