ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಸೀಟ್‌: ಸಹಜ ಸೌಂದರ್ಯಕ್ಕೆ ಧಕ್ಕೆ ಇಲ್ಲ

ವಿವಿಧ ಕಾಮಗಾರಿ ವೀಕ್ಷಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್
Last Updated 13 ಆಗಸ್ಟ್ 2021, 15:50 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶುಕ್ರವಾರ ಪರಿಶೀಲಿಸಿದರು. ರಾಜಾಸೀಟಿನ ಪಾಥ್ ವೇ ಹಾಗೂ ವೀಕ್ಷಣಾ ಗೋಪುರ ಸ್ಥಳ ಸೇರಿದಂತೆ ಹಲವು ಕಾಮಗಾರಿಗಳನ್ನು ವೀಕ್ಷಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ₹ 3.43 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಜೆಸಿಬಿ ಬಳಸದೆ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಾರದಿಂದ ಇನ್ನೂ ₹ 3 ಕೋಟಿ ಬಿಡುಗಡೆ ಮಾಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ರಾಜಾಸೀಟಿನಲ್ಲಿ ನೂತನ ಕಾಮಗಾರಿ ಕೈಗೊಳ್ಳಲು ಹಣ ಬಿಡುಗಡೆ ಮಾಡಿಸಲಾಗಿತ್ತು. ಆದರೆ, ನಾನಾ ಕಾರಣಗಳಿಂದ ಕಾಮಗಾರಿ ಕೈಗೊಳ್ಳಲು ತಡವಾಗಿತ್ತು. ಈಗ ಕಾಮಗಾರಿ ನಡೆಯುತ್ತಿದ್ದು, ರಾಜಾಸೀಟಿನಲ್ಲಿ ಯಾವುದೇ ರೀತಿ ಧಕ್ಕೆಯಾಗದಂತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.

ಈಗಾಗಲೇ 3 ಎಕರೆಯಲ್ಲಿ ರಾಜಾಸೀಟು ಇದ್ದು, ಮುಂದುವರಿದು 6 ಎಕರೆ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಕೊರೊನಾ ಪೂರ್ವ ಸಂದರ್ಭದಲ್ಲಿ ರಾಜಾಸೀಟಿಗೆ ಶನಿವಾರ ಮತ್ತು ಭಾನುವಾರಗಳಂದು ಮೂರು ನಾಲ್ಕು ಸಾವಿರ ಪ್ರವಾಸಿಗರು ಆಗಮಿಸುತ್ತಿದ್ದರು. ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿ ಸಹಕಾರಿಯಾಗಲಿದೆ. ರಾಜಾಸೀಟಿನಲ್ಲಿ ನಡೆದು ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ನಾಪೋಕ್ಲು ಮತ್ತು ವಿರಾಜಪೇಟೆವರೆಗೂ ಪ್ರಾಕೃತಿಕ ಸೌಂದರ್ಯ ಕಾಣಲಿದೆ ಎಂದು ಅಪ್ಪಚ್ಚು ರಂಜನ್ ಅವರು ಹೇಳಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಶಶಿಧರ ಅವರು ಮಾಹಿತಿ ನೀಡಿ, ಹಾಲಿ ಇರುವ ರಾಜಾಸೀಟು ಉದ್ಯಾನ, ಹೊಸದಾಗಿ ನಿರ್ಮಾಣವಾಗುತ್ತಿರುವ ಉದ್ಯಾನ ಮತ್ತು ರೈಲ್ವೆ ವಿಭಾಗದ ಸುತ್ತಲಿನ ಜಾಗ ಸೇರಿದಂತೆ ‘ಗ್ರೇಟರ್ ರಾಜಾಸೀಟು’ ಅಭಿವೃದ್ಧಿ ಕಾಮಗಾರಿಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ಲೋಕೋಪಯೋಗಿ ಇಲಾಖೆ ಎಇಇ ಶಿವರಾಮ್, ಪೌರಾಯುಕ್ತ ಎಸ್.ವಿ.ರಾಮದಾಸ್, ಸಹಾಯಕ ನಿರ್ದೇಶಕ ವರದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT