ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ: ಅಧಿಕಾರಿಗಳ ಗೈರು: ಕ್ರಮಕ್ಕೆ ಒತ್ತಾಯ

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆ; ಸಮಸ್ಯೆ ಪರಿಸಹರಿಸಲು ಕ್ರಮ
Published 29 ಫೆಬ್ರುವರಿ 2024, 15:17 IST
Last Updated 29 ಫೆಬ್ರುವರಿ 2024, 15:17 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿಯ ತ್ರೈಮಾಸಿಕ ಸಭೆಗೆ ಅಧಿಕಾರಿಗಳು ನಿರಂತರವಾಗಿ ಗೈರಾಗುತ್ತಿದ್ದು, ಅಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಶಿಷ್ಟ ಜಾತಿ ಮತ್ತು ವರ್ಗದ ಸಮಿತಿ ಸದಸ್ಯರು ಹಾಗೂ ದಲಿತ ಮುಖಂಡರು ಒತ್ತಾಯಿಸಿದ ಘಟನೆ ಗುರುವಾರ ನಡೆಯಿತು.

ತಹಶೀಲ್ದಾರ್ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯ ಬಿ.ಈ.ಜಯೇಂದ್ರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

‘ಸಮಸ್ಯೆಗಳಿಗೆ ಉತ್ತರ ನೀಡಬೇಕಾದ ಅಧಿಕಾರಿಗಳು ಹಲವು ಸಭೆಗಳಿಗೆ ಬೇಕಂತಲೇ ಗೈರು ಹಾಜರಾಗುತ್ತಿದ್ದಾರೆ. ಇದರಿಂದ ಸಭೆ ನಡೆಸಿ, ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಕಾಟಾಚಾರಕ್ಕೆ ಸಭೆ ನಡೆಸಲಾಗಿದೆ’ ಎಂದು ಆರೋಪಿಸಿದರು.

‘ಕಳೆದ ನಾಲ್ಕು ವರ್ಷಗಳಿಂದ ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಗೆ ಉದ್ದೇಶ ಪೂರ್ವಕವಾಗಿ ಗೈರಾಗುತ್ತಿದ್ದಾರೆ. ಅದರಲ್ಲೂ ಸರ್ವೆ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರು ಎದ್ದು ಕಾಣುತ್ತಿದೆ’ ಎಂದು ದೂರಿದರು.

‘ಎಲ್ಲ ಇಲಾಖಾಧಿಕಾರಿಗಳಿಗೆ ಸಭಾ ಸೂಚನಾ ಪತ್ರ ನೀಡಲಾಗಿದೆ. ಗೈರಾದವರಿಗೆ ಷೋಕಾಸ್ ನೋಟಿಸ್ ನೀಡಲಾಗುವುದು. ಗೈರಾದ ಇಲಾಖಾಧಿಕಾರಿಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಲಿಖಿತವಾಗಿ ಕೊಟ್ಟರೆ, ಪ್ರತಿಯೊಂದು ಅರ್ಜಿಗಳನ್ನು ಹದಿನೈದು ದಿನಗಳ ಒಳಗೆ ವಿಲೇವಾರಿ ಮಾಡಿಸಲಾಗುವುದು’ ಎಂದು ತಹಶೀಲ್ದಾರ್ ಭರವಸೆ ನೀಡಿದರು.

‘ಕೊಡ್ಲಿಪೇಟೆಯ ಕಂದಾಯ ಇಲಾಖೆಯಲ್ಲಿ ವೀರಶೈವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಮೂಲಕ ನಮ್ಮ ಯೋಜನೆಗಳು ಅನ್ಯರ ಪಾಲಾಗುತ್ತಿವೆ. 476 ಜನರಿಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಅದನ್ನು ಪಡೆದವರು ಹಾಗೂ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಕೊಡ್ಲಿಪೇಟೆಯ ದೇವರಾಜು ತಹಶೀಲ್ದಾರ್‌ ಅವರನ್ನು ಒತ್ತಾಯಿಸಿದರು.

‘ಹೆಮ್ಮನೆ ಗ್ರಾಮದಲ್ಲಿ ಪೈಸಾರಿ ಜಾಗ ಒತ್ತುವರಿಯಾಗಿದೆ. ಅಂಗನವಾಡಿಗೆ ಕಟ್ಟಡ ಕಟ್ಟಲು ಜಾಗ ಇಲ್ಲದಂತಾಗಿದೆ’ ಎಂದು ಸದಸ್ಯರು ದೂರಿದರು.

‘ಶನಿವಾರಸಂತೆ ಹೆಮ್ಮನೆ ಗ್ರಾಮದಲ್ಲಿ ಎಷ್ಟು ಪೈಸಾರಿ ಜಾಗವಿತ್ತು. ಒತ್ತುವರಿ ಮಾಡಿಕೊಂಡವರ ಪಟ್ಟಿ, ಉಳಿದಿರುವ ಪೈಸಾರಿ ಜಾಗ ಎಷ್ಟಿದೆ ಎಂಬ ಮಾಹಿತಿಯನ್ನು ಕೂಡಲೇ ನೀಡುವಂತೆ’ ಸಂಬಂಧಪಟ್ಟ ಕಂದಾಯ ಅಧಿಕಾರಿಗೆ ತಹಶೀಲ್ದಾರ್ ಸೂಚಿಸಿದರು.

‘ಊರುಡುವೆ ಜಾಗದಲ್ಲಿ ಕೃಷಿ ಮಾಡುತ್ತಿರುವವರಿಗೆ ದಾಖಲೆ ನೀಡುತ್ತಿಲ್ಲ. ಊರುಗುಪ್ಪೆ ಸ್ಥಳವನ್ನು ಮಠಾಧೀಶರಿಗೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ಕಂದಾಯ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಯಾವುದೇ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಆಸ್ತಿವಂತರ ದುರಸ್ತಿ ಕಡತಗಳು ವಿಲೇವಾರಿಯಾಗುತ್ತಿವೆ’ ಎಂದು ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯ ಕೆಂಚೇಶ್ವರ ದೂರಿದರು.

‘ಕೊಡ್ಲಿಪೇಟೆ ಹೋಬಳಿ ಕಂದಾಯ ಇಲಾಖೆಯಲ್ಲಿ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಅಧಿಕಾರಿಗಳು ಇದ್ದು, ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ನಿಜವಾದ ಎಸ್.ಸಿ.ಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅಕ್ರಮ ಎಸಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ  ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ದೇವರಾಜ್ ಒತ್ತಾಯಿಸಿದರು.

ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಭರವಸೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧೇಗೌಡ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ಸ್ಮಶಾನ ಸಮಸ್ಯೆ; ಪರಿಹರಿಸುವ ಭರವಸೆ

‘ಕರ್ಕಳ್ಳಿ ಬಾಣೆಯಲ್ಲಿ ಪರಿಶಿಷ್ಟ ಜಾತಿ ಸ್ಮಶಾನದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ. ಕೆಲವರು ಸ್ಮಶಾನದ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಎಸ್.ಆರ್.ವಸಂತ್ ಹೇಳಿದರು. ಕೂಡಲೇ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ನವೀನ್ ಕುಮಾರ್ ಭರವಸೆ ನೀಡಿದರು. ದೊಡ್ಡಭಂಡಾರ ಗ್ರಾಮದ ಸ್ಮಶಾನ ಜಾಗದ ಹದ್ದುಬಸ್ತು ಸರ್ವೇ ಮಾಡಿಸಿಕೊಡಬೇಕೆಂದು ವೇದಕುಮಾರ್ ಮನವಿ ಮಾಡಿದರು. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಶೇ 25ರ ಎಸ್.ಸಿ. ಮೀಸಲಾತಿ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ವಿಶೇಷ ಯೋಜನೆಯ ಹಣವನ್ನು ಸಮರ್ಪಕವಾಗಿ ಬಳಸದ ಪಿಡಿಒಗಳ ವಿರುದ್ಧ ಅಟ್ರಾಸಿಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಪ್ರತಿ ಎಸ್.ಸಿ ಕುಟುಂಬಕ್ಕೆ ಜಾಗದ ಪ್ಲ್ಯಾನಿಂಗ್ ದುರಸ್ತಿ ಮಾಡುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT