ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಹಕಾರದಿಂದ ಕೋವಿಡ್‌ ನಿಯಂತ್ರಣ ಸಾಧ್ಯ: ಶಾಸಕ ಕೆ.ಜಿ.ಬೋಪಯ್ಯ

ಕೊರೊನಾ ಟಾಸ್ಕ್‌ ಫೋರ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ
Last Updated 26 ಮೇ 2021, 3:52 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಸಾರ್ವ ಜನಿಕರು ಇನ್ನಷ್ಟು ಸಹಕಾರ ನೀಡಿದರೆ ಆದಷ್ಟು ಬೇಗ ಸೋಂಕು ಹರಡುವುದನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಬಹುದು’ ಎಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.

ಸಮೀಪದ ಕಾಕೋಟುಪರಂಬು ಪ್ರೌಢಶಾಲೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರೊನಾ ಟಾಸ್ಕ್‌ ಫೋರ್ಸ್‌ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಇಳಿಮುಖವಾಗುವಲ್ಲಿ ಆರೋಗ್ಯ ಇಲಾಖೆ, ಜನಪ್ರತಿನಿಧಿಗಳು, ಅಧ್ಯಾಪಕರು ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ. ಸೋಂಕಿತರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದರಿಂದ ಉಳಿದವರಿಗೂ ಸೋಂಕು ಹರಡುತ್ತಿದೆ. ಸೋಂಕಿತರು ಮಾತ್ರವಲ್ಲದೆ ಕೊರೊನಾ ಪರೀಕ್ಷೆಗೊಳಪಟ್ಟವರು ಕೂಡ ವರದಿ ಬರುವವರೆಗೆ ಮನೆಯಲ್ಲಿಯೇ ಇರಬೇಕು. ಇನ್ನು ಮುಂದೆ ಸೋಂಕಿತರು ಯಾರೇ ಆದರೂ ಮನೆಯಲ್ಲಿ ಐಸೋಲೇಷನ್‌ನಲ್ಲಿ ಇರದೆ ಕೋವಿಡ್ ಹೆಲ್ತ್‌ ಕೇರ್ ಸೆಂಟರ್‌ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದರು.

ಗ್ರಾಮಸ್ಥರಾದ ಚಂಬಾಂಡ ಅಪ್ಪಚ್ಚು ಮಾತನಾಡಿ, ‘ಕಾಕೋಟುಪರಂಬು ನ್ಯಾಯಬೆಲೆ ಅಂಗಡಿಯಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಅಕ್ಕಿ ಬಂದಿದ್ದರೂ ವಿತರಿಸಲು ಈವರೆಗೆ ಇಲಾಖೆಯಿಂದ ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ’ ಎಂದು ಸಭೆಯ ಗಮನಕ್ಕೆ ತಂದರು.

ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸಿದ ಶಾಸಕ ಕೆ.ಜಿ.ಬೋಪಯ್ಯ, ‘ನ್ಯಾಯಬೆಲೆ ಅಂಗಡಿಗಳಲ್ಲಿ ಹೆಬ್ಬೆಟ್ಟು ಗುರುತು ಅಥವಾ ಒಟಿಪಿಗೆ ಕಾಯುವ ಅಗತ್ಯವಿಲ್ಲ. ಪಡಿತರ ಕಾರ್ಡ್‌ದಾರರಿಗೆ ಕೂಡಲೇ ಪಡಿತರ ವಿತರಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು’ ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಸದಸ್ಯೆ ಮೇವಡ ವಸ್ಮಾ ಮಾತನಾಡಿ, ‘ಕಾಕೋಟುಪರಂಬುವಿನ ಜಂಕ್ಷನ್‌ ನಲ್ಲಿ ಸೋಂಕಿತರು, ಹೋಮ್ ಕ್ವಾರಂಟೈನ್‌ನಲ್ಲಿರುವವರು ಮತ್ತು ಸಾರ್ವಜನಿಕರು ಅನಾವಶ್ಯಕವಾಗಿ ಅಡ್ಡಾಡುತ್ತಿರುತ್ತಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಕೆ.ಜಿ. ಬೋಪಯ್ಯ ಪ್ರತಿಕ್ರಿಯಿಸಿ, ‘ಕೋವಿಡ್‌ ನಿಯಮದಂತೆ ಜನರು ಗುಂಪು ಸೇರುವುದು ಅಪರಾಧ. ಮುಂದೆ ಈ ರೀತಿ ನಡೆದರೆ ಟಾಸ್ಕ್ ಫೋರ್ಸ್‌ ತಂಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿ. ಮುಂದಿನ ಕ್ರಮವನ್ನು ಅವರು ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.

ತಹಶೀಲ್ದಾರ್ ಆರ್.ಯೋಗಾನಂದ್ ಮಾತನಾಡಿ, ‘ಕೃಷಿ ಚಟುವಟಿಕೆ ನಡೆಸುವವರು ಬೆಳಿಗ್ಗೆ 8.30ರೊಳಗೆ ತೋಟ ಅಥವಾ ಗದ್ದೆಗಳಿಗೆ ತೆರಳಬೇಕು. ಸಂಜೆ 5.30ರ ನಂತರವೇ ಮನೆಗಳಿಗೆ ಹಿಂದಿರುಗಬೇಕು. ಉಳಿದ ಅವಧಿಯಲ್ಲಿ ಸಂಚರಿಸುವುದು ಕಂಡುಬಂದಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು. ವಾಹನಗಳಲ್ಲಿ ಶೇ 50 ರಷ್ಟು ಮಾತ್ರ ಜನರನ್ನು ಕರೆದುಕೊಂಡು ಹೋಗಲು ಅವಕಾಶ ಇದೆ. ರಸಗೊಬ್ಬರ ತೆಗೆದುಕೊಳ್ಳುವವರಿಗೆ ಸರ್ಕಾರ ನಿಗದಿ ಪಡಿಸಿದ ಮೂರು ದಿನ ಸಾಗಾಟ ಮಾಡಲು ಅವಕಾಶ ನೀಡಲಾಗುವುದು’ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪಾ ಮಾತನಾಡಿ, ‘ಕಾಕೋಟುಪರಂಬು ವ್ಯಾಪ್ತಿಯಲ್ಲಿ 118 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ 84 ಜನ ಗುಣಮುಖರಾಗಿದ್ದಾರೆ. 27 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ನಾಲ್ವರು ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ಮೃತಪಟ್ಟಿದ್ದಾರೆ. 1,867 ಜನರಿಗೆ ಲಸಿಕೆ ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್, ಕೋವಿಡ್‌ ತಾಲ್ಲೂಕು ನೋಡೆಲ್ ಅಧಿಕಾರಿ ಲಕ್ಷ್ಮಿ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಸಿಪಿಐ ಶ್ರೀಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT