ಮಡಿಕೇರಿ: ಶಿಕ್ಷಕರಾದವರು ತಮ್ಮ ವೃತ್ತಿಧರ್ಮಕ್ಕೆ ನ್ಯಾಯ ಸಲ್ಲಿಸಿದಾಗ ಮಾತ್ರವೇ ಸದೃಢ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ತಿಳಿಸಿದರು.
ರೋಟರಿ ಮಡಿಕೇರಿ ವುಡ್ಸ್‌ನಿಂದ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ 5 ಮಂದಿ ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ‍್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಬಹಳ ಖುಷಿ ಕೊಡುವಂತದ್ದು. ಮಕ್ಕಳೊಡನೆ ಮಕ್ಕಳಾಗಲು ಶಿಕ್ಷಕ ವೃತ್ತಿಯಿಂದ ಮಾತ್ರ ಸಾಧ್ಯ ಎಂದರು.
ರೋಟರಿಯ ಸಹಾಯಕ ಗವರ್ನರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ‘ಶಿಕ್ಷಕ ವೃತ್ತಿ ಪವಿತ್ರವಾದದ್ದು. ಸಾವಿರಾರು ಉತ್ತಮ ನಾಗರಿಕರನ್ನು ಸೃಷ್ಟಿಸುವ ಕೆಲಸವಿದು. ಇಂತಹ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ರೋಟರಿ ಮಡಿಕೇರಿ ವುಡ್ಸ್ ಉತ್ತಮವಾಗಿ ಮುಂದೆ ಸಾಗುತ್ತಿದೆ’ ಎಂದು ಹೇಳಿದರು.
ವಲಯ ಲೆಫ್ಟಿನೆಂಟ್ ಸಂಪತ್ ಕುಮಾರ್ ಮಾತನಾಡಿ, ‘ಆರಂಭಿಕ ವರ್ಷಗಳಲ್ಲಿಯೇ ರೋಟರಿ ಮಡಿಕೇರಿ ಉತ್ತಮವಾಗಿ ಸಾಗುತ್ತಿದೆ. ಭವಿಷ್ಯದಲ್ಲೂ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮೂಡಿ ಬರಲಿ’ ಎಂದರು.
ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜೆ.ದಿವಾಕರ್, ಮುಖ್ಯ ಶಿಕ್ಷಕಿ ಲಲಿತಾ, ಭೂಮಿಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪೂರ್ಣೇಶ್ ಹಾಗೂ ನಿವೃತ್ತ ಶಿಕ್ಷಕರಾದ ಅವರೇಮಾದಂಡ ಗಣೇಶ್, ಕಸ್ತೂರಿ ಗೋವಿಂದಮ್ಮಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ರೋಟರಿ ಮಿಸ್ಟಿನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಅನಂತಶಯನ, ಎ.ಕೆ.ಜೀವನ್, ಎ.ಕೆ.ವಿನೋದ್, ರೋಟರಿ ಮಡಿಕೇರಿ ಅಧ್ಯಕ್ಷೆ ಗೀತಾ ಗಿರೀಶ್, ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್, ಕಾರ್ಯದರ್ಶಿ ಹರೀಶ್ ಕಿಗ್ಗಾಲ್ ಇದ್ದರು.