ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡುಗು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ

ಮೇ 23ರವರೆಗೂ ಭಾರಿ ಮಳೆ ಬೀಳುವ ನಿರೀಕ್ಷೆ
Published 19 ಮೇ 2024, 16:23 IST
Last Updated 19 ಮೇ 2024, 16:23 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಗೆ ಮೇ 20ರಿಂದ 23ರವರೆಗೂ ಭಾರಿ ಮಳೆ ಬೀಳುವ ನಿರೀಕ್ಷೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಶನಿವಾರ ನಾಪೋಕ್ಲು ವ್ಯಾಪ್ತಿಯಲ್ಲಿ 7 ಸೆಂ.ಮೀನಷ್ಟು ಭಾರಿ ಮಳೆ ಬಿದ್ದಿದ್ದರೆ, ಭಾನುವಾರ ಕುಟ್ಟ ಭಾಗದಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ. ಕುಶಾಲನಗರದಲ್ಲಿ ಸಾಧಾರಣ ಮಳೆಯಾಗಿದೆ. ಸೋಮವಾರದಿಂದ 3 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂಬ ಮುನ್ನಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಜಿಲ್ಲೆಯ ಗಡಿ ಹಂಚಿಕೊಂಡಿರುವ ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಸೋಮವಾರ ಅತಿ ಭಾರಿ ಮಳೆ ಬೀಳುವ ನಿರೀಕ್ಷೆ ಇದ್ದು, ರೆಡ್‌ ಅಲರ್ಟ್ ಘೋಷಿಸಲಾಗಿದೆ. ಇದರ ಪೂರ್ವಸೂಚನೆ ಎಂಬಂತೆ ಕೇರಳ ಗಡಿ ಭಾಗವಾದ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಮತ್ತು ಭಾನುವಾರ ಧಾರಾಕಾರ ಮಳೆಯಾಗಿದೆ.

ಕೇರಳದ ಇಡುಕ್ಕಿ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ರಾತ್ರಿ ಪ್ರಯಾಣವನ್ನು ನಿಷೇಧಿಸಿ ಅಲ್ಲಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ರೆಡ್‌ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಹಿಂಪಡೆಯುವವರೆಗೂ ಈ ನಿಷೇಧ ಜಾರಿಯಲ್ಲಿದ್ದು, ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ನೈರುತ್ಯ ಮಾನ್ಸುನ್ ಮಾರುತಗಳು ಈಗಾಗಲೇ ಮಾಲ್ಡೀವ್ಸ್ ದ್ವೀಪವನ್ನು ದಾಟಿ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಿಗೆ ವ್ಯಾಪಿಸಿದೆ. ದಕ್ಷಿಣ ಅಂಡಮಾನ ಸಮುದ್ರದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂದ ಮೇ 31ರ ಒಳಗೆ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚುವ ಸಂಭವಗಳು ಗೋಚರಿಸುತ್ತಿವೆ.

ಇದರೊಂದಿಗೆ ಚಂಡಮಾರುತದಂತಹ ವಾತಾವರಣವೂ ತಮಿಳುನಾಡಿನಲ್ಲಿ ಕಾಣಿಸಿಕೊಂಡಿದ್ದು, ಅದರ ಪ್ರಭಾವವೂ ಉಂಟಾಗಲಿದೆ. ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಗಾಳಿ ಅತಿ ವೇಗದಲ್ಲಿ ಬೀಸಲಿದ್ದು, ಸಿಡಿಲು, ಗುಡುಗಿನಿಂದ ಕೂಡಿದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ  ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್‌ವರೆಗೂ ಮಳೆಯ  ಕೊರತೆಯನ್ನು ಕಂಡಿದ್ದ ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಹೆಚ್ಚು ಮಳೆ ಬೀಳಲಾರಂಭಿಸಿದೆ. ಈಗಾಗಲೇ ವಾಡಿಕೆಗಿಂತ ಶೇ 20ಕ್ಕೂ ಅಧಿಕ ಮಳೆ ಮೇ ತಿಂಗಳಲ್ಲಿ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT