ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಯೋಧರ ನಾಡಿನಲ್ಲಿ ಆಕ್ರೋಶ: ಮೇಡ್‌ ಇನ್ ಚೈನಾ ವಸ್ತುಗಳ ದಹನ

ಮಡಿಕೇರಿ ‘ಯುದ್ಧ ಸ್ಮಾರಕ’ದ ಬಳಿ ಹುತಾತ್ಮ ಯೋಧರಿಗೆ ಗೌರವ ಅರ್ಪಣೆ, ಚೀನಾ ವಸ್ತುಗಳಿಗೆ ಬೆಂಕಿ
Last Updated 17 ಜೂನ್ 2020, 12:14 IST
ಅಕ್ಷರ ಗಾತ್ರ

ಮಡಿಕೇರಿ: ‘ಚೀನಾ ಕುತಂತ್ರಿ ಬುದ್ಧಿ ತೋರಿಸುತ್ತಿದ್ದು ಆ ದೇಶದ ಉತ್ಪನ್ನಗಳ ಬಳಕೆ ನಿಲ್ಲಿಸಬೇಕು’ ಎಂದು ಆಗ್ರಹಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಬುಧವಾರ ಚೀನಾ ದೇಶದ ವಸ್ತುಗಳನ್ನು ಸುಟ್ಟು ಆಕ್ರೋಶ ಹೊರಹಾಕಿದರು.

ನಗರದ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಚೀನಾ ವಿರುದ್ಧ ಧಿಕ್ಕಾರ ಕೂಗಿದರು. ಯೋಧರ ನಾಡು ಕೊಡಗು ಜಿಲ್ಲೆಯಲ್ಲಿ ಚೀನಾ ನಡೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಭಾರತ ದೇಶದ ಅಭಿವೃದ್ಧಿಯನ್ನು ಚೀನಾ ದೇಶವಯ ಸಹಿಸಿಕೊಳ್ಳುತ್ತಿಲ್ಲ. ಪದೇ ಪದೇ ಕಾಲು ಕೆರೆದುಕೊಂಡು ಸಂಘರ್ಷಕ್ಕೆ ಮುಂದಾಗುತ್ತಿದೆ. ಆ ದೇಶಕ್ಕೆ ಈಗ ತಕ್ಕಪಾಠ ಕಲಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

‘ಇದು 1962 ಭಾರತವಲ್ಲ; ಭಾರತಕ್ಕೆ ಪ್ರತ್ಯುತ್ತರ ನೀಡುವ ತಾಕತ್ತಿದೆ. ಮೇಡ್‌ ಇನ್‌ ಚೀನಾದ ವಸ್ತುಗಳ ಬಳಕೆಯನ್ನು ನಿಲ್ಲಿಸಿ ಪಾಠ ಕಲಿಸಬೇಕು. ಕೇಂದ್ರದ ನಿರ್ಧಾರಕ್ಕೆ ನಾವೆಲ್ಲರೂ ಬೆಂಬಲ ನೀಡೋಣ. ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಯೋಧರಿಗೆ ಜಯವಾಗಲಿ. ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಿದೆ’ ಎಂದು ಕಾರ್ಯಕರ್ತರು ಹೇಳಿದರು.

ಚೀನಾ ಯೋಧರು ನಡೆಸಿದ ಅಪ್ರಚೋದಿತ ದಾಳಿಯಿಂದ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇದೇ ವೇಳೆ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಪ್ರಾರ್ಥಿಸಿದರು.

ತಿಮ್ಮಯ್ಯ ವೃತ್ತದಿಂದ ‘ಯುದ್ಧ ಸ್ಮಾರಕ’ದ ಬಳಿ ಮೆರವಣಿಗೆಯಲ್ಲಿ ಹೊರಟು ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.

‘ಚೀನಾ ಹಾಗೂ ಪಾಕಿಸ್ತಾನ ಮೊದಲಿನಿಂದಲೂ ಗಡಿ ವಿಚಾರಕ್ಕೆ ತಕರಾರು ತೆಗೆಯುತ್ತಿವೆ. ಪರಿಸ್ಥಿತಿಯ ಲಾಭ ಪಡೆದುಕೊಂಡು ದೇಶದ ಮೇಲೆ ಯುದ್ಧ ಸಾರಲು ಹವಣಿಸುತ್ತಿವೆ. ದೇಶದ ಭದ್ರತೆಯ ವಿಷಯಕ್ಕೆ ಬಂದಾಗ ಭಾರತೀಯರು ಸಂಘಟಿತ ಹೋರಾಟ ಮಾಡುತ್ತೇವೆ. ಭಾರತ ಎಲ್ಲ ವಿಷಯದಲ್ಲೂ ಸಮರ್ಥವಾಗಿದೆ. ದೇಶ ಬಹಳ ಬದಲಾಗಿದೆ. ಭದ್ರತೆಗೆ ಧಕ್ಕೆ ಎದುರಾದರೆ ಎಂದಿಗೂ ಸಹಿಸುವುದಿಲ್ಲ’ ಎಂದು ಮುಖಂಡರು ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್‌ ದೇವಯ್ಯ, ಚಿ.ನಾ.ಸೋಮೇಶ್‌, ಅರುಣ್‌, ಮನು ಮಂಜುನಾಥ್‌, ವಿನಯ್‌, ಚೇತನ್‌, ಅನಿತಾ ಪೂವಯ್ಯ, ಜಗದೀಶ್‌ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT