ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗುತ್ತಿವೆ ಕಾಳುಮೆಣಸಿನ ಬಳ್ಳಿಗಳು

ಹೊಸ ಗಿಡ ನೆಡಬೇಕಾದ ಅನಿವಾರ್ಯತೆ; ಬೆಳೆಗಾರರ ಪರದಾಟ
Last Updated 13 ಏಪ್ರಿಲ್ 2023, 6:37 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯೊಂದಿಗೆ ಕಾಳು ಮೆಣಸು ಬೆಳೆಯಲಾಗುತ್ತಿದೆ. ಈಗ ಕಾಳು ಮೆಣಸಿನ ಬಳ್ಳಿ ಒಣಗುತ್ತಿದೆ. ಇನ್ನು ಮಳೆ ಬಾರದೇ ಹೋದರೆ ಕೊಡಗು ಜಿಲ್ಲೆಯಲ್ಲಿರುವ ಮೆಣಸಿನ ಬಳ್ಳಿಗಳೆಲ್ಲವೂ ನಾಶವಾಗಲಿದೆ.

ಈಗ 15ರಿಂದ 20 ವರ್ಷ ಉತ್ತಮ ಫಸಲು ಕೊಡುವ ಹಳೆಯ ಬಳ್ಳಿಗಳು ಒಣಗುತ್ತಿರುವುದನ್ನು ನೋಡಿ ಬೆಳೆಗಾರರು ಅಸಹಾಯಕರಾಗಿದ್ದಾರೆ. ನೀರಾವರಿ ವ್ಯವಸ್ಥೆ ಹೊಂದಿರುವವರು ಕಾಫಿಯನ್ನು ತುಂತುರು ನೀರಾವರಿ ಮೂಲಕ ಉಳಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಆದರೆ, ಈಗಾಗಲೆ ಸೊರಗು ರೋಗಕ್ಕೆ ತುತ್ತಾಗಿರುವ ಬಳ್ಳಿಗಳು ಉಳಿಯುತ್ತಿಲ್ಲ.

ಈಗ ಸೊರಗು ರೋಗ ತುತ್ತಾಗದ ಆರೋಗ್ಯವಂತ ಬಳ್ಳಿಗಳು ಸಮೃದ್ಧ ಮಳೆಯಾದರೆ ಉಳಿಯಬಹುದು. ಆದರೆ, ಜಿಲ್ಲೆಯಲ್ಲಿ ಮಳೆಯ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.

ಕಳೆದ ವರ್ಷ ಅಧಿಕ ಮಳೆಯಿಂದ ಸೊರಗು ರೋಗ ಬಂದಿದ್ದು, ಬಳ್ಳಿಗಳೆಲ್ಲ ಹಾಳಾಗಿದ್ದು. ಮತ್ತೆ ಹೊಸದಾಗಿ ಗಿಡ ನೆಡಬೇಕಾದ ಅನಿವಾರ್ಯತೆ ಕೊಡಗು ಜಿಲ್ಲೆಯ ಹಲವೆಡೆ ಕಂಡು ಬಂದಿತ್ತು.

ಕಳೆದ ವರ್ಷ ಆರಂಭವಾದ ಮಳೆ ನಿರಂತರವಾಗಿ ಸುರಿದಿದ್ದರಿಂದ ಶೀತ ಹೆಚ್ಚಾಗಿ ಕಾಫಿ ಹಾಗೂ ಮೆಣಸಿನ ಫಸಲು ಉದುರಿಹೋಯಿತು. ಇದರೊಂದಿಗೆ ಮೆಣಸಿನ ಬಳ್ಳಿಗೆ ಕೊಳೆರೋಗ ಬಂದ ಕಾರಣ ಬಳ್ಳಿಗಳು ಒಣಗಿವೆ.

ಹೆಚ್ಚಿನ ಬೆಳೆಗಾರರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುವುದರಿಂದ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಭಾರಿ ಮಳೆಯಾದರೆ, ಜೂನ್ ಮತ್ತು ಜುಲೈನಲ್ಲಿ ಮಳೆ ಪ್ರಾರಂಭವಾಗುವ ಸಂದರ್ಭ ಫಸಲಿನ ದಾರ ಬೆಳವಣಿಗೆಯಾಗುತ್ತದೆ. ಈ ಸಮಯದಲ್ಲಿ ಬಿಸಿಲಿರದೆ, ಹದವಾಗಿ ಮಳೆಯಾದರೆ ಮಾತ್ರ ದಾರ ಕಾಳು ಕಟ್ಟಲು ಸಹಾಯಕವಾಗುತ್ತದೆ. ಬಿಸಿಲು ಅಥವಾ ಗಾಳಿ ಮಳೆ ಹೆಚ್ಚಾದಲ್ಲಿ ಕಾಳು ಕಟ್ಟುವ ದಾರ ಕೆಳಗೆ ಬೀಳುತ್ತದೆ. ಇದೇ ರೀತಿ ಕಳೆದ 6 ವರ್ಷಗಳಿಂದಲೂ ವ್ಯತಿರಿಕ್ತ ಹವಾಮಾನದಿಂದಾಗಿ ಮೆಣಸಿನ ಫಸಲು ಬಳ್ಳಿಯಲ್ಲಿ ನಿಲ್ಲುತ್ತಿಲ್ಲ.

ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ ಹಾಗೂ ಸೋಮವಾರಪೇಟೆ, ಕಸಬಾ ಹೋಬಳಿಗಳಲ್ಲಿ ಮೆಣಸಿನ ಬೆಳೆ ನಷ್ಟವಾಗಿದೆ. 2016-17ರ ಸಾಲಿನಲ್ಲಿ ಒಣಗಿದ ಕಾಳುಮೆಣಸಿಗೆ ಕೆ.ಜಿ.ಯೊಂದಕ್ಕೆ ₹ 750ರಿಂದ 800 ರವರೆಗೆ ಬೆಲೆಯಿತ್ತು. ಆದರೆ, ಪ್ರಸಕ್ತ ವರ್ಷ ₹ 490ಕ್ಕೆ ಇಳಿಕೆಯಾಗಿದೆ.

‘ಕಳೆದ ವರ್ಷ ಭಾರಿ ಗಾಳಿಯೊಂದಿಗೆ ಮಳೆಯಾಗಿದ್ದರಿಂದ ಕಾಳು ಮೆಣಸಿನ ಬಳ್ಳಿಗಳಿದ್ದ ಹಲವು ಮರಗಳು ಧರೆಗುರುಳಿದವು. ಇದ್ದ ಫಸಲು ಶೀತದಿಂದಾಗಿ ಬಿದ್ದುಹೋಗಿ ನಷ್ಟವಾದರೆ, ಮೆಣಸಿನ ಬಳ್ಳಿಗಳು ನಾಶವಾಗುತ್ತಿದೆ’ ಎಂದು ಹೆಗ್ಗುಳ ಗ್ರಾಮದ ಸತೀಶ್ ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಕಾಳುಮೆಣಸು ಕೃಷಿ ಮತ್ತು ನಿರ್ವಹಣೆಗಾಗಿ ಹೆಚ್ಚಿನ ಹಣ ವಿನಿಯೋಗಿಸಲಾಗುತ್ತಿದೆ. ಬಳ್ಳಿಗಳು ಸಮೃದ್ಧವಾಗಿ ಬೆಳೆಯಬೇಕು, ರೋಗಮುಕ್ತವಾಗಿರಬೇಕು ಎಂಬ ಕಾರಣಕ್ಕೆ ವೈಜ್ಞಾನಿಕ ನಿರ್ವಹಣೆಗೆ ಹೆಚ್ಚಿನ ಹಣವನ್ನು ವ್ಯಯಿಸಿದ್ದಾರೆ. ಆದರೆ, ಬೆಳೆ ಇಲ್ಲದ ಪರಿಸ್ಥಿತಿಯಿಂದಾಗಿ ಮತ್ತೊಮ್ಮೆ ರೈತರ ಬದುಕು ಅತಂತ್ರವಾಗಿದೆ’ ಎಂದು ಕಾಳು ಮೆಣಸಿನ ಬೆಳೆಗಾರರಾದ ಕಿರಣ್ ಹೇಳಿದರು.

‘ಕಳೆದ ವರ್ಷ ಕಾಳು ಮೆಣಸಿಗೆ ಕೊಳೆರೋಗ ಬಂದಿದೆ. ಮಳೆಗೂ ಮುನ್ನ ಒಂದು ಕೆ.ಜಿ ಮೈಲುತುತ್ತಾ ಮತ್ತು ಒಂದು ಕೆ.ಜಿ ಸುಣ್ಣದ ಬೋರ್ಡೋ ಮಿಶ್ರಣವನ್ನು ಬಳ್ಳಿಗೆ ಸಿಂಪಡಿಸಿದ್ದಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬರುತ್ತಿತ್ತು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT