ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಪ್ರಜಾವಾಣಿ' ವರದಿ ಫಲಶ್ರುತಿ: ಕೀರೆಹೊಳೆ ಸ್ವಚ್ಛತೆಗೆ ಮುಂದಾದ ಪಂಚಾಯಿತಿ

ತ್ಯಾಜ್ಯ ಮುಕ್ತಿಗೆ ವೈಜ್ಞಾನಿಕ ಕ್ರಮ; ಪ್ಲಾಸ್ಟಿಕ್ ಪೈಪ್, ‍ತಂತಿ ಬಲೆ ಮೂಲಕ ತ್ಯಾಜ್ಯ ಸಂಗ್ರಹ
Published 13 ಜೂನ್ 2024, 6:16 IST
Last Updated 13 ಜೂನ್ 2024, 6:16 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪಟ್ಟಣದ ತ್ಯಾಜ್ಯವನ್ನೆಲ್ಲ ಒಡಲಲ್ಲಿ ತುಂಬಿಸಿಕೊಂಡು ಕೊಳೆತು ದುರ್ವಾಸನೆ ಬೀರುತ್ತಿದ್ದ ಇಲ್ಲಿನ ಕೀರೆ ಹೊಳೆ ಇದೀಗ ಸ್ವಚ್ಛತೆಯತ್ತ ಮುಖಮಾಡಿದೆ.

ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸೇರಿ ಪಟ್ಟಣದ ಮಧ್ಯ ಭಾಗದಲ್ಲಿ ಹರಿಯುತ್ತಿರುವ ಹೊಳೆಯನ್ನು ಸ್ವಚ್ಛಗೊಳಿಸಿವೆ. ಹೊಳೆಗೆ ಪಟ್ಟಣದ ಜನತೆ ತ್ಯಾಜ್ಯ ಎಸೆಯುವುದರ ಜತೆಗೆ ಹೋಟೆಲ್, ಬೇಕರಿ ಹಾಗೂ ನದಿ ದಡದ ಮನೆಗಳ ತ್ಯಾಜ್ಯ ನೀರು ಸೇರುತ್ತಿತ್ತು. ಇದರಿಂದಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಹೊಳೆಯ ಹೂಳೆತ್ತಿಸಿದರೂ, ಬೇಸಿಗೆ ಬರುವ ವೇಳೆಗೆ ಮತ್ತೆ ಹೂಳು ತುಂಬಿ ತ್ಯಾಜ್ಯದಿಂದ ಕೊಳೆದು ದುರ್ವಾಸನೆ ಬೀರುತ್ತಿತ್ತು.

ಇದರ ಬಗ್ಗೆ ಆಗಿಂದಾಗ್ಗೆ ‘ಪ್ರಜಾವಾಣಿ’ಯಲ್ಲಿ ನಿರಂತವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು.

ವರದಿಗಳಿಗೆ ಸ್ಪಂದಿಸಿದ ಶಾಸಕ ಎ.ಎಸ್.ಪೊನ್ನಣ್ಣ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಕೀರೆಹೊಳೆ ಸ್ವಚ್ಛತೆಗೆ ಮುಂದಾಗಿದ್ದರು. ಇದು ಸಾರ್ವಜನಿಕರ ವ್ಯಾಪಕ ಪ್ರಶಂಸೆಗೂ ಪಾತ್ರವಾಗಿತ್ತು.

ಇದೀಗ ಹೊಳೆಗೆ ತ್ಯಾಜ್ಯ ಸೇರಿಸುತ್ತಿದ್ದವರಿಗೆ ಗ್ರಾಮ ಪಂಚಾಯಿತಿ ನೋಟಿಸ್ ಕೊಡುವ ಮೂಲಕ ಎಚ್ಚರಿಕೆ ನೀಡಿದೆ. ಒಂದು ವೇಳೆ ಹರಿಯುವ ನೀರಿನಲ್ಲಿ ಪ್ಲಾಸ್ಟಿಕ್ ಸೇರಿದರೂ ಅದು ಮುಂದೆ ಚಲಿಸದಂತೆ ಮಾರುಕಟ್ಟೆ ಬಳಿ ಹೊಳೆಗೆ ತಂತಿ ಬಲೆ ಹಾಕಿ ಪ್ಲಾಸ್ಟಿಕ್ ಪೈಪ್‌ಗಳಿಂದ ತಡೆಗೋಡೆ ನಿರ್ಮಿಸಲಾಗಿದೆ. ವೈಜ್ಞಾನಿಕವಾಗಿ ಹೆಣೆದಿರುವ ಈ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆದು ಕೇವಲ ನೀರು ಮಾತ್ರ ಹರಿಯುವಂತೆ ಮಾಡಲಾಗಿದೆ.

ಇದರಿಂದ ಹರೀಶ್ಚಂದ್ರಪುರ, ಕಿರುಗೂರು, ನಲ್ಲೂರು, ಬೆಸಗೂರು ಮಾರ್ಗವಾಗಿ ಹರಿದು ಲಕ್ಷ್ಮಣತೀರ್ಥ ನದಿ ಸೇರುತ್ತಿದ್ದ ಕೀರೆ ಹೊಳೆ ನೀರು ಈಗ ಸ್ವಚ್ಛವಾಗಿ ಹರಿಯುವಂತಾಗಿದೆ. ಮಳೆಗಾಲದಲ್ಲಿ ಬೆಸಗೂರು ಬಳಿ ಲಕ್ಷ್ಮಣತೀರ್ಥ ನದಿಗೆ ಸೇರುತ್ತಿದ್ದ ರಾಶಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆಯಾದಂತಾಗಿದೆ. ಕೀರೆಹೊಳೆ ಕೆಳಗಿನ ಗ್ರಾಮಸ್ಥರು ಮತ್ತು ಕೃಷಿಕರು ನಿಟ್ಟುಸಿರು ಬಿಡುವಂತಾಗಿದೆ.

ಅಮ್ಮತ್ತಿ ಭಾಗದಿಂದ ಶುದ್ಧವಾಗಿ ಹರಿದು ಬರುವ ಕೀರೆಹೊಳೆ ನೀರು ಗೋಣಿಕೊಪ್ಪಲು ಪಟ್ಟಣ ಸೇರಿದಾಗ ಮಲಿನಗೊಳ್ಳುತ್ತಿದೆ. ಈ ನದಿ ನೀರು 30 ವರ್ಷಗಳ ಹಿಂದೆ ಕುಡಿಯಲು ಯೋಗ್ಯವಾಗಿತ್ತು. ಆದರೆ, ಪಟ್ಟಣ ಬೆಳೆದಂತೆ ನದಿ ಮಲಿನಗೊಳ್ಳತೊಡಗಿತು. ನದಿ ಪಟ್ಟಣದ ಮಧ್ಯಭಾಗದಲ್ಲಿ ಸೇರಿ ತ್ಯಾಜ್ಯದ ಹೊಂಡವಾಯಿತು.

ಈ ನದಿಗೆ ಸೇರುವ ತೋಡುಗಳೂ ಕೂಡ ಮಲಿನವಾಗ ತೊಡಗಿದವು. ಇದನ್ನು ಗಮನಿಸಿದ ಶಾಸಕ ಪೊನ್ನಣ್ಣ ಸಣ್ಣನೀರಾವರಿ ಯೋಜನೆಯ ಅನುದಾನ ಬಳಸಿಕೊಂಡು ಪಟ್ಟಣದ ಬೈಪಾಸ್ ತೋಡಿನ ತಡೆಗೋಡೆ ನಿರ್ಮಿಸಿ ತೋಡು ಸ್ವಚ್ಛಗೊಳ್ಳುವಂತೆ ಮಾಡಿದರು. ಇದೀಗ ಕೀರೆಹೊಳೆಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ತೆಗೆಯುವ ಕಾರ್ಯ ಕೈಗೊಂಡಿರುವುದು ಪರಿಸರವಾದಿಗಳಿಗೆ ಸಂತಸ ಉಂಟು ಮಾಡಿದೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ತ್ಯಾಜ್ಯ ಹೊಂಡವಾದ ಕೀರೆಹೊಳೆ’ ವಿಶೇಷ ವರದಿ
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ತ್ಯಾಜ್ಯ ಹೊಂಡವಾದ ಕೀರೆಹೊಳೆ’ ವಿಶೇಷ ವರದಿ
ಪೊನ್ನಣ್ಣ
ಪೊನ್ನಣ್ಣ
ಹೊಳೆಗೆ ತ್ಯಾಜ್ಯ ಸೇರುವ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಮುಂದೆ ಸೇರದಂತೆ ಎಚ್ಚರ ವಹಿಸಲಾಗಿದೆ. ತ್ಯಾಜ್ಯ ಎಸೆಯುವವರ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದು. ಶಾಸಕರ ಸಲಹೆಯಂತೆ ತ್ಯಾಜ್ಯ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ
-ತಿಮ್ಮಯ್ಯ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಪಿಡಿಒ.
ಹೂಳು ತೆಗೆಸಿದರೆ ಸಾಲದು. ಅದಕ್ಕೆ ಸೇರುವ ತ್ಯಾಜ್ಯವನ್ನು ಮೊದಲು ತಡೆಗಟ್ಟಬೇಕು. ಸ್ವಚ್ಛ ಪರಿಸರ ನಿರ್ಮಿಸುವುದು ಸ್ಥಳೀಯರ ಮೊದಲ ಕರ್ತವ್ಯವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ
- ಎ.ಎಸ್.ಪೊನ್ನಣ್ಣ ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT