ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಂಡ ಭತ್ತದ ಕೃಷಿ

ಸೋಮವಾರಪೇಟೆ ತಾಲ್ಲೂಕಿನಲ್ಲಿ ಉತ್ತಮ ಮಳೆ
Last Updated 15 ಜೂನ್ 2021, 3:24 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಮಳೆ ಬಿರುಸುಗೊಂಡಿದ್ದು ಭತ್ತದ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ಚುರುಕುಗೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಜೂನ್ ಮೊದಲ ವಾರದಲ್ಲಿ ಸರಿಯಾಗಿ ಮಳೆಯಾಗದ್ದರಿಂದ, ಭತ್ತದ ಕೃಷಿಗೆ ಹಿನ್ನೆಡೆಯಾಗುತ್ತಿತ್ತು. ಆದರೆ, ಈ ಬಾರಿ ಆರಂಭದಿಂದಲೇ ಉತ್ತಮ ಮಳೆಯಾಗುತ್ತಿದೆ. ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯ ಮತ್ತು ಕುಶಾಲನಗರ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ 2,400 ಹೆಕ್ಟೇರ್ ಹಾಗೂ ಉಳಿದ 9600 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 12 ಸಾವಿರ ಹೆಕ್ಟೇರ್ ಭತ್ತದ ಕೃಷಿಗಾಗಿ ಮೀಸಲಾಗಿದೆ.

ಆದರೆ, ಈಗಾಗಲೇ ಹಲವರು ಭತ್ತದ ಕೃಷಿಯಿಂದ ನಷ್ಟ ಹಾಗೂ ಹವಾಮಾನ ವೈಪರೀತ್ಯದಿಂದ ಸರಿಯಾಗಿ ಇಳುವರಿ ಸಿಗುವುದಿಲ್ಲ ಎಂದು ತಮ್ಮ ಗದ್ದೆಗಳನ್ನು
ಕಾಫಿ, ಅಡಿಕೆ, ಬಾಳೆ, ಶುಂಠಿ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಹೆಚ್ಚಿನ ರೈತರು ಗದ್ದೆಗಳನ್ನು ಪಾಳು ಬಿಟ್ಟಿರುವುದು ನಿಗದಿತ ಯೋಜನೆಯಂತೆ ಭತ್ತದ ಕೃಷಿ ತಾಲ್ಲೂಕಿನಲ್ಲಿ ನಡೆಯುತ್ತಿಲ್ಲ.

ಶಾಂತಳ್ಳಿ ಹೋಬಳಿಯಾದ್ಯಂತ ರಭಸದ ಮಳೆ ಸುರಿಯುತ್ತಿದೆ.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ, ಶಾಂತಳ್ಳಿ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತದ ಕೃಷಿಗೆ ಪೈರನ್ನು ಬೆಳೆಸುವ ಕಾಯಕ ನಡೆಯುತ್ತಿದೆ. ಹೆಚ್ಚಿನ ರೈತರು ಈಗಾಗಲೇ ತಮಗೆ ಸೇರಿದ ಗದ್ದೆಗಳ ಉಳುಮೆ ಕಾರ್ಯ ಮುಗಿಸಿದ್ದಾರೆ.

‘ಭತ್ತದ ಕೃಷಿಯನ್ನು ಉಳಿಸಲು ಸರ್ಕಾರ ರೈತರಿಗೆ ಸಹಾಯಧನ ಯೋಜನೆ ರೂಪಿಸಬೇಕಿದೆ.
ತಪ್ಪಿದಲ್ಲಿ ಭತ್ತದ ಕೃಷಿಯೇ ಜಿಲ್ಲೆಯಿಂದ ಕಣ್ಮರೆ ಯಾಗಬಹುದು’ ಎಂದು ಕಿತ್ತೂರು ಗ್ರಾಮದ ಕೃಷಿಕ ಧರ್ಮಶೆಟ್ಟಿ ಆತಂಕ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶ ಭತ್ತದ ಕೃಷಿಗೆ ಮೀಸಲಾಗಿದ್ದು, ಹೆಚ್ಚಿನವರು ಗದ್ದೆಯನ್ನು ಪಾಳು ಬಿಟ್ಟಿದ್ದಾರೆ.
ಸರ್ಕಾರ ಪ್ರಸಕ್ತ ಸಾಲಿನಲ್ಲಿ ಭತ್ತದ ಬೀಜ ಹಾಗೂ ಗೊಬ್ಬರವನ್ನು
ಸಹಾಯಧನದ ಯೋಜನೆಯಲ್ಲಿ ವಿತರಿಸುತ್ತಿದೆ. ರೈತರು ಬಳಸಿಕೊಳ್ಳಬೇಕು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ತಿಳಿಸಿದರು.

ಮಳೆಯ ತೀವ್ರತೆ ಹೆಚ್ಚುತ್ತಿದ್ದಂತೆ ರೈತರು ಕೃಷಿ ಚಟುವಟಿಕೆ
ಆರಂಭಿಸಿದ್ದಾರೆ. ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಗ್ರಾಮದಲ್ಲಿ ಭತ್ತದ ಕೃಷಿ ಕಾಯಕ ಬಿರುಸುಗೊಂಡಿದ್ದು, ಗ್ರಾಮದ ರಘು ಭತ್ತದ ಪೈರಿಗಾಗಿ ಸಸಿ ಮಡಿಗಳನ್ನು ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT