ಬುಧವಾರ, ಡಿಸೆಂಬರ್ 7, 2022
21 °C
ಕಾಡಾನೆ ಸಮಸ್ಯೆ: ಕರಡಿಗೋಡಿನಲ್ಲಿ ವಿವಿಧ ಸಂಘಟನೆಗಳ ಮುಖಂಡರ ಬಹಿಷ್ಕಾರ

ಉನ್ನತಮಟ್ಟದ ಸಮಿತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಕಾಡಾನೆ ಸಮಸ್ಯೆ ಪರಿಹಾರ ಕುರಿತ ‍ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್‌ಕಿಶೋರ್‌ ಸಿಂಗ್ ನೇತೃತ್ವದ 7 ಮಂದಿಯ ಉನ್ನತಮಟ್ಟದ ಸಮಿತಿ ಮಂಗಳವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಎಲ್ಲೆಡೆಯಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ.

ಆನೆಗಳು ಬಾರದಂತೆ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ತುರ್ತು ಸ್ಪಂದನಾ ತಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದೂ ಹರಿಹಾಯ್ದರು.

ಇಲ್ಲಿನ ಕರಡಿಗೋಡು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಸಭೆಯನ್ನು ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಬಹಿಷ್ಕರಿಸಿದರು. ನ.21 ರಂದು ಹಮ್ಮಿಕೊಂಡಿದ್ದ ಅರಣ್ಯ ಭವನ ಮುತ್ತಿಗೆಯನ್ನು ತಡೆಯಲು ಕಾಟಾಚಾರಕ್ಕೆ ಸಭೆ ಕರೆದಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ‘ಹೋರಾಟದ ತೀವ್ರತೆಯನ್ನು ಕಡಿಮೆ ಮಾಡಲೆಂದೇ ಕಾಟಾಚಾರಕ್ಕೆ ಸಭೆ ಕರೆಯಲಾಗಿದೆ’ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ್ಪ ಮಾತನಾಡಿ, ‘ಕಾಡಾನೆ ಮಾನವ ಸಂಘರ್ಷದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿತನವೂ ಇದೆ’ ಎಂದರು.

ಕಾರ್ಮಿಕ ಮುಖಂಡ ಪಿ.ಆರ್ ಭರತ್ ಮಾತನಾಡಿ, ಕಾಫಿ ತೋಟದಲ್ಲಿ ಕಾರ್ಮಿಕರು ಭಯದ ವಾತಾವರಣದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ. ಅಧಿಕಾರಿಗಳು ಕಾಟಾಚಾರ ಸಭೆಗಳನ್ನು ನಡೆಸುವುದು ಬಿಟ್ಟು ಅರಣ್ಯದಲ್ಲಿ ಆನೆಗಳಿಗೆ ಬೇಕಾದ ಆಹಾರ ಇದೆಯೇ ಎಂಬುದನ್ನು ಪರಿಶೀಲಿಸಲಿ ಎಂದರು.

ಪಿ.ವಿ ಜಾನ್ಸನ್ ಮಾತನಾಡಿ, ‘ಕಾಡಾನೆ ಹಾವಳಿಯಿಂದ ಕಾಫಿ, ಭತ್ತ ಸೇರಿದಂತೆ ಕೃಷಿ ನಾಶವಾಗುತ್ತಿದೆ. ಭತ್ತದ ಗದ್ದೆಯನ್ನು ಪಾಳುಬಿಡುವಂತಾಗಿದೆ. ಕಾಡಾನೆ ದಾಳಿಯಿಂದ ಅಂಗವೈಫಲ್ಯ ಎದುರಿಸುತ್ತಿರುವವರಿಗೆ ಸರ್ಕಾರಿ ಸೂಕ್ತ ಪರಿಹಾರ ೊದಗಿಸಬೇಕು ಎಂದರು.

ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಆರ್.ಕೆ ಸಿಂಗ್, ‘ಜಿಲ್ಲೆಯ ಕಾಡಾನೆ ಹಾವಳಿಯ ಬಗ್ಗೆ ಸಭೆ ನಡೆಸಲಾಗಿದ್ದು, ಜನರ ಅಭಿಪ್ರಾಯವನ್ನು ಪಡೆಯಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.

ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ರೈತ ಸಂಘದ ಜಿಲ್ಲಾ ಕಾನೂನು ಸಲಹೆಗಾರ ಕೆ.ಬಿ ಹೇಮಚಂದ್ರ, ಸಿದ್ದಾಪುರ ಶಾಖೆಯ ಅಧ್ಯಕ್ಷ ದೇವಣೀರ ಬೋಪಣ್ಣ, ಸಂಚಾಲಕ ಚೇನಂಡ ಪೂಣಚ್ಚ, ಕಾರ್ಯದರ್ಶಿ ಎಂ.ವಿ ಸಜೀವನ್, ಕಾರ್ಮಿಕ ಮುಖಂಡ ಎಚ್.ಬಿ ರಮೇಶ್, ಟಿ.ಟಿ ಉದಯಕುಮಾರ್, ಕುಕ್ಕುನೂರು ಮೋಹನ್ ಇದ್ದರು.

ಎಪಿಸಿಸಿಎಫ್ ಮನೋಜ್, ರಂಗರಾವ್, ಎ.ಸಿ.ಸಿ.ಎಫ್ (ಆನೆ ಯೋಜನೆ) ಸರಸ್ವತಿ ಮಿಶ್ರಾ, ಸಿ.ಸಿ.ಎಫ್ ಎಸ್.ಎನ್ ಮೂರ್ತಿ, ಡಿ.ಸಿ.ಎಫ್ ಪೂವಯ್ಯ, ಎ.ಸಿ.ಎಫ್ ನೆಹರು, ವಲಯ ಅರಣ್ಯಾಧಿಕಾರಿಗಳಾದ ಕಳ್ಳೀರ ದೇವಯ್ಯ, ಅಶೋಕ ಹುನಗುಂದ, ಉಪ ವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ ಇದ್ದರು.

ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಸಂದೀಪ್ ಎಂಬ ಯುವಕ ತಂದೆ ಹಾಗೂ ತಾಯಿ, ತಮ್ಮ ಕಿರಿಯ ಮಗನಿಗೆ ಉದ್ಯೋಗ ಕೊಡಿಸಲು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಆರ್.ಕೆ ಸಿಂಗ್, ಅರಣ್ಯ ಇಲಾಖೆಯ ಆರ್.ಆರ್.ಟಿ ತಂಡದಲ್ಲಿ ಕೆಲಸ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು