ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | 'ಆತ್ಮವಿಮರ್ಶೆಯ ದಿನವಾದ ಪತ್ರಿಕಾ ದಿನ!'

ಕೊಡಗು ಪತ್ರಕರ್ತರ ಸಂಘ, ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ವಿಭಿನ್ನ ಬಗೆಯಲ್ಲಿ ಪತ್ರಿಕಾ ದಿನಾಚರಣೆ
Published 2 ಜುಲೈ 2024, 4:54 IST
Last Updated 2 ಜುಲೈ 2024, 4:54 IST
ಅಕ್ಷರ ಗಾತ್ರ

ಮಡಿಕೇರಿ: ‘ಇದು ಪತ್ರಿಕಾ ದಿನಾಚರಣೆಯಲ್ಲ. ಆತ್ಮಾವಲೋಕನದ ದಿನಾಚರಣೆ’ ಎಂದು ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವಕಾಮತ್ ಹೇಳಿದರೆ, ಪುತ್ತೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ನರೇಂದ್ರ ರೈ ದೇರ್ಲ ‘ಇದು ಕೇವಲ ಆತ್ಮಾವಲೋಕನ ಮಾತ್ರವಲ್ಲ, ಆತ್ಮವಿಮರ್ಶೆಯ ದಿನಾಚರಣೆಯೂ ಹೌದು’ ಎಂದು ವಿಶ್ಲೇಷಿಸಿದರು.

ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರನ್ನು ಆತ್ಮವಿಮರ್ಶೆಗೆ ಒಳಪಡಿಸುವಂತಹ ಮಾತುಗಳು ಕೇಳಿ ಬಂದವು.

ಹೋರಾಟಗಾರ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯಿಂದ ಸೇರಿದಂತೆ ಅನೇಕ ಕಥೆಗಳೊಂದಿಗೆ ತಮ್ಮ ವಿಚಾರಗಳನ್ನು ಮಂಡಿಸಿದ ನರೇಂದ್ರ ರೈ ದೇರ್ಲ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಸಾಗುತ್ತಿರುವ ಹಾದಿಯ ಕುರಿತು ಆತಂಕ ವ್ಯಕ್ತಪಡಿಸಿದರು.

ಕೊಲೆ, ಸುಲಿಗೆ, ಅತ್ಯಾಚಾರ, ಕಾಮದಂತಹ ನಕರಾತ್ಮಕ ವಿಷಯಗಳೇ ಪ್ರಧಾನವಾಗುತ್ತಿದ್ದು, ಸಕರಾತ್ಮಕವಾದ ವಿಚಾರಗಳಿದ್ದರೂ ಅವುಗಳನ್ನು ಜನರಿಗೆ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಇಂದಿನ ನಮ್ಮ ಆದ್ಯತೆ ಅಭಿವೃದ್ಧಿಯೇ ಆಗಬೇಕು. ಜನರಿಗೆ ಹಿತವನ್ನು ಬಯಸುವಂತದ್ದೇ ಆಗಿರಬೇಕು. ಪತ್ರಕರ್ತರು ಈ ಕುರಿತು ಚಿಂತನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಕೊರೊನೋತ್ತರ ಕಾಲಘಟ್ಟದಲ್ಲಿ ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ಆಗಿರುವ ಬದಲಾವಣೆಗಳನ್ನು ಕುರಿತು ಮಾತನಾಡಿದ ಅವರು, ‘ಕೊರೊನಾ ನಂತರ ಮಕ್ಕಳು, ವಿದ್ಯಾರ್ಥಿಗಳು ಭಾವಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಮೊಬೈಲ್ ಹಾಗೂ ಟಿವಿಯೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ’ ಎಂದು ತಿಳಿಸಿದರು. ಇದೇ ವೇಳೆ ಅವರು, ಕೊಡಗು ಜಿಲ್ಲೆಯ ಪತ್ರಿಕೋದ್ಯಮ ಇನ್ನೂ ಮಲೀನಗೊಂಡಿಲ್ಲ ಎಂಬ ಮೆಚ್ಚುಗೆಯ ನುಡಿಗಳನ್ನಾಡಿದರು.

ತಮ್ಮ ಅನಾರೋಗ್ಯದ ನಡುವೆಯೂ ಕಾರ್ಯಕ್ರಮಕ್ಕೆ ಬಂದ ಎಂ.ಪಿ.ಕೇಶವಕಾಮತ್ ಕಾರ್ಯಕ್ರಮ ಉದ್ಘಾಟಿಸಿ, ಪತ್ರಿಕೋದ್ಯಮದ ಸ್ವರೂಪ ಬದಲಾವಣೆ ಆಗುತ್ತಿರುವ ಕುರಿತು ವಿವರಿಸಿದರು.

ಹಿರಿಯ ಪತ್ರಕರ್ತ ಟಿ.ಪಿ.ರಮೇಶ್ ಅವರು ಕೊಡಗು ಪತ್ರಿಕೋದ್ಯಮದ ಇತಿಹಾಸ ಕುರಿತು ಮಾತನಾಡಿದರು.

ಹಿರಿಯ ಪತ್ರಕರ್ತರಾದ ಕೆ.ಎಚ್.ಶಿವಣ್ಣ, ಟಿ.ಪಿ.ರಮೇಶ್, ಜಿ.ಚಿದ್ವಿಲಾಸ್, ಟಿ.ಎಲ್.ಶ್ರೀನಿವಾಸ್ ಹಾಗೂ ತೇಲಪಂಡ ಕವನ್ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಮಾತನಾಡಿದ ಜಿ.ಚಿದ್ವಿಲಾಸ್, ‘ಕೊಡಗು ಜಿಲ್ಲೆಯ ಎಲ್ಲ ಪತ್ರಕರ್ತರೂ ಒಂದಾಗಿ ಹೆಜ್ಜೆಗಳನ್ನಿಡಬೇಕು’ ಎಂದು ಹೇಳಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಅಧ್ಯಕ್ಷತೆ ವಹಿಸಿದ್ದರು.

ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪುತ್ತೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ನರೇಂದ್ರ ರೈ ದೇರ್ಲ ಮಾತನಾಡಿದರು. ಟಿ.ಪಿ.ರಮೇಶ್ ಎಸ್.ಎ.ಮುರುಳೀಧರ್ ಹಾಗೂ ಎಂ.ಪಿ.ಕೇಶವಕಾಮತ್ ಭಾಗವಹಿಸಿದ್ದರು
ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪುತ್ತೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ನರೇಂದ್ರ ರೈ ದೇರ್ಲ ಮಾತನಾಡಿದರು. ಟಿ.ಪಿ.ರಮೇಶ್ ಎಸ್.ಎ.ಮುರುಳೀಧರ್ ಹಾಗೂ ಎಂ.ಪಿ.ಕೇಶವಕಾಮತ್ ಭಾಗವಹಿಸಿದ್ದರು

ಚಿಂತನಯೋಗ್ಯ ವಿಚಾರಗಳ ಮಂಡನೆ 5 ಮಂದಿ ಹಿರಿಯ ಪತ್ರಕರ್ತರಿಗೆ ಸನ್ಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT