ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಭದ್ರತೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ

ಲೋಕೋಪಯೋಗಿ ಎಂಜಿನಿಯರ್ ನಡೆಗೆ ಹೋರಾಟ ಸಮಿತಿಯವರ ಅಸಮಾಧಾನ
Last Updated 7 ನವೆಂಬರ್ 2022, 6:05 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮದಿಂದ ಕಣಿವೆ ಸಂಪರ್ಕಿಸುವ ರಸ್ತೆಯು ಸಂಚಾರಕ್ಕೆ ತೊಡಕಾಗಿದ್ದು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ ನಂತರ. ಇದೀಗ ಪೊಲೀಸ್ ಭದ್ರತೆಯೊಂದಿಗೆ ಗುಂಡಿಮುಚ್ಚುವ ಕಾಮಗಾರಿ ನಡೆಯುತ್ತಿದೆ.

ಮಸಗೋಡು- ಕಣಿವೆ ರಸ್ತೆ ಅನೇಕ ವರ್ಷಗಳಿಂದ ನಿರ್ವಹಣೆಯಿಲ್ಲದೇ ಹೊಂಡ ಗುಂಡಿಗಳ ಆಗರವಾಗಿತ್ತು. ಕಲ್ಲು ಗಣಿಗಾರಿಕೆಯಿಂದಲೂ ಸಹ ರಸ್ತೆ ಶಿಥಿಲಾವಸ್ಥೆಗೆ ತಲುಪಿತ್ತು. ಗ್ರಾಮಸ್ಥರ ಪ್ರತಿಭಟನೆಗೆ ಎಚ್ಚೆತ್ತು ಇದೀಗ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭವಾಗಿದ್ದು, ವೆಟ್ ಮಿಕ್ಸ್ ಹಾಕಲಾಗುತ್ತಿದೆ.

ಈ ಮಧ್ಯೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಂದ್ರಕುಮಾರ್ ಸ್ಥಳೀಯರು ರಸ್ತೆ ಕಾಮಗಾರಿ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ಡಿವೈಎಸ್ಪಿ ಕಚೇರಿಗೆ ದೂರು ನೀಡಿ, ಕಾಮಗಾರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿರುವುದು ಗ್ರಾಮಸ್ಥರು ಹಾಗೂ ರಸ್ತೆ ಹೋರಾಟ ಸಮಿತಿ ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕೇವಲ ಗುಂಡಿಗಳನ್ನು ಮುಚ್ಚಿದರೆ ಸಾಲದು, ಮಸಗೋಡಿನಿಂದ ಕಣಿವೆವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ವೆಟ್ ಮಿಕ್ಸ್ ಹಾಕಿ ರೋಲ್ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.

‘ನಮಗೆ ಸರ್ವಋತು ರಸ್ತೆ ನಿರ್ಮಾಣ ಮಾಡಿ ಎಂದು ಒತ್ತಾಯ ಹಾಕಿದ್ದರಿಂದ, ಇಲಾಖಾಧಿಕಾರಿಗಳು ನಮ್ಮ ಮೇಲೆ ಪೊಲೀಸ್ ದೂರು ನೀಡಿದ್ದಾರೆ’ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿವೈಎಸ್ಪಿ ಗಂಗಾಧರಪ್ಪ ಅವರು ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಕರೆದು ಮಾತುಕತೆ ನಡೆಸಿದ್ದಾರೆ. ಸಮಸ್ಯೆಯ ಬಗ್ಗೆ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಲೋಕೇಶ್, ಸಚಿನ್ ಹೊಸಳ್ಳಿ, ತಿಮ್ಮಯ್ಯ, ಪ್ರಶಾಂತ್, ರತನ್ ಸೇರಿದಂತೆ ಇತರರು ಡಿವೈಎಸ್ಪಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಬಗ್ಗೆ ಇಲಾಖೆಯ ಎಂಜಿನಿಯರ್ ಮಹೇಂದ್ರಕುಮಾರ್ ಮಾತನಾಡಿ, ‘ಮಸಗೋಡು-ಕಣಿವೆ ರಸ್ತೆ ತೀರಾ ಹದಗೆಟ್ಟಿದ್ದರಿಂದ ಸದ್ಯದ ಮಟ್ಟಿಗೆ ಸಂಚಾರಕ್ಕೆ ಯೋಗ್ಯವಾಗಿಸುವ ನಿಟ್ಟಿನಲ್ಲಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಇಂತಹ ಸಂದರ್ಭ ಸ್ಥಳೀಯ ಕೆಲವರು ಆಕ್ಷೇಪಿಸಿ ಸಂಪೂರ್ಣ ರಸ್ತೆ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇಲಾಖೆಯಿಂದ ₹ 13 ಕೋಟಿ ವೆಚ್ಚದ ಯೋಜನೆಗೆ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣ ಸಂಪೂರ್ಣ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಇದೀಗ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಪೊಲೀಸರು ಭದ್ರತೆ ಒದಗಿಸಿದ್ದು, ಬೆಳಿಗ್ಗೆ ಕಾಮಗಾರಿ ಆರಂಭವಾಗುವ ಸಮಯಕ್ಕೆ ಹಾಜರಾಗಿ, ಸಂಜೆ ವೇಳೆಗೆ ವಾಪಸ್ ಆಗುತ್ತಿದ್ದಾರೆ. ಮೊದಲ ದಿನ ಮೀಸಲು ಪಡೆಯ ಒಂದು ತುಕಡಿಯನ್ನೇ ನಿಯೋಜಿಸಲಾಗಿತ್ತು.
ಹಲವು ವರ್ಷಗಳಿಂದ ದುಃಸ್ಥಿತಿಯಲ್ಲಿದ ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ, ಸ್ಥಳೀಯರು ‘ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ'ಯ ಹೆಸರಿನಲ್ಲಿ ಸಂಘಟಿತರಾಗಿ ಕಳೆದ ಅ. 10 ರಂದು ಎತ್ತಿನಗಾಡಿ ಸಹಿತ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು.

ಸ್ಥಳಕ್ಕಾಗಮಿಸಿದ ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಅವರು ಮುಂದಿನ ನವೆಂಬರ್ ಅಂತ್ಯದೊಳಗೆ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದರು. ತಕ್ಷಣಕ್ಕೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT