ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಾಟೆ, ಹಲ್ಲೆ, ಬಂಧನದ ಬಳಿಕ..., ಸಂತ್ರಸ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

ಕುಶಾಲನಗರದ ವಾಲ್ಮೀಕಿ ಭವನ
Last Updated 29 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಕುಶಾಲನಗರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಮನೆ–ಮಠ ಕಳೆದುಕೊಂಡು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಭವನದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತ ಕುಟುಂಬಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.

ಸೆ. 18ರಂದು ಸಂತ್ರಸ್ತರು ಮತ್ತು ಅಧಿಕಾರಿಗಳ ನಡುವೆ ನಡೆದ ಗಲಾಟೆ ನಡೆದಿತ್ತು. ಸಂತ್ರಸ್ತ ಕೇಂದ್ರದ 15 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ನಂತರ ಸೆ. 27ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಎಲ್ಲ ಬೆಳವಣಿಗೆಗಳಿಂದ ಆತಂಕಕ್ಕೆ ಒಳಗಾಗಿದ್ದ ಸಂತ್ರಸ್ತರ ಪೈಕಿ ನೂರಾರು ಮಂದಿ ಸ್ವಗ್ರಾಮಗಳಿಗೆ ತೆರಳಿದ್ದಾರೆ.

ಈಗ ಕೇವಲ 248 ಮಂದಿ ಮಾತ್ರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ತಹಶೀಲ್ದಾರ್ ಮೇಲಿನ ಹಲ್ಲೆ ಆರೋಪದಿಂದ ಜೈಲು ಸೇರಿದ್ದ 15 ಮಂದಿ ಮತ್ತೆ ಇದೇ ಕೇಂದ್ರಕ್ಕೆ ಬಂದಿದ್ದಾರೆ. ಆದರೆ, ಯಾರ ಜೊತೆಯೂ ಹೆಚ್ಚು ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ.

ಪ್ರಕರಣದ ನಂತರ ವಿವಿಧ ಕಾರಣಗಳಿಂದ ಆಶ್ರಯ ಕೇಂದ್ರ ಬಿಟ್ಟು ತೆರಳಿರುವ ನಿರಾಶ್ರಿತರ ಸಂಖ್ಯೆಯೂ ಹೆಚ್ಚಾಗಿದೆ. ಆರಂಭದಲ್ಲಿ ಇಲ್ಲಿ ಒಟ್ಟು 417 ಮಂದಿಗೆ ಆಶ್ರಯ ನೀಡಲಾಗಿತ್ತು. ಆದರೆ, ಶನಿವಾರದ ಮಾಹಿತಿ ಪ್ರಕಾರ 101 ಕುಟುಂಬಗಳ 248 ಮಂದಿ ಈಗ ಇಲ್ಲಿದ್ದಾರೆ. ಈ ಪೈಕಿ ಗಂಡಸರು 108, ಹೆಂಗಸರು 104, ಬಾಲಕರು 26 ಹಾಗೂ ಬಾಲಕಿಯರು 10 ಮಂದಿ ಇದ್ದಾರೆ.

ಪರಿಹಾರ ಕೇಂದ್ರಗಳಾದ ವಾಲ್ಮೀಕಿ ಭವನ, ಅಂಬೇಡ್ಕರ್ ಭವನ ಹಾಗೂ ಸಪ್ರದ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಸಂಪೂರ್ಣ ಚಿತ್ರಣ ಬದಲಾಗಿದೆ. ಎಲ್ಲ ಪರಿಹಾರ ಕೇಂದ್ರಗಳಲ್ಲಿನ ಸಂತ್ರಸ್ತರ ಜನರ ಮೌನವೇ ಮಾತಾಗಿ ಹೋಗಿದೆ. ನಿತ್ಯ ಒಂದಲ್ಲ ಒಂದು ಸುದ್ದಿಯ ಕೇಂದ್ರವಾಗಿದ್ದ ವಾಲ್ಮೀಕಿ ಭವನದಲ್ಲಿ ಈಗ ಮೌನ ಆವರಿಸಿದೆ. ಜನ ಜಂಗುಳಿಯಿಂದ ಹಾಗೂ ವಿವಿಧ ಚಟುವಟಿಕೆಗಳಿಂದ ಕೂಡಿದ್ದ ಕೇಂದ್ರಗಳು ಈಗ ಯಾವುದೇ ಚಟುವಟಿಕೆಯಿಲ್ಲದೇ ಸ್ತಬ್ಧಗೊಂಡಿವೆ. ಅಧಿಕಾರಿಗಳು ಸಮಗೆ ಸರಿಯಾಗಿ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬ ಆರೋಪಗಳನ್ನು ಮಾಡುತ್ತಿದ್ದ ಸಂತ್ರಸ್ತರ ಧ್ವನಿ ಈಗ ಬದಲಾಗಿದೆ.

ಊಟ, ವಸತಿ, ಶೌಚಾಲಯ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದರು. ದಾನಿಗಳು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ನೀಡಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂಬ ಪ್ರಮುಖ ಕಾರಣವನ್ನು ಮುಂದಿಟ್ಟುಕೊಂಡು ಜಗಳ ಕೂಡ ನಡೆಸಿದ್ದರು. ಆದರೆ, ಈಗ ಹಲ್ಲೆ, ಬಂಧನದಂಥ ಅಹಿತಕರ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಎಲ್ಲ ಸಂತ್ರಸ್ತರು ನೆಲೆಯಿಲ್ಲದ ತಮಗೆ ಶಾಶ್ವತ ನೆಲೆಯೊಂದನ್ನು ಕರುಣಿಸಿದರೆ ಸಾಕಪ್ಪ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಆರಂಭದಿಂದ ಇಲ್ಲಿ ನೋಡಲ್ ಅಧಿಕಾರಿಯಾಗಿದ್ದ ಸುಂಟಿಕೊಪ್ಪ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಫಿಲಿಪ್ ವಾಸ್ ಅವರು ತಹಶೀಲ್ದಾರ್ ಮೇಲಿನ ಹಲ್ಲೆ ಪ್ರಕರಣ ನಂತರ ನೋಡಲ್ ಅಧಿಕಾರಿ ಜವಾಬ್ದಾರಿಯಿಂದ ಹಿಂದೆ ಸರಿದು ಕಾಲೇಜಿಗೆ ಹಿಂತಿರುಗಿದ್ದಾರೆ.

ಅವರ ಸ್ಥಾನಕ್ಕೆ ಕುಶಾಲನಗರ ಪ.ಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಸಹಾಯಕ ನೋಡಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಪತ್‌ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ನೋಡಲ್ ಅಧಿಕಾರಿಗಳಾಗಿ ಕಂದಾಯ ನಿರೀಕ್ಷಕ ಮಧುಸೂದನ್ ಮತ್ತು ಮುಳ್ಳುಸೋಗೆ ಗ್ರಾ.ಪಂ ಪಿಡಿಒ ರಾಜಶೇಖರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಕಂದಾಯ ಇಲಾಖೆಯ ಕುಶಾಲನಗರ ವ್ಯಾಪ್ತಿಯ ಎಲ್ಲ ಗ್ರಾಮ ಲೆಕ್ಕಿಗರನ್ನು ಇಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಮಹಿಳಾ ಸಿಬ್ಬಂದಿ ಸೇರಿ ಪೊಲೀಸರನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೇಮಿಸಲಾಗಿದೆ. ಕೇಂದ್ರದ ಪ್ರವೇಶ ದ್ವಾರದಲ್ಲೇ ಬ್ಯಾರಿಕೇಡ್ ಅಳವಡಿಸಿ ಇಬ್ಬರು ಪೊಲೀಸರನ್ನು ಕ್ಯಾಮೆರಾ ಸಹಿತ ಕರ್ತವ್ಯಕ್ಕೆ ಹಾಕಲಾಗಿದೆ. ಅಪರಿಚಿತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೇ ಕೇಂದ್ರದ ಒಳಬರುವ ಮತ್ತು ಹೊರಹೋಗುವ ಎಲ್ಲ ವಾಹನಗಳು, ವ್ಯಕ್ತಿಗಳ ಚಲನವಲನಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಕೇಂದ್ರದ ಸುತ್ತಲೂ ಮತ್ತಷ್ಟು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT