15 ಮನೆಗಳಿಗೆ ತೆರಳಲು ದಾರಿಯೇ ಇಲ್ಲ!

7
ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿವಾಸಿಗಳಿಗೆ ತೊಂದರೆ

15 ಮನೆಗಳಿಗೆ ತೆರಳಲು ದಾರಿಯೇ ಇಲ್ಲ!

Published:
Updated:
Deccan Herald

ಮಡಿಕೇರಿ: ನಗರದ ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಎಡಬದಿಯ ಬ್ಲಾಕ್‌ ನಂ: 16ರಲ್ಲಿರುವ ಮನೆಗಳನ್ನು ಸಂಪರ್ಕಿಸುವ ರಸ್ತೆಯು ಭೂಕುಸಿತದಿಂದ ಮುಚ್ಚಿಹೋಗಿದ್ದು, ಈ ರಸ್ತೆಯ ಮಣ್ಣು ತೆರವುಗೊಳಿಸುವಂತೆ ಆಗ್ರಹಿಸಿ ಬುಧವಾರ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಪ್ರಕೃತಿ ವಿಕೋಪ ಸಂಭವಿಸಿ ತಿಂಗಳಾದರೂ ಮಣ್ಣು ತೆರವು ಮಾಡಿಲ್ಲ. ರಸ್ತೆಯುದ್ದಕ್ಕೂ ಭೂಕುಸಿತ ಆಗಿರುವುದರಿಂದ ತಡೆಗೋಡೆ ನೆಪದಲ್ಲಿ ಮನೆಗಳಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಮರಳಿನ ಚೀಲಗಳನ್ನು ಹಾಕಿ ಮುಚ್ಚಲಾಗಿದೆ. ಜತೆಗೆ, ಭೂಕುಸಿತದ ಮಣ್ಣು ಹಾಗೆಯೇ ಬಿದ್ದಿದೆ ಎಂದು ನೋವು ತೋಡಿಕೊಂಡರು.

ಮುಖಂಡ ಉತ್ತಪ್ಪ ಮಾತನಾಡಿ, ‘1965ರಿಂದಲೂ ಈ ಭಾಗದಲ್ಲಿ ವಾಸಿಸುತ್ತಿದ್ದೇವೆ. ಈ ಭಾರಿಯ ಮಹಾಮಳೆಗೆ ಹೆದ್ದಾರಿಯಲ್ಲಿ ಭೂಕುಸಿತವಾದ ಕಾರಣ ರಸ್ತೆಗಳ ಮೇಲೆ ಮಣ್ಣು ನಿಂತಿದೆ. ಇದರಿಂದ ಸುಮಾರು 15 ಮನೆಗಳಿಗೆ ಹೋಗಲು ದಾರಿಯೇ ಇಲ್ಲ. ಈ ಬಗ್ಗೆ ನಗರಸಭೆಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಕೂಡಲೇ ಮಣ್ಣು ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಹೆದ್ದಾರಿಯಲ್ಲಿ ತಡೆಗೋಡೆ ಕಾಮಗಾರಿ ಆರಂಭಿಸುವ ಮೊದಲು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅದ್ಯಾವುದನ್ನೂ ಮಾಡದೇ ರಸ್ತೆಯನ್ನೇ ಮುಚ್ಚಲಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಿವಾಸಿ ಸುಬ್ರಮಣಿ ಮಾತನಾಡಿ, ಮನೆಗಳಿಗೆ ಹೋಗುವ ರಸ್ತೆಯುದ್ದಕ್ಕೂ ಮಣ್ಣಿನ ರಾಶಿ ಬಿದ್ದಿದೆ. ಸುಮಾರು 50 ವರ್ಷಗಳಿಂದ ಬಳಕೆ ಮಾಡುತ್ತಿರುವ ರಸ್ತೆಯನ್ನೇ ಸಂಪೂರ್ಣ ಮುಚ್ಚಲಾಗಿದೆ. ತಡೆಗೋಡೆ ಕಾಮಗಾರಿಗೆ ರಸ್ತೆಯನ್ನು ಏಕಾಏಕಿ ಅಗೆದು ಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಭೂಕುಸಿತದಲ್ಲಿ ನನ್ನ ಮಗಳನ್ನೇ ಕಳೆದುಕೊಂಡಿದ್ದೇನೆ. ನಂತರ, ಪರಿಹಾರ ಕೇಂದ್ರದಲ್ಲಿ ತಂಗಿದ್ದೆ. ನನಗೆ ಸ್ವಂತಃ ಮನೆಗೆ ದಾರಿಯೇ ಇಲ್ಲದೇ ಹೋಗಲು ಸಾಧ್ಯವಾಗಿರಲಿಲ್ಲ. ಇದೀಗ ಮನೆ ಸುರಕ್ಷಿತವಾಗಿದೆ. ಆದರೆ, ದಾರಿಯೇ ಇಲ್ಲ. ಮೆಟ್ಟಿಲು ಹಾಗೂ ಹಗ್ಗಗಳ ಸಹಯದಿಂದ ಕಷ್ಟಪಟ್ಟು ಹೋಗುತ್ತಿದ್ದೇವೆ’ ಎಂದು ಅಲ್ಲಿನ ನಿವಾಸಿ ರತ್ನಮ್ಮ ಅಲವತ್ತುಕೊಂಡರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !