ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಿನಿ ಕ್ರೀಡಾಂಗಣದ ಗಜಪ್ರಸವ!

ಕಾಮಗಾರಿ ಆರಂಭವಾದ 13 ವರ್ಷಗಳ ನಂತರ ಉದ್ಘಾಟನೆಗೆ ಸಿದ್ಧ
Last Updated 1 ನವೆಂಬರ್ 2022, 8:32 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಆಲೂರುಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗ್ರಾಮೀಣ ಮಿನಿ ಕ್ರೀಡಾಂಗಣ ಲೋಕಾರ್ಪಣೆಗೆ ಸಜ್ಜಾಗಿದೆ.

ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಆಲೂರುಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ 13 ವರ್ಷಗಳ ಹಿಂದೆ ಆರಂಭವಾಗಿದ್ದ ಕ್ರೀಡಾಂಗಣ ಕಾಮಗಾರಿ ಕೆಲ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿತ್ತು. ಅರ್ಧಕ್ಕೆ ನಿಂತಿದ್ದ ಕಾಮಗಾರಿಯನ್ನು ಮತ್ತೆ ಮುಂದುವರೆಸಿದ್ದು, ಇದೀಗ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ.

ಜಿಲ್ಲೆಯಲ್ಲೇ ಅಭಿವೃದ್ಧಿ ಹೊಂದಿದ ಆಲೂರುಸಿದ್ದಾಪುರ ಗ್ರಾಮದ ಮುಖಂಡ ಹಾಗೂ ರಾಜ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ ಅವರು ತಮ್ಮ 13 ವರ್ಷಗಳ ಸೇವಾ ಅವಧಿಯಲ್ಲಿ ತಮ್ಮೂರಿನಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ₹ 1 ಕೋಟಿ ಮಂಜೂರು ಮಾಡಿಸಿದ್ದರು. ಕಾರಣಾಂತರಗಳಿಂದ ಕ್ರೀಡಾಂಗಣ ಕಾಮಗಾರಿ ವಿಳಂಬವಾಗಿತ್ತು.

ಕ್ರೀಡಾಂಗಣದ ಒಳಾಂಗಣದಲ್ಲಿ ಕ್ರೀಡಾಪಟುಗಳು ವಿಶ್ರಮಿಸಲು, ಉಡುಪು ಬದಲಾಯಿಸಲು ಕೊಠಡಿಗಳು, ಸಭಾಂಗಣ ನಿರ್ಮಾಣವಾಗಿದ್ದು ಸುಸಜ್ಜಿತ ವ್ಯವಸ್ಥೆ ಇದೆ. ವಿರೂಪಾಕ್ಷಯ್ಯ ನಿವೃತ್ತಿ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರೂ ತಮ್ಮ ಹುಟ್ಟೂರಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಲೋಕಾರ್ಪಣೆಗೆ ಸಜ್ಜಾಗಿರುವ ಗ್ರಾಮೀಣ ಮಿನಿ ಕ್ರೀಡಾಂಗಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಳಪಟ್ಟಿದ್ದು, ಗ್ರಾಮ ಪಂಚಾಯಿತಿ ನಿರ್ವಹಣಾ ಜವಾಬ್ದಾರಿ ವಹಿಸಬೇಕಾಗಿದೆ. 2 ಇಲಾಖೆಗಳಿಗೆ ನಿರ್ವಹಣೆ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದು ಸ್ಥಳೀಯ ವಿಜಯ ಯುವಕ ಸಂಘಕ್ಕೆ ವಹಿಸಿಕೊಡುವ ಚಿಂತನೆ ನಡೆದಿದೆ.

ರಾಜ್ಯದಲ್ಲಿ ಕ್ರೀಡಾಂಗಣಗಳ ಅಭಿವೃದ್ದಿಗಾಗಿ ₹ 532 ಕೋಟಿ ಬಿಡುಗಡೆಯಾಗಿರುವ ಹಿನ್ನಲೆಯಲ್ಲಿ ಆಲೂರುಸಿದ್ದಾಪುರ ಗ್ರಾಮೀಣ ಮಿನಿ ಕ್ರೀಡಾಂಗಣದಲ್ಲಿ ಅಂಕಣ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಕ್ಕಾಗಿ ಹೆಚ್ಚುವರಿ ಅನುದಾನ ನೀಡುವಂತೆ ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಅವರು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಆಲೂರುಸಿದ್ದಾಪುರದ ವಿಜಯ ಯುವಕ ಸಂಘದ ಅಧ್ಯಕ್ಷ, ರಕ್ಷಿತ್ ರಾಜ್ ಪ್ರತಿಕ್ರಿಯಿಸಿ, ‘ಮಿನಿ ಕ್ರೀಡಾಂಗಣದ ನಿರ್ವಹಣೆಯನ್ನು ಯುವಕ ಸಂಘಕ್ಕೆ ವಹಿಸುವ ಪ್ರಸ್ತಾವ ಬಂದಿದೆ. ಇಲ್ಲಿ ಪ್ರತಿದಿನ ಯುವಕರು, ವಿದ್ಯಾರ್ಥಿಗಳು ಕ್ರೀಡಾ ಅಭ್ಯಾಸದಲ್ಲಿ ತೊಡಗಿರುತ್ತಾರೆ. ಕ್ರೀಡಾಕೂಟಗಳು, ಕ್ರಿಕೆಟ್ ಟೂರ್ನಿ ನಡೆಸಲೂ ಈ ಕ್ರೀಡಾಂಗಣ ಸೂಕ್ತವಾಗಿದೆ. ವಿಜಯ ಯುವಕ ಸಂಘ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಿದ್ಧವಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಕಾರಣಕರ್ತರಾದ ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಅವರ ತಂದೆ ದಿವಂಗತ ಸಿದ್ಧಮಲ್ಲಯ್ಯ ಅವರ ಹೆಸರನ್ನು ಕ್ರೀಡಾಂಗಣಕ್ಕೆ ಇಡಲು ನಮ್ಮ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿದೆ’ ಎಂದರು.

ರಾಜ್ಯ ಮಾಹಿತಿ ಹಕ್ಕು ಆಯೋಗನಿವೃತ್ತ ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ ಮಾತನಾಡಿ,ಕಾಮಗಾರಿ ₹ 1 ಕೋಟಿ ಅನುದಾನ ನೀಡುವಂತೆ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT