ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ಮೊದಲ ಮಳೆಯ ಅಬ್ಬರ: ಕಾಫಿ ಬೆಳೆಗಾರರ ಮೊಗದಲ್ಲಿ ನಗು

Last Updated 14 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮಡಿಕೇರಿ: ಎರಡು ದಿನಗಳಿಂದ ಜಿಲ್ಲೆಯ ವಿವಿಧೆಡೆ ಮಳೆ ಸುರಿಯುತ್ತಿದ್ದು ಇಳೆ ತಂಪಾಗಿದೆ. ಜೊತೆಗೆ, ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ನಗು ಅರಳಿದೆ.

ಬೇಸಿಗೆಯ ಬಿಸಿಲು ಹೆಚ್ಚಾದಂತೆಯೇ ಕಾಫಿ ಬೆಳೆಗಾರರು ಮಳೆಯನ್ನು ಬೇಡುತ್ತಿದ್ದರು. ಸಕಾಲಿಕವಾಗಿ ಸುರಿದ ಮಳೆಯಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ತಂದಿದೆ.

ಮಡಿಕೇರಿ, ಗೋಣಿಕೊಪ್ಪಲು, ಮೇಕೇರಿ, ಗಾಳಿಬೀಡು, ತಾಳತ್ತಮನೆ, ಸುಂಟಿಕೊಪ್ಪ ಭಾಗದಲ್ಲಿ ಬುಧವಾರ ಮಧ್ಯಾಹ್ನ ಹಾಗೂ ಮಂಗಳವಾರ ರಾತ್ರಿ ಒಂದು ತಾಸು ಧಾರಾಕಾರ ಮಳೆ ಸುರಿದಿದೆ. ಗೋಣಿಕೊಪ್ಪಲು, ವಿರಾಜಪೇಟೆಯಲ್ಲೂ ಮಳೆಯಾಗಿದೆ. ಇದರಿಂದ, ಈ ಭಾಗದ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.

ಈ ವರ್ಷ ಜನವರಿಯಲ್ಲೇ ಅಕಾಲಿಕವಾಗಿ ಮಳೆ ಸುರಿದು ಕಾಫಿ ಹೂವು ಅರಳಿತ್ತು. ಬೇಗ ಹೂವು ಅರಳಿದ್ದರಿಂದ ಬೆಳೆಗಾರರು ಆತಂಕದಲ್ಲಿದ್ದರು. ಈಗ ಬಹುತೇಕ ಕಾಫಿ ತೋಟದ ಕೆಲಸಗಳು ಮುಕ್ತಾಯವಾಗಿದ್ದು, ನೀರು ಹಾಯಿಸಲು ಬೆಳೆಗಾರರು ಸಿದ್ಧತೆಯಲ್ಲಿ ತೊಡಗಿದ್ದರು. ಈಗ ಮಳೆ ಸುರಿಯುತ್ತಿರುವುದರಿಂದ ನದಿ ಹಾಗೂ ಬೋರ್‌ವೆಲ್‌ನಿಂದ ನೀರು ಹಾಯಿಸುವ ಕಷ್ಟ ತಪ್ಪಿದೆ. ಒಂದು ವೇಳೆ ಮಳೆಯಾಗದಿದ್ದರೆ ಕಾಫಿ ಗಿಡ ಹಾಗೂ ಕಾಳು ಮೆಣಸಿನ ಬಳ್ಳಿಗೆ ನೀರು ಹಾಯಿಸುವ ಅನಿವಾರ್ಯತೆಯಿತ್ತು ಎಂದು ರೈತರು ಹೇಳುತ್ತಾರೆ.

ಉತ್ತರ ಕೊಡಗಿನಲ್ಲಿ ಮಳೆ ಇಲ್ಲ:

ಜಿಲ್ಲೆಯ ದಕ್ಷಿಣ ಭಾಗದಲ್ಲಿ ಮಳೆ ಆರ್ಭಟಿಸಿದರೆ, ಅದೇ ಉತ್ತರ ಕೊಡಗು ಭಾಗದ ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ, ಕುಶಾಲನಗರ, ಮಾದಾಪುರ, ಸೂರ್ಲಬ್ಬಿ, ಶಾಂತಳ್ಳಿ ಭಾಗದಲ್ಲಿ ಇನ್ನೂ ನಿರೀಕ್ಷಿತ ಮಳೆಯಾಗಿಲ್ಲ. ಇದರಿಂದ ಈ ಭಾಗದ ಕಾಫಿ ಬೆಳೆಗಾರರು ಮಳೆಯನ್ನು ಬೇಡುತ್ತಿದ್ದಾರೆ. ಈ ಭಾಗದಲ್ಲಿ ಶುಂಠಿ ಕೃಷಿ ಅವಲಂಬಿಸಿದ ರೈತರ ಸಂಖ್ಯೆ ಹೆಚ್ಚು. ಶುಂಠಿ ಬೆಳೆಯುವವರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಗದ್ದೆ ಹಾಗೂ ಹೊಲಗಳನ್ನು ಅಣಿಗೊಳಿಸಿದ್ದು, ಒಂದೆರಡು ದಿನ ಮಳೆ ಸುರಿದರೆ ಶುಂಠಿ ನಾಟಿ ಮಾಡಬೇಕು ಎಂದು ಶನಿವಾರಸಂತೆಯ ಬೆಳೆಗಾರರ ರವಿ ಹೇಳಿದರು.

ಇಳುವರಿ ನಿರೀಕ್ಷೆ:

ಈ ವರ್ಷ ಕಾಳು ಮೆಣಸು ಹಾಗೂ ಅರೇಬಿಕಾ ಕಾಫಿ ದರವು ತುಸು ಏರಿಕೆ ಕಂಡಿತ್ತು. ಇದು ಬೆಳೆಗಾರರಿಗೆ ತುಸು ನೆಮ್ಮದಿ ತಂದಿತ್ತು. ಸಕಾಲಿಕವಾಗಿ ಮಳೆಯಾಗಿದ್ದು ಮುಂದಿನ ವರ್ಷ ಉತ್ತಮ ಇಳುವರಿಯ ಇರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದಾರೆ.

ಜಿಲ್ಲಾಡಳಿತದ ಸಿದ್ಧತೆ:

ಈಗಾಗಲೇ ಬೇಸಿಗೆಯ ಮಳೆಯು ಜಿಲ್ಲೆಯಲ್ಲಿ ಆರ್ಭಟಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಮಳೆಗಾಲ ಎದುರಿಸಲು, ಕೊಡಗು ಜಿಲ್ಲಾಡಳಿತವು ಈಗಲೇ ಸಿದ್ಧತೆಯಲ್ಲಿ ತೊಡಗಿದೆ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅಧ್ಯಕ್ಷತೆಯಲ್ಲಿ ಒಂದು ಸುತ್ತಿನ ಸಭೆ ನಡೆದಿದೆ.

ಕಳೆದ 2018, 2019 ಮತ್ತು 2020ರ ಆಗಸ್ಟ್‌ನಲ್ಲಿ ಭಾರಿ ಮಳೆಯಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ಭೂಕುಸಿತದಿಂದ ಪ್ರಾಣಹಾನಿ, ಜಾನುವಾರು ಹಾನಿ... ಹೀಗೆ ಹಲವು ಸಂಕಷ್ಟ ಎದುರಿಸುವಂತಾಗಿತ್ತು. ಆದ್ದರಿಂದ, ಈ ಬಾರಿ ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಸಂಭವಿಸಬಹುದಾದ ಪ್ರಕೃತಿ ವಿಕೋಪ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT