ಶನಿವಾರ, ಫೆಬ್ರವರಿ 4, 2023
28 °C
ಕೂಡಿಗೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮ ರಥೋತ್ಸವ l ವಿಶೇಷ ಪೂಜೆ, ಅನ್ನಸಂತರ್ಪಣೆ

ಎಲ್ಲೆಡೆ ಶ್ರದ್ಧಾಭಕ್ತಿಯ ಷಷ್ಠಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಶ್ರದ್ಧಾಭಕ್ತಿಯಿಂದ ಷಷ್ಠಿ ಉತ್ಸವ ನೆರವೇರಿತು. ಜಿಲ್ಲೆಯ ಎಲ್ಲ ಸುಬ್ರಹ್ಮಣ್ಯ ದೇಗುಲಗಳಲ್ಲಿ, ನಾಗರಕಲ್ಲುಗಳ ಬಳಿ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಕೂಡಿಗೆಯಲ್ಲಿ ಉದ್ಭವ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಬ್ರಹ್ಮರಥೋತ್ಸವ ಜರುಗಿದರೆ, ಗೋಣಿಕೊಪ್ಪಲು ಸಮೀಪದ ಹರಿಹರ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಜೃಂಭಣೆಯ ಉತ್ಸವ ನೆರವೇರಿತು.

ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದಲ್ಲಿ ಸಾವಿರಾರು ಭಕ್ತರು ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ಇಲ್ಲಿ ಸಾಲುಗಟ್ಟಿ ನಿಂತು ಸುಬ್ರಹ್ಮಣ್ಯೇಶ್ವರ ವಿಗ್ರಹಕ್ಕೆ ಹಾಲು, ಎಳನೀರಿನ ಅಭಿಷೇಕ ಮಾಡಿದರು. ಭಕ್ತ ಭಕ್ತರಿಗೆಲ್ಲ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ಓಂಕಾರೇಶ್ವರ ದೇಗುಲದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಬ್ರಹ್ಮ ರಥೋತ್ಸವ

ಕುಶಾಲನಗರ: ಉತ್ತರ ಕೊಡಗಿನ ಕಾವೇರಿ ಮತ್ತು ಹಾರಂಗಿ ನದಿಗಳ ಪವಿತ್ರ ಸಂಗಮ ಕ್ಷೇತ್ರ ಕೂಡಿಗೆ ಗ್ರಾಮದ ಉದ್ಭವ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆದ 54ನೇ ವಾರ್ಷಿಕ ಬ್ರಹ್ಮರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥವನ್ನು
ಎಳೆದರು.

ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ನವೀನ್ ಭಟ್ ಹಾಗೂ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಿದವು.

ಕೂಡಿಗೆಯ ಟಾಟಾ ಕಾಫಿ ಕಂಪನಿಯ ಕುಶಾಲನಗರ ಕಾಫಿ ಸಂಸ್ಕರಣಾ ಕೇಂದ್ರದ ವ್ಯಾಪ್ತಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯೊಂದಿಗೆ ವೈಭವಯುತವಾಗಿ ಜರುಗಿದ ವಾರ್ಷಿಕ ರಥೋತ್ಸವಕ್ಕೆ ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿ ಭಾಗದಿಂದ ಹೆಚ್ಚಿನ ಜನರು ಬಂದಿದ್ದರು.

ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಮಧ್ಯಾಹ್ನ 12-30ಕ್ಕೆ ದೇವರಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ, ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿ ಮಂಗಳವಾದ್ಯಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಭಕ್ತಾದಿಗಳು ರಥವನ್ನು ಸುಬ್ರಹ್ಮಣ್ಯ ದೇವಸ್ಥಾನದಿಂದ ಜಯಘೋಷ ಗಳೊಂದಿಗೆ ಕೂಡ್ಲೂರಿನ ಬಸವೇಶ್ವರ ದೇವಸ್ಥಾನದವರೆಗೆ ಎಳೆದರು. ಭಕ್ತರು ಈಡುಗಾಯಿ ಹಾಗೂ ಹಣ್ಣು ಜವನ ಎಸೆದರು. ಅಯ್ಯಪ್ಪಸ್ವಾಮಿ ವ್ರತಾಚರಣೆಯ ಭಕ್ತರು ರಥದ ಮುಂದೆ ಕರ್ಪೂರದ ಆರತಿ ಬೆಳಗಿದರು. ಸರತಿ ಸಾಲಿನಲ್ಲಿ ತೆರಳಿದ ಭಕ್ತರು ದೇವರ ದರ್ಶನ ಪಡೆದರು.

ಹರಕೆ ಹೊತ್ತ ಭಕ್ತರು ಸರ್ಪದೋಷ ಮತ್ತು ಕರ್ಮದೋಷ ಪರಿಹಾರಕ್ಕಾಗಿ ಬೆಳ್ಳಿಯ ನಾಗರ ಸೆಡೆಯನ್ನು ದೇವರಿಗೆ ಸಮರ್ಪಿಸಿದರು. ಸುಬ್ರಹ್ಮಣ್ಯ ಭಕ್ತ ಮಂಡಳಿ ಪ್ರಯೋಜಕತ್ವದ ಮಂಗಳೂರಿನ ಶಾರದ ಪುಲಿ ತಂಡದ ವರಿಂದ ಅತ್ಯಾಕರ್ಷಕ ಚಂಡೇ ವಾದ್ಯ, ಹುಲಿವೇಷ, ಕೀಲುಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡ ಗಳ ಪ್ರದರ್ಶನ ಜನರ ಗಮನ ಸೆಳೆಯಿತು. ಅನ್ನಸಂತರ್ಪಣೆಯೂ ನಡೆಯಿತು.

ದೇವಸ್ಥಾನದ ಅಂಗಳದಲ್ಲಿ ಸೇರಿದ ಜಾತ್ರೆ ಜನರ ಗಮನ ಸೆಳೆಯಿತು. ರಥೋತ್ಸವದ ಅಂಗವಾಗಿ ದೇವಸ್ಥಾನ ಮತ್ತು ಗ್ರಾಮವನ್ನು ವಿದ್ಯುತ್ ದೀಪ ಹಾಗೂ ಹಸಿರು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಾತ್ರಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಮದ್ದು ಗುಂಡು ಹಾಗೂ ಬಾಣ ಬಿರುಸುಗಳ ಪ್ರದರ್ಶನ ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ರೋಷನ್ ಸೋಮಯ್ಯ, ಕಾರ್ಯದರ್ಶಿ ಎಸ್.ಎಂ. ಮಾದಯ್ಯ, ಸಹ ಕಾರ್ಯದರ್ಶಿ ಶಂಮತ್ ರೈ ಸಮಿತಿ ಸದಸ್ಯರು ಇದ್ದರು.

ನಾಗತಂಬಿಲ ಸೇವೆ

ವಿರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮ‌ದ ಪಾಲೇಟ್ ಮಕ್ಕಿಯ ನಾಗದೇವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.

ಮುಂಜಾನೆಯಿಂದಲೇ ಅರ್ಚಕರ ನೇತೃತ್ವದಲ್ಲಿ ನಾಗತಂಬಿಲ ಸೇವೆ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ, ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ ಯೊಂದಿಗೆ ಮಹಾ ಮಂಗಳಾರತಿಯನ್ನು ಮಾಡಲಾಯಿತು.

ಭಕ್ತರಿಗೆ ತೀರ್ಥಪ್ರಸಾದ ವಿತರಣೆ ಬಳಿಕ ಅನ್ನದಾನ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಅರ್ಚಕ ವೇಣು ಗೋಪಾಲ್ ಭಟ್ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು