ಬುಧವಾರ, ಮೇ 18, 2022
23 °C

ಶಾಲಾ ಅಂಗಳದಲ್ಲಿ ಅರಳಿದ ಮಕ್ಕಳ ಮನ, ಕರ್ತವ್ಯಕ್ಕೆ ಶಿಕ್ಷಕ ಸಮೂಹ

ಸಿ.ಎಸ್‌.ಸುರೇಶ್‌ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಕೋವಿಡ್‌–19ರಿಂದ ಬಾಧಿತವಾದ ಶಿಕ್ಷಣ ಕ್ಷೇತ್ರ ಇದೀಗ ಸಹಜ ಸ್ಥಿತಿಯತ್ತ ವಾಲತೊಡಗಿದೆ. ಮಕ್ಕಳ ಮನ ಅರಳಿದರೆ ಶಿಕ್ಷಕರೂ ತಮ್ಮ ಕರ್ತವ್ಯಗಳತ್ತ ಮನಸ್ಸು ಮಾಡುತ್ತಿದ್ದಾರೆ.

ಎಲ್ಲಾ ಆಟ, ಪ್ರವಾಸ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಮತಿ ಇಲ್ಲದ ಶಾಲೆಯಲ್ಲಿ ಸದ್ಯಕ್ಕೆ ಪಾಠಕ್ಕೆ ಅನುಮತಿ ನೀಡಲಾಗಿದೆ.

ಕೋವಿಡ್‌ನಿಂದ ವರ್ಷಗಳ ಕಾಲ ಶಿಕ್ಷಣದ ಹಳಿ ತಪ್ಪಿತ್ತು. ಶಾಲಾ ಚಟುವಟಿಕೆಗಳು ಬಂದ್ ಆಗಿದ್ದವು. ಇದೀಗ ಸರ್ಕಾರದ ನಿರ್ದೇಶನದಂತೆ ಎಲ್‌ಕೆಜಿಯಿಂದ 10ನೇ ತರಗತಿವರೆಗೂ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಿವೆ.

ಮೊದಲ ಹಂತದಲ್ಲಿ ಆರರಿಂದ ಹತ್ತು, ಎರಡನೇ ಹಂತದಲ್ಲಿ ಒಂದರಿಂದ ಐದು ಹಾಗೂ ಮೂರನೇ ಹಂತದಲ್ಲಿ ಎಲ್‌ಕೆಜಿ - ಯುಕೆಜಿ ಶುರುವಾಗಿವೆ. ಅಂಗನವಾಡಿ ಕೇಂದ್ರಗಳು ಪುನರಾರಂಭವಾಗಿವೆ.

ವರ್ಷಗಳ ಕಾಲ ಶಾಲಾ ಚಟುವಟಿಕೆಯಿಂದ ದೂರವಿದ್ದ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಶಾಲಾ ವಾಹನಗಳು ರಸ್ತೆಗಳಲ್ಲಿ ಸದ್ದು ಮಾಡುತ್ತಿವೆ. ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಎಲ್ಲೆಡೆ ಶಾಲಾ ಚಟುವಟಿಕೆಗಳು ಆರಂಭಗೊಂಡಿದ್ದು ಪೋಷಕರು, ಶಿಕ್ಷಕರು, ಹಾಗೂ ಮಕ್ಕಳಲ್ಲಿ ಉತ್ಸಾಹ ಮನೆಮಾಡಿದೆ.

ಶಿಕ್ಷಣ ಸಂಸ್ಥೆಗಳು ಚಟುವಟಿಕೆಗಳ ಆಗರ. ಕೇವಲ ಪಾಠ – ಪ್ರವಚನಗಳಿಗೆ ಸೀಮಿತವಲ್ಲ. ಆಟ, ಪಾಠ, ಕ್ರೀಡೆಗಳು, ದಿನಾಚರಣೆಗಳು, ಕ್ರೀಡಾಕೂಟಗಳು, ಪ್ರವಾಸ, ವಾರ್ಷಿಕೋತ್ಸವ... ಹೀಗೆ ಹತ್ತಾರು ಚಟುವಟಿಕೆಗಳೊಂದಿಗೆ ಶೈಕ್ಷಣಿಕ ವರ್ಷ ನಡೆಯುತ್ತಿತ್ತು. ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಸದ್ಯದಮಟ್ಟಿಗೆ ಪಾಠಕ್ಕಷ್ಟೇ ಶಿಕ್ಷಣ ವ್ಯವಸ್ಥೆ ಸೀಮಿತಗೊಂಡಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆಗಳಿಲ್ಲ. ಮಕ್ಕಳಿಗೆ ಕ್ರೀಡಾಕೂಟಗಳಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳಿಲ್ಲ. ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸಗಳ ಮಾತಂತೂ ದೂರವೇ ಉಳಿಯಿತು. ಈ ಚಟುವಟಿಕೆಗಳೊಂದಿಗೆ ಶಿಕ್ಷಣ ವ್ಯವಸ್ಥೆ ಸಹಜ ಸ್ಥಿತಿಗೆ ಬರಲು ಮತ್ತೆ ವರ್ಷಗಳೇ ಬೇಕು. ಸದ್ಯ ಶಾಲೆಗಳು ಪುನರಾರಂಭಗೊಂಡಿರುವುದರಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಕ್ಕಳು ಶಾಲೆಯ ಪರಿಸರಕ್ಕೆ ನಿಧಾನವಾಗಿ ಹೊಂದಿ ಕೊಳ್ಳುತ್ತಿದ್ದಾರೆ. ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ನಿಧಾನವಾಗಿ ಅಳವಡಿಸಿ ಕೊಳ್ಳಲಾಗುತ್ತಿದೆ. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ- ಅಕ್ಷರದಾಸೋಹ, ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ.

ಶಾಲೆಗಳ ಆರಂಭಕ್ಕೂ ಮುನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯು ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡಿತ್ತು. ಪಟ್ಟಣ ಪ್ರದೇಶಗಳಲ್ಲಿ ಶಿಕ್ಷಕರು ಶತಾಯಗತಾಯ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದರು. ಆದರೆ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಕೊರತೆ ಇತ್ತು.

ಇದ್ದವರಿಗೂ ಸರಿಯಾಗಿ ನೆಟ್‌ವರ್ಕ್ ಲಭಿಸದೇ ಆನ್‌ಲೈನ್ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ದೂರವೇ ಉಳಿಯುವಂತಾಯಿತು.
ವಿದ್ಯಾಗಮದಂತಹ ಇಲಾಖೆಯ ಯೋಜನೆಗಳ ಮೂಲಕ ಪರ್ಯಾಯ ಶಿಕ್ಷಣ ನೀಡಿದರೂ ಭೌತಿಕ ತರಗತಿಗಳಂತೆ ಅವು ಪರಿಣಾಮಕಾರಿ ಆಗಲಿಲ್ಲ ಎಂಬುದು ಬಹುತೇಕ ಪೋಷಕರ ಅಭಿಪ್ರಾಯ.

ಭೌತಿಕ ತರಗತಿಗಳು ಇಲ್ಲದೇ ಇದ್ದುದರಿಂದ ಕಲಿಕೆಯ ಮಟ್ಟ ಕುಸಿದಿದೆ ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳನ್ನು ಸರಿಯಾದ ದಾರಿಗೆ ತರಲು ಹೆಚ್ಚು ಶ್ರಮದ ಅಗತ್ಯವಿದೆ. ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗೆ ದಿನಗಳು ಹತ್ತಿರವಿದ್ದು, ಪಠ್ಯಕ್ರಮವನ್ನು ನಿಗದಿತ ಅವಧಿಯಲ್ಲಿ ಪೂರೈಸುವುದು ಶಿಕ್ಷಕರಿಗೆ ಸವಾಲಾಗಿ ಪರಿಣಮಿಸಿದೆ.

ಕೋವಿಡ್‌ನಿಂದ ಕಳೆದ ವರ್ಷ ಬಹು ಆಯ್ಕೆ ಮಾದರಿಯ ಪರೀಕ್ಷೆಯನ್ನು ನಡೆಸಲಾಗಿತ್ತು. ವಿಷಯಗಳಿಗೆ ನಿಗದಿಪಡಿಸಿದ ಅಂಕಗಳನ್ನು ಅರ್ಧಕ್ಕಿಳಿಸಲಾಗಿತ್ತು. ಈ ವರ್ಷ ಎಂದಿನಂತೆ ವಾರ್ಷಿಕ ಪರೀಕ್ಷೆಗಳು ನಡೆದಲ್ಲಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಶಿಕ್ಷಕರ ಮುಂದಿರುವ ದೊಡ್ಡ ಸವಾಲು. ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ತಯಾರಾಗುವುದು ಕಷ್ಟಕರವಾಗಲಿದೆ.

ಸುಮಾರು ಎರಡು ವರುಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಶಾಲೆ ಪುನರಾರಂಭ ಗೊಂಡಿರುವುದು ಖುಷಿಯಾಗಿದೆ.

ನೆಟ್‌ವರ್ಕ್ ಸಮಸ್ಯೆಯಿಂದ ಪೂರ್ಣಫಲ ಕಾಣದ ಆನ್‌ಲೈನ್ ಕಲಿಕೆಯಿಂದ ಹೊರಬಂದು, ಭೌತಿಕವಾಗಿ ತರಗತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದೇ ಹುರುಪು. ಶಾಲಾ ಪ್ರಕ್ರಿಯೆಯಿಂದ ತೀರಾ ಹೊರಗುಳಿದಿದ್ದ 1ರಿಂದ 4 ನೇ ತರಗತಿ ಮಕ್ಕಳನ್ನು ಶಾಲಾ ಪರಿಸರಕ್ಕೆ ಒಗ್ಗಿಕೊಳ್ಳುವಂತೆ ಮಾಡಿ, ಮೂಲ ಸಾಮರ್ಥ್ಯಗಳನ್ನು ಅನುಕೂಲಿಸುವುದು ಸದ್ಯದ ಸವಾಲಾಗಿದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆಗಿಂದಾಗ್ಗೆ ಸೂಕ್ತ ಸಲಹೆ –ಸೂಚನೆಗಳನ್ನು ನೀಡುತ್ತಾ ನಮ್ಮೊಂದಿಗಿದ್ದಾರೆ. ಸಮುದಾಯ ಮತ್ತು ಎಸ್‌ಡಿಎಂಸಿಯವರ ಪೂರ್ಣ ಪ್ರಮಾಣದ ಬೆಂಬಲವಿದೆ ಎನ್ನುತ್ತಾರೆ ಎಮ್ಮೆಮಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಶಿಕ್ಷಕಿ ಕೆ.ಜಿ.ರಮ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.