ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರ ನೀಡುವ ಬದಲು ಸಾಧನೆ ಸಾಬೀತುಪಡಿಸಿ: ಶಾಂತೆಯಂಡ ವೀಣಾ ಅಚ್ಚಯ್ಯ

ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಸವಾಲು
Published 13 ಫೆಬ್ರುವರಿ 2024, 5:26 IST
Last Updated 13 ಫೆಬ್ರುವರಿ 2024, 5:26 IST
ಅಕ್ಷರ ಗಾತ್ರ

ಮಡಿಕೇರಿ: ‘ಬಿಜೆಪಿ ಕಾರ್ಯಕರ್ತರು ಶಾಸಕರ ಕಚೇರಿಗೆ ತೆರಳಿ 15 ಪ್ರಶ್ನೆಗಳ ಪತ್ರ ನೀಡಿರುವುದು ಹಾಸ್ಯಾಸ್ಪದ’ ಎಂದು ಖಂಡಿಸಿದ ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ‘ಕಳೆದ 25 ವರ್ಷಗಳಿಂದ ಕೊಡಗಿನಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಶಾಸಕರ ಕೊಡುಗೆ ಏನು ಎಂಬುದನ್ನು ಮೊದಲು ಸಾಬೀತುಪಡಿಸಲಿ’ ಎಂದು ಸವಾಲೆಸೆದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೇವಲ 8 ತಿಂಗಳುಗಳಷ್ಟೇ ಆಗಿದೆ. ಜಿಲ್ಲೆಯ ಇಬ್ಬರು ಶಾಸಕರ ಅವಧಿಯೂ ಇಷ್ಟೇ ಆಗಿದೆ ಎಂಬುದು ಈ ಬಿಜೆಪಿಯರಿಗೆ ಗೊತ್ತಿಲ್ಲವೇ’ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದರೂ ಸಾಕಷ್ಟು ಸಮಯದ ಅಗತ್ಯ ಇದೆ. ಆದರೆ, ಶಾಸಕರಿಲ್ಲದ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರೊಂದಿಗೆ ಲೆಕ್ಕ ಕೇಳುವ ಅವಶ್ಯಕತೆ ಏನಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿದ್ದಾಗ ಕಾಂಗ್ರೆಸಿಗರು ಎಂದೂ ದ್ವೇಷ ರಾಜಕಾರಣ ಮಾಡಿಲ್ಲ. ಈಗ ಇರುವ ಇಬ್ಬರೂ ಶಾಸಕರು ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ತರ ಬಳಿಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ದಿನದಿಂದ ದಿನಕ್ಕೆ ಇವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಬರ ಬಂದಿದ್ದಾಗ ಹಾಗೂ ಹಿಂದೆ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಕೇಂದ್ರ ಸರ್ಕಾರದ ಯಾವ ಯೋಜನೆಯಡಿ ವಿಶೇಷ ಅನುದಾನವನ್ನು ಸಂಸದ ಪ್ರತಾಪ ಸಿಂಹ ತಂದಿದ್ದಾರೆ’ ಎಂದೂ ಅವರು ಪ್ರಶ್ನಿಸಿದರು.

‘ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳನ್ನು ಪೂರೈಸುವ ಮೂಲಕ ಸರ್ಕಾರ ಜನಪ್ರಿಯತೆ ಗಳಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

‘ಅಭಿವೃದ್ಧಿ ಪರ ಕಾಳಜಿಯ ಮಾತನಾಡುವ ಬಿಜೆಪಿ ತನ್ನದೇ ನೇತೃತ್ವದ ಆಡಳಿತವಿರುವ ನಗರಸಭೆಯ ವೈಫಲ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಮಂಡೀರ ಸದಾ ಮುದ್ದಪ್ಪ ಹಾಗೂ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಭಾಗವಹಿಸಿದ್ದರು.

Highlights - ನಗರಸಭೆಯ ವೈಫಲ್ಯತೆ ಪ್ರಸ್ತಾಪಿಸಿದ ವೀಣಾ ಅಚ್ಚಯ್ಯ ಅಭಿವೃದ್ಧಿಗೆ ಸಮಯದ ಅಗತ್ಯತೆ ಇದೆ ದ್ವೇಷ ರಾಜಕಾರಣ ಬಿಡುವಂತೆ ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT