ಬುಧವಾರ, ಜೂಲೈ 8, 2020
23 °C
463 ನೆರೆ ಸಂತ್ರಸ್ತರಿಗೆ ಲಭಿಸಿದ ಶಾಶ್ವತ ಸೂರು, ಭೂಪರಿವರ್ತನೆಗೆ ಅವಕಾಶ: ಆರ್‌.ಅಶೋಕ್‌ ಹೇಳಿಕೆ

ಪರಿಹಾರ ಕೇಂದ್ರಕ್ಕೆ ಕೊಡಗಿನಲ್ಲಿ ಶಾಶ್ವತ ಭವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಕೊಡಗಿನಲ್ಲಿ ಕಳೆದೆರಡು ವರ್ಷಗಳಿಂದ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸುತ್ತಿವೆ. ನಿರಾಶ್ರಿತರಿಗೆ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಪರಿಹಾರ ಕೇಂದ್ರ ತೆರೆಯಲಾಗುತ್ತಿದೆ. ಪರಿಹಾರ ಕೇಂದ್ರಕ್ಕೆ ಶಾಶ್ವತ ಭವನ ನಿರ್ಮಿಸಲು ₹ 10 ಕೋಟಿ ಅನುದಾನ ನೀಡಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ಗುರುವಾರ ಸಂತ್ರಸ್ತರಿಗೆ ಮನೆಗಳ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.

‘ಸೂಕ್ತ ಸ್ಥಳದಲ್ಲಿ ಶಾಶ್ವತ ಭವನ ನಿರ್ಮಿಸಬೇಕು. ಬೇಸಿಗೆಯಲ್ಲಿ ಅದನ್ನು ಸರ್ಕಾರಿ ಮೀಟಿಂಗ್‌ ಸೇರಿದಂತೆ ಬೇರೆ ಬೇರೆ ಸರ್ಕಾರಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬಹುದು. ಭವನದಲ್ಲಿ ಪ್ರತ್ಯೇಕ ಡುಗೆ ಕೋಣೆ, ಶೌಚಾಲಯ ಇರಲಿದೆ’ ಎಂದು ಅಶೋಕ್‌ ಹೇಳಿದರು.

ಭೂ ಪರಿವರ್ತನೆಗೆ ಅವಕಾಶ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಭೂಪರಿವರ್ತನೆಗೆ ಅವಕಾಶ ಇರಲಿಲ್ಲ. ಈಗ ಅವಕಾಶ ನೀಡಲಾಗಿದೆ. ಅಧಿಕೃತ ಆದೇಶವನ್ನೂ ಹೊರಡಿಸಲಾಗಿದೆ ಎಂದು ಅಶೋಕ್‌ ಹೇಳಿದರು.

‘ಸೂಕ್ಷ್ಮ ಪ್ರದೇಶ ಹಾಗೂ ನದಿ ‍ಪಾತ್ರಗಳಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

‘ರಾಜ್ಯಕ್ಕೆ ನಮ್ಮ ಕೋರಿಕೆಯ ಮೇರೆಗೆ ನಾಲ್ಕು ಎನ್‌ಡಿಆರ್‌ಎಫ್‌ ತಂಡಗಳು ಬಂದಿವೆ. ಕೊಡಗು, ದಕ್ಷಿಣ ಕನ್ನಡ, ಬೆಳಗಾವಿ ಹಾಗೂ ಧಾರಾವಾಡ ಜಿಲ್ಲೆಗಳಲ್ಲಿ ಮಳೆಗಾಲ ಮುಕ್ತಾಯವಾಗುವ ತನಕ ಎನ್‌ಡಿಆರ್‌ಎಫ್‌ ತಂಡಗಳು ಇರಲಿವೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ‘463 ಮನೆಗಳನ್ನು ಹಸ್ತಾಂತರ ಮಾಡಲಾಗಿದೆ. ಇದಕ್ಕೂ ಮೊದಲು ಕರ್ಣಂಗೇರಿಯಲ್ಲಿ 35 ಮನೆ ನೀಡಲಾಗಿತ್ತು. ಇನ್ಫೊಸಿಸ್‌ ಪ್ರತಿಷ್ಠಾನದಿಂದ 250 ಮನೆಗಳು ನಿರ್ಮಾಣ ಹಂತದಲ್ಲಿವೆ ಉಳಿದ ಮನೆಗಳನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸಿ, ಹಸ್ತಾಂತರಿಸುತ್ತೇವೆ’ ಎಂದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಂದು ಸಂಗ್ರಹವಾದ ₹ 198 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಸ್ಥಳೀಯ ಶಾಸಕರ ನಿರಂತರ ಪ್ರಯತ್ನದಿಂದ ಇದು ಸಾಧ್ಯವಾಯಿತು. ಖುದ್ದು ಶಾಸಕರು ಜಾಗ ಗುರುತಿಸಿ ಸೂಚಿಸಿದ ಹಿನ್ನೆಲೆ ಉತ್ತಮ ವಾತಾವರಣದಲ್ಲಿ ಮನೆ ನಿರ್ಮಿಸಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಕೂಡ ಅತ್ಯುತ್ತಮವಾಗಿ ಕೆಲಸ ಮಾಡಿದ್ದರು ಎಂದು ಹೇಳಿದರು.

ಕೊಡಗಿನಲ್ಲಿ ನಿರಾಶ್ರಿತರಿಗೆ ಕಲ್ಪಿಸಿರುವ ಪುನರ್ವಸತಿ ಯೋಜನೆ ರಾಜ್ಯಕ್ಕೆ ಮಾದರಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಶ್ಲಾಘಿಸಿದರು. 

ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್‌ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುಮುದಾ ಧರ್ಮಪ್ಪ, ಕೆ.ಪಿ.ಚಂದ್ರಕಲಾ, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮೀನಾ, ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ಡಾ.ವಿ.ರಾಮ ಪ್ರಸಾದ್‌‌ ಮನೋಹರ್‌, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಎಸ್‌‍ಪಿ ಸುಮನ್‌ ಡಿ. ಪನ್ನೇಕರ್‌, ಸಿಇಒ ಕೆ.ಲಕ್ಷ್ಮೀಪ್ರಿಯಾ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು