ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಗ್ರಾಮೀಣ ರಸ್ತೆ ಗುಂಡಿಮಯ

ರೈತಾಪಿ, ಗ್ರಾಮಸ್ಥರ ಪರದಾಟ, ಯುವಕರ ವಲಸೆ; ಅಭಿವೃದ್ಧಿ ಮರೀಚಿಕೆ
Published 5 ನವೆಂಬರ್ 2023, 4:06 IST
Last Updated 5 ನವೆಂಬರ್ 2023, 4:06 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯಾಗದಿರುವುದು ಇಲ್ಲಿನ ಜನರು ಸಂಕಷ್ಟಪಡುವಂತೆ ಮಾಡಿದೆ.

ಕೃಷಿ ಪ್ರಧಾನ ಜಿಲ್ಲೆ, ಗುಡ್ಡಗಾಡು ಪ್ರದೇಶ, ಪ್ರತಿಮನೆಗೂ ಮನೆಗೂ ಕಿ.ಮೀ. ದೂರ ಇರುತ್ತದೆ. ಕಾಫಿ, ಕಾಳುಮೆಣಸು, ಭತ್ತ, ಅಡಿಕೆ, ಜೋಳ ಮುಖ್ಯ ಬೆಳೆಯಾಗಿದೆ. ಗ್ರಾಮೀಣ ಜನರಿಗೆ ಜಮೀನಿಗೆ ತೆರಳಲು ಮತ್ತು ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಮರ್ಪಕ ರಸ್ತೆಗಳಿಲ್ಲ.

ಮಳೆ ರಭಸಕ್ಕೆ ರಸ್ತೆಗಳು ಗುಂಡಿಮಯವಾಗುತ್ತವೆ. ದುರಸ್ತಿ ಕಾಮಗಾರಿಗಳು ನಡೆಯುವುದಿಲ್ಲ. ಅಲ್ಪಸ್ವಲ್ಪ ಹಣ ಬಿಡುಗಡೆಯಾದರೂ ಕಳಪೆ ಕಾಮಗಾರಿಯಿಂದ ವರ್ಷದಲ್ಲೇ ಗುಂಡಿಬಿದ್ದು ಹಾಳಾಗುತ್ತವೆ. ಗುಣಮಟ್ಟದ ರಸ್ತೆ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಗ್ರಾಮೀಣ ಜನರ ದೂರು.

ತಾಲ್ಲೂಕಿನ ಅನೇಕ ಗ್ರಾಮಗಳಿಗೆ ರಸ್ತೆ ಇಲ್ಲದೆ. ಆರ್ಥಿಕವಾಗಿ ಹಿಂದುಳಿದಿವೆ. ಯುವಜನರು ಕುಟುಂಬಗಳು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ವೃದ್ಧರೂ ಮಾತ್ರ ಗ್ರಾಮದಲ್ಲಿ ವಾಸವಿದ್ದು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಮಂಕ್ಯಾ, ಕಿಕ್ಕರಳ್ಳಿ ಸೇರಿದಂತೆ ಉಪಗ್ರಾಮಗಳಿಗೆ ರಸ್ತೆಯಾಗಿಲ್ಲ. ಕಚ್ಚಾ ರಸ್ತೆಯಲ್ಲೇ ಸಂಚರಿಸಬೇಕು. ಮಳೆಗಾಲದ ನಾಲ್ಕು ತಿಂಗಳ ಬದುಕು ಯಾತ ನಾಮಯವಾಗಿರುತ್ತದೆ ಎಂಬುದು ನಿವಾಸಿಗಳ ಗೋಳು.

ಶಾಂತಳ್ಳಿ ಹೋಬಳಿಯ ಗ್ರಾಮ ರಸ್ತೆಗಳು ಮಳೆಯಿಂದ ಹಾಳಾಗುತ್ತವೆ. ಮಲ್ಲಳ್ಳಿ ಜಲಪಾತಕ್ಕೆ ಪ್ರತಿದಿನ ಪ್ರವಾಸಿಗರು ಬರುತ್ತಾರೆ. ಜಲಪಾತದಿಂದ ಒಂದೂವರೆ ಕಿ.ಮೀ. ದುರ್ಗಮ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ತೆರಳಿದರೆ ಮಲ್ಲಳ್ಳಿ ಗ್ರಾಮ ಸಿಗುತ್ತದೆ. ನಾಲ್ಕೈದು ದಶಕಗಳಿಂದ ರಸ್ತೆಗಾಗಿ ಗ್ರಾಮಸ್ಥರು ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ.  ಜನಪ್ರತಿನಿಧಿಗಳ ಕಿವಿ ಕೇಳಿಸುತ್ತಿಲ್ಲ. ನಾಡ್ನಳ್ಳಿ, ಬೆಂಕಳ್ಳಿ ಗ್ರಾಮಸ್ಥರು ಡಾಂಬರು ರಸ್ತೆ ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ವೆಂಕಟೇಶ್‌ ಹೇಳಿದರು.

ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಮಂಕ್ಯಾ, ಕಿಕ್ಕರಳ್ಳಿ, ಸೂರ್ಲಬ್ಬಿ ಪಕ್ಕದ ಗ್ರಾಮಗಳಲ್ಲಿ ರಸ್ತೆಯಿಲ್ಲ. ಮಳೆಗಾಲದ ನಾಲ್ಕು ತಿಂಗಳ ಕೆಸರುಮಯ ರಸ್ತೆಯಲ್ಲೇ ತಿರುಗಾಡಬೇಕು. ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡ್ನಳ್ಳಿ, ಬೆಂಕಳ್ಳಿ, ಇನಕನಹಳ್ಳಿ, ತಡ್ಡಿಕೊಪ್ಪಕೊಪ್ಪ ಗ್ರಾಮಗಳ ನಿವಾಸಿಗಳು ಡಾಂಬರು ರಸ್ತೆಯನ್ನು ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ವಕೀಲ ಜಯೇಂದ್ರ ತಿಳಿಸಿದರು.

ಅಬ್ಬೂರುಕಟ್ಟೆ, ಅರೆಯೂರು, ಹೊಸಳ್ಳಿ ರಸ್ತೆ ಕೆಟ್ಟು ದಶಕಗಳೇ ಕಳೆದಿವೆ. ಕಲ್ಲುಗಣಿಗಾರಿಕೆಯ ಲಾರಿ ಸಂಚರಿಸಿ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರತಿಭಟನೆ ಮಾಡಿದರೂ ರಸ್ತೆ ಡಾಂಬರೀಕರಣಗೊಂಡಿಲ್ಲ. ಕಾಡಾನೆಗಳ ಹಾವಳಿಯಿದೆ. ಬಸ್‌ಗಳು ಬರದ  ಶಾಲೆ, ಕಾಲೇಜು ವಿದ್ಯಾರ್ಥಿಗಳು ಭಯದಲ್ಲೇ ಕಾಲ್ನಡಿಗೆಯಲ್ಲಿ ತೆರಳಬೇಕು ಎಂದು ರೈತರು ಅಕ್ರೋಶ ವ್ಯಕ್ತಪಡಿಸಿದರು.

ಸುಳಿಮಳ್ತೆ ರಸ್ತೆ ಡಾಂಬಂರೀಕರಣದ ಬೇಡಿಕೆಯ ಅರ್ಜಿಗಳನ್ನು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿ ಸಾಕಾಗಿದೆ. ಹಾಲಿ ಶಾಸಕರಿಗೂ ಮನವಿ ನೀಡಲಾಗಿದೆ. ಭರವಸೆ ಈಡೇರಿಕೆಗಾಗಿ ಕಾಯುತ್ತಿದ್ದೇವೆ ಎಂದು ಸ್ಥಳೀಯರು ಹೇಳಿದರು.

ಯಡೂರು ಐತಿಹಾಸಿಕಗ್ರಾಮ. ಪ್ರಗತಿಪರ ಕೃಷಿಕರೆ ಹೆಚ್ಚಿದ್ದಾರೆ. ಭತ್ತ, ಕಾಫಿ, ಕಾಳುಮೆಣಸು ಬೆಳೆಯುತ್ತಾರೆ. ಆದರೆ ಗ್ರಾಮದೊಳಗಿನ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಡಾಂಬರ್‌ ಕಂಡಿಲ್ಲ. ಇವತ್ತಿಗೂ ಗುಂಡಿಬಿದ್ದ ರಸ್ತೆಯಲ್ಲಿ ಓಡಾಡುವಂಥ ದುಸ್ಥಿತಿ ಇದೆ. ಸುತ್ತಲಿನ ಗ್ರಾಮಗಳಿಗೆ ರಸ್ತೆಗಳಾಗಿವೆ. ನಮ್ಮೂರಿನ ರಸ್ತೆಗಳಿಗೆ ಯಾಕೆ ಅನುದಾನ ನೀಡುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಸತೀಶ್ ದೂರಿದರು.

ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದೊಳಗಿನ ರಸ್ತೆ ಕೆಸರುಮಯವಾಗಿ ವಿದ್ಯಾರ್ಥಿಗಳು ಪರದಾಡುತ್ತಿರುವುದು.
ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದೊಳಗಿನ ರಸ್ತೆ ಕೆಸರುಮಯವಾಗಿ ವಿದ್ಯಾರ್ಥಿಗಳು ಪರದಾಡುತ್ತಿರುವುದು.

ತಾಲ್ಲೂಕಿನ ರಸ್ತೆಗಳ ದುರಸ್ತಿ ಡಾಂಬರೀಕರಣ ಆಗಿಲ್ಲ. ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.

-ಕೆ.ಎಂ.ದಿನೇಶ್ ಅಧ್ಯಕ್ಷ ರಾಜ್ಯ ರೈತಸಂಘ ತಾಲ್ಲೂಕು ಘಟಕ.

ಮಂಕ್ಯಾ ಗ್ರಾಮಕ್ಕೆ ರಸ್ತೆ ಇಲ್ಲದೆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮಂಕ್ಯಾ ಗ್ರಾಮಕ್ಕೆ ರಸ್ತೆ ನಿರ್ಮಿಸಿದ್ದರೆ ರೈತರು ಸದೃಢರಾಗಿ ಎಲ್ಲರಂತೆ ಬದುಕುತ್ತಿದ್ದರು. ಆರ್ಥಿಕ ಸಂಕಷ್ಟದಿಂದ ಮನೆಗಳು ಬೀಳುವ ಹಂತದಲ್ಲಿವೆ. ಸರ್ವ ಋತು ರಸ್ತೆ ಬೇಕಿದೆ.

-ಅಕ್ಷಿತ್ ಕೃಷಿಕ ಮಂಕ್ಯ ಗ್ರಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT