ಮಡಿಕೇರಿ: ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ವ್ಯಾಪ್ತಿಯಿಂದ ಇನ್ನೂ ಹಲವು ಮಂದಿ ದೂರ ಉಳಿದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಅರ್ಜಿ ಹಾಕಿದವರಿಗಷ್ಟೇ ಯೋಜನೆಯ ಲಾಭ ಕೊಡುವುದು ಅಧಿಕಾರಿಗಳ ಕೆಲಸ ಅಲ್ಲ. ಅರ್ಜಿ ಹಾಕದ ಅರ್ಹರನ್ನು ಗುರುತಿಸಿ ಅವರಿಂದ ಅರ್ಜಿ ಪಡೆದು ಯೋಜನೆಯ ವ್ಯಾಪ್ತಿಗೆ ಅವರೂ ಒಳಗೊಳ್ಳುವಂತೆ ಮಾಡುವುದೂ ಅಧಿಕಾರಿಗಳ ಕೆಲಸ ಎಂದು ಇಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪಷ್ಟವಾಗಿ ಸೂಚಿಸಿದರು.
ಇದಕ್ಕಾಗಿ ನವೆಂಬರ್ ತಿಂಗಳಲ್ಲಿ ಗ್ಯಾರಂಟಿ ಯೋಜನಾ ಸಪ್ತಾಹ ಮಾಡಬೇಕು. ಈ ವೇಳೆ ಪ್ರತಿ ಮನೆ ಮನೆಗೂ ಭೇಟಿ ನೀಡಿ ಅರ್ಹರನ್ನು ಯೋಜನಾ ವ್ಯಾಪ್ತಿಗೆ ತರಬೇಕು ಎಂದು ನಿರ್ದೇಶನ ನೀಡಿದರು.
ಪ್ರತಿ ಯೋಜನೆಯ ಅಂಕಿ ಅಂಶ ಪಡೆದ ಅವರು, ವಿವಿಧ ಇಲಾಖೆಯ ಅಧಿಕಾರಿಗಳಿಂದಲೂ ದತ್ತಾಂಶ ಪಡೆದು ಒಂದಕ್ಕೊಂದು ತಾಳೆ ಮಾಡಿದರು. ಸರಿ ಹೊಂದದೇ ಇರುವುದನ್ನು ಗಮನಿಸಿದ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಿಡಿಕಾರಿದರು.
‘ಇದೊಂದು ಜನರ ಕಣ್ಣೀರನ್ನು ಒರೆಸುವಂತಹ ಪುಣ್ಯದ ಕೆಲಸ. ದೇಶದಲ್ಲೆ ಹೊಸದಾದ ಈ ಯೋಜನೆಗಳನ್ನು ಜಾರಿ ಮಾಡುವಂತಹ ಐತಿಹಾಸಿಕ ಕಾರ್ಯದಲ್ಲಿ ನಿರತರಾಗಿದ್ದೀರಿ ಎನ್ನುವುದನ್ನು ಮರೆಯಬಾರದು’ ಎಂದು ಹೇಳಿದ ಅವರು, ‘ಇದು ಕೇವಲ ಪ್ರಗತಿ ಪರಿಶೀಲನಾ ಸಭೆಯಲ್ಲ. ಇದೊಂದು ಅಧಿಕಾರಿಗಳಿಗೆ ಎಚ್ಚರಿಕೆಯ ಸಭೆ’ ಎಂದೂ ತಿಳಿಸಿದರು.
‘ಅನುಷ್ಠಾನದಲ್ಲಿ ಯಾವುದೇ ಲೋಪ ಆಗಬಾರದು ಎಂದು ಸರ್ಕಾರ ಉಸ್ತುವಾರಿಗಾಗಿ ಸಮಿತಿ ಮಾಡಿದೆ. ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶ. ಅಧಿಕಾರಿಗಳೂ ಅಷ್ಟೇ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.
ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳು ಗ್ರಾಮ ಆಡಳಿತ ಅಧಿಕಾರಿಗಳು, ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಮನೆ ಮನೆ ಸಮೀಕ್ಷೆ ಮಾಡಿ ಗ್ಯಾರಂಟಿ ಯೋಜನೆಯಿಂದ ಯಾರು ದೂರವಿದ್ದಾರೆ. ಗ್ಯಾರಂಟಿ ಯೋಜನೆ ಇದುವರೆಗೆ ಪಡೆಯದಿರಲು ಕಾರಣವೇನು, ಮತ್ತಿತರ ಬಗ್ಗೆ ಮಾಹಿತಿ ಪಡೆಯಬೇಕು. ಜೊತೆಗೆ ಅಗತ್ಯ ದಾಖಲೆಗಳು ಇಲ್ಲದಿರುವವರು ಸಹ ಇದ್ದು, ಅಂತಹ ಕುಟುಂಬಗಳಿಗೆ ದಾಖಲೆಗಳನ್ನು ಒದಗಿಸುವ ಮೂಲಕ ಗ್ಯಾರಂಟಿ ಯೋಜನೆ ಪ್ರಗತಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಮಹಿಳೆಯ ಯಜಮಾನಿ ಎಂದು ನಮೂದಾಗಿರುವ ಪಡಿತರ ಚೀಟಿಗಳ ಸಂಖ್ಯೆ 1.31 ಲಕ್ಷ. ಆದರೆ, ಅರ್ಜಿ ಹಾಕಿದವರು 1.16 ಲಕ್ಷ. ಇನ್ನುಳಿದ 14 ಸಾವಿರಕ್ಕೂ ಅಧಿಕ ಮಂದಿ ಏಕೆ ಈ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂಬುದನ್ನು ಪರಿಶೀಲಿಸಿದ್ದೀರಾ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್ ಅವರನ್ನು ಪ್ರಶ್ನಿಸಿದರು.
ಈಗ ಅರ್ಜಿ ಹಾಕಿದವರ ಪೈಕಿ 1,089 ಮಂದಿ ಬ್ಯಾಂಕಿನಲ್ಲಿ ಕೆವೈಸಿ ಮಾಡಿಸಿಲ್ಲ. ಈ ಕುರಿತು ಏನು ಕ್ರಮ ಕೈಗೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಅವರನ್ನು ಸಭೆಗೆ ಕರೆಸಿ, ಈ ಕುರಿತು ವಿಶೇಷ ಆಂದೋಲನ ಮಾಡಬೇಕು. ಬಡವರ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.
ಶಕ್ತಿ ಯೋಜನೆಯ ಪ್ರಗತಿ ಪರಿಶೀಲನೆ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯನ್ನು ಸಮಿತಿಯ ಸದಸ್ಯರು ಪ್ರಸ್ತಾಪಿಸಿ ಗಮನ ಸೆಳೆದರು. ಈ ಕುರಿತೂ ಸುದೀರ್ಘ ಚರ್ಚೆ ನಡೆದು, ಹೆಚ್ಚು ಬಸ್‌ಗಳನ್ನು ನಿಯೋಜಿಸಲು ಅವರು ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಮಹಮದ್ ಅಲಿ ಅವರಿಗೆ ಸೂಚಿಸಿದರು.
‘ಅನ್ನಭಾಗ್ಯ’ ಯೋಜನೆಯ ಚರ್ಚೆ ಬಂದಾಗ ಸಮಿತಿ ಸದಸ್ಯರು ಒಕ್ಕೊರಲಿನಿಂದ ಬಿಪಿಎಲ್ ಪಡಿತರ ಚೀಟಿ ರದ್ದತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಪಡಿತರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ ಅವರು, ‘ಒಟ್ಟು ಜಿಲ್ಲೆಯಲ್ಲಿ 15,790 ಪಡಿತರ ಚೀಟಿಗಳು ರದ್ದಾಗಿವೆ’ ಎಂಬ ಮಾಹಿತಿ ನೀಡುತ್ತಿದ್ದಂತೆ, ಸಮಿತಿ ಸದಸ್ಯರು ಇವುಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲಾಗಿದೆ ಎಂದು ಹರಿಹಾಯ್ದರು. ಈ ಕುರಿತು ಸಮೀಕ್ಷೆ ನಡೆಸುವಂತೆ ಪುಷ್ಪಾ ಅಮರನಾಥ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಗ್ಯಾರಂಟಿ ಯೋಜನಾ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಪ್ರಶಾಂತ್, ಶರಿ ಗಿರೀಶ, ಕೆ.ಸಿ.ಭೀಮಯ್ಯ, ನಾಸೀರ್, ಅಣ್ಣಯ್ಯ, ಕೆ.ಎಂ.ಬಸೀರ್, ಮುಸ್ತಫ, ಧನ್ಯ, ಕೆ.ಜಿ.ಫೀಟರ್, ಕಾಂತರಾಜು, ಮಂದ್ರೀರ ಮೋಹನ್ ದಾಸ್, ಜಾನ್ಸನ್ ಭಾಗವಹಿಸಿದ್ದರು.
ಗ್ಯಾರಂಟಿ ಯೋಜನೆಗಳ ಫಲಕ ಅಳವಡಿಸಲು ಸೂಚನೆ
ಎಲ್ಲ 5 ಗ್ಯಾರಂಟಿ ಯೋಜನೆಗಳ ಕುರಿತು ಜಿಲ್ಲಾ ಪಂಚಾಯಿತಿ ಸೇರಿದಂತೆ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸಬೇಕು ಎಂದು ಪುಷ್ಪಾ ಅಮರನಾಥ್ ಸೂಚಿಸಿದರು. ‘ಚುನಾವಣೆ ಇದ್ದುದ್ದಕ್ಕೆ ಫಲಕ ಅಳಡಿಸಿಲ್ಲ’ ಎಂಬ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರ ಸಮಜಾಯಿಷಿ ಒಪ್ಪದ ಅವರು ‘ಚುನಾವಣೆ ಮುಗಿದು ಎಷ್ಟು ದಿನಗಳು ಆದವು. ಇನ್ನೂ ಏಕೆ ಅಳವಡಿಸಿಲ್ಲ? ದಸರೆ ಹೊತ್ತಿಗೆ ಈ ಕೆಲಸ ಆಗಲೇಬೇಕು’ ಎಂದು ನಿರ್ದೇಶನ ನೀಡಿದರು.
‘ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ’
ಸಮಿತಿಯ ಸದಸ್ಯರ ಗ್ಯಾರಂಟಿ ಯೋಜನೆಗಳ ಕುರಿತು ಮಾಡಲಾಗುತ್ತಿರುವ ಟೀಕೆಗಳನ್ನು ಗಮನಕ್ಕೆ ತಂದಾಗ ಪುಷ್ಪಾ ಅಮರನಾಥ್ ಅವರು ‘ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬುದನ್ನು ಮರೆಯಬಾರದು. ಟೀಕೆಗಳು ವಿಮರ್ಶೆಗಳು ಇದ್ದಾಗ ಮಾತ್ರ ನಾವು ಹೆಚ್ಚಿನ ಕೆಲಸ ಮಾಡಲು ಸಾಧ್ಯ. ಅಧಿಕಾರಿಗಳು ಈ ಯೋಜನೆಗಳ ಜಾರಿಗೆ ಇನ್ನಷ್ಟು ಕಾರ್ಯತತ್ಪರರಾಗಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.